ಧಾರವಾಡ: ಪೋಷಕರಿಂದ ಮದುವೆಗೆ ಒತ್ತಾಯ, ಶಿಕ್ಷಣ ಮುಂದುವರಿಸಲು ಬಾಲಕಿಗೆ ಹೈಕೋರ್ಟ್ ಬೆಂಬಲ

ಬಾಲಕಿ ತನ್ನ ವಿದ್ಯಾಭ್ಯಾಸ ಮುಂದುವರಿಸುವುದನ್ನು ಖಾತರಿಪಡಿಸಬೇಕು. ಜೊತೆಗೆ ಹದಿನೇಳೂವರೆ ವರ್ಷದ ಆಕೆಯನ್ನು ಗದಗದಲ್ಲಿರುವ ಬಾಲಕಿಯರ ಕೇಂದ್ರಕ್ಕೆ ಕಳುಹಿಸಿಕೊಡುವಂತೆ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ...
ಹೈಕೋರ್ಟ್
ಹೈಕೋರ್ಟ್

ಧಾರವಾಡ: ಬಾಲಕಿ ತನ್ನ ವಿದ್ಯಾಭ್ಯಾಸ ಮುಂದುವರಿಸುವುದನ್ನು ಖಾತರಿಪಡಿಸಬೇಕು. ಜೊತೆಗೆ ಹದಿನೇಳೂವರೆ ವರ್ಷದ ಆಕೆಯನ್ನು ಗದಗದಲ್ಲಿರುವ ಬಾಲಕಿಯರ ಕೇಂದ್ರಕ್ಕೆ ಕಳುಹಿಸಿಕೊಡುವಂತೆ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ಬಾಲಕಿಯ ತಾಯಿ ಶಾರವ್ವ ಲಮಾಣಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ತನ್ನ ಪುತ್ರಿಯನ್ನು ಅಪಹರಿಸಲಾಗಿದೆ ಎಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಾಯಿ ದೂರು ನೀಡಿದ್ದರು. ಆದರೆ, ಪೊಲೀಸರು ಕಾನೂನು ಪ್ರಕಾರ ಪ್ರಕರಣ ದಾಖಲಿಸಿಲ್ಲ. ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಪುತ್ರಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ ಎಂದು ಬಾಲಕಿಯ ತಾಯಿ ತಿಳಿಸಿದ್ದಾರೆ. 

ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು “ಬಾಲಕಿ ಶಿಕ್ಷಣ ಮುಂದುವರಿಸುವ ಇಚ್ಛೆ ಹೊಂದಿದ್ದಾಳೆ. ಆದರೆ, ಆಕೆಯ ಪೋಷಕರು ಆಕೆ ಶಿಕ್ಷಣ ತೊರೆದು, ವಿವಾಹವಾಗಬೇಕು ಎಂದು ಬಯಸಿದ್ದಾರೆ. ಇದನ್ನು ಒಪ್ಪದ ಬಾಲಕಿಯು ಸ್ವಇಚ್ಛೆಯಿಂದ ಗೋವಾಕ್ಕೆ ತೆರಳಿ ಅಲ್ಲಿ ಸಹೋದರನ ಜೊತೆ ನೆಲೆಸಿದ್ದಳು” ಎಂದು ಕೋರ್ಟ್ ತಿಳಿಸಿದರು.

ಇನ್ನು ಮುಂದೆ ಪುತ್ರಿಗೆ ವಿವಾಹವಾಗುವಂತೆ ಅಥವಾ ಶಿಕ್ಷಣ ನಿಲ್ಲಿಸುವಂತೆ ಪೀಡಿಸುವುದಿಲ್ಲ. ಆಕೆಯನ್ನು ತಮ್ಮ ಜೊತೆ ಕಳುಹಿಸುವಂತೆ ಪೀಠಕ್ಕೆ ಪೋಷಕರು ಮೊರೆ ಇಟ್ಟರು. ಆದರೆ, ಇದನ್ನು ಒಪ್ಪಲು ಬಾಲಕಿ ಸಿದ್ಧವಿರಲಿಲ್ಲ. ಬದಲಾಗಿ ಪುನರ್ವಸತಿ ಕೇಂದ್ರಕ್ಕೆ ತೆರಳುವುದಾಗಿ ತಿಳಿಸಿದಳು. 

ಹೀಗಾಗಿ, ಆಕೆಯ ಭದ್ರತೆ ಮತ್ತು ಕಲ್ಯಾಣದ ದೃಷ್ಟಿಯಿಂದ ಗದಗ ಜಿಲ್ಲೆಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಕಳುಹಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿತು. ಬಾಲಕಿಯು ಪ್ರೌಢಾವಸ್ಥೆ ತಲುಪುವವರೆಗೆ ಅಥವಾ ಆಕೆಯು ತನ್ನ ಪೋಷಕರ ಜೊತೆ ತೆರಳುವ ಮನಸ್ಸು ಮಾಡುವವರೆಗೆ ಆಕೆಯನ್ನು ಇಟ್ಟುಕೊಳ್ಳನಬೇಕು. ಆಕೆ ಶಿಕ್ಷಣ ಮುಂದುವರಿಸುವುದನ್ನು ಖಾತರಿಪಡಿಸುವಂತೆ ಬಾಲಕಿಯರ ಬಾಲ ಮಂದಿರಕ್ಕೆ ಹೈಕೋರ್ಟ್ ಪೀಠ ಆದೇಶಿಸಿದೆ. 

ಬಾಲಕಿಯು ತಮ್ಮ ಪೋಷಕರ ಜೊತೆ ತೆರಳಲು ಬಯಸಿದರೆ ಆಕೆಯ ರಕ್ಷಣೆ ಮತ್ತು ಭವಿಷ್ಯದ ಖಾತರಿ ಪಡೆದು ಆಕೆಯನ್ನು ಪೋಷಕರ ಜೊತೆ ಕಳುಹಿಸಿಕೊಡುವಂತೆ ಬಾಲ ಮಂದಿರಕ್ಕೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೇ, ತನ್ನ ಪೋಷಕರನ್ನು ನೋಡುವ ಇಚ್ಛೆಯನ್ನು ಬಾಲಕಿ ವ್ಯಕ್ತಪಡಿಸಿದರೆ ಆಕೆಯ ಪೋಷಕರಿಗೆ ಅಲ್ಲಿಗೆ ಭೇಟಿ ನೀಡಲು ಅವಕಾಶ ಮಾಡಿಕೊಡುವಂತೆ ಬಾಲ ಪ್ರಾಧಿಕಾರಕ್ಕೆ ಪೀಠ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com