ಚಾಮರಾಜನಗರಕ್ಕೆ ಬರದೇ ಇರುತ್ತಿದ್ದರೆ ನನ್ನ ಕರ್ತವ್ಯ ಲೋಪವಾಗುತ್ತಿತ್ತು: ಸಿಎಂ ಬಸವರಾಜ ಬೊಮ್ಮಾಯಿ
ಚಾಮರಾಜನಗರ; ಜಿಲ್ಲೆಗೆ ಬರುವುದು ನನ್ನ ಕರ್ತವ್ಯ. ನನ್ನ ಕೆಲಸ, ಚಾಮರಾಜನಗರದ ಜನಕಲ್ಯಾಣ ಮಾಡುವುದು ನನ್ನ ಆದ್ಯ ಕರ್ತವ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ನಿನ್ನೆ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಯೋಜಿಸಿದ್ದ 450 ಹಾಸಿಗೆಯ ಬೋಧನಾ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಅವರೊಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ರಾಜ್ಯಪಾಲರಾದ ಥ್ಯಾವರ್ ಚಂದ್ ಗೆಹ್ಲೊಟ್ ಅವರು ಕೂಡ ಭಾಗಿಯಾಗಿದ್ದರು.
ಉದ್ಘಾಟನೆ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ರಾಜ್ಯದ ಮುಖ್ಯಮಂತ್ರಿಗಳಾದವರು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡುವ ಸಂಬಂಧ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಆದರೆ ನಾನು ಇಂದು ಬರದೇ ಇದ್ದಿದ್ದರೆ ನನ್ನ ಕರ್ತವ್ಯಲೋಪವಾಗುತ್ತಿತ್ತು ಎಂದಿದ್ದಾರೆ.
ನಾನು ನನ್ನ ಕರ್ತವ್ಯಲೋಪ ಮಾಡಲು ಸಿದ್ಧನಿಲ್ಲ. ಅವರವರ ವಿಚಾರ, ನಂಬಿಕೆ ಅವರವರಿಗೆ ಬಿಟ್ಟಿದ್ದು, ಆದರೆ ನಾನು ಒಳ್ಳೆಯ ಮನಸ್ಸಿನಿಂದ ಯಾವುದೇ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ಮಾತಿನಲ್ಲಿ ನಂಬಿಕೆಯಿಟ್ಟವನು. ದೇವರ ಸೃಷ್ಟಿಯಲ್ಲಿ ಒಂದು ಗಳಿಗೆಗಿಂತ ಇನ್ನೊಂದು ಗಳಿಗೆ ಉತ್ತಮವಾಗಿರುತ್ತದೆ. ದೇವರ ಸೃಷ್ಟಿಯಲ್ಲಿ ಒಳ್ಳೆಯ ಸಮಯ-ಕೆಟ್ಟ ಸಮಯ ಎಂಬುದಿಲ್ಲ ಎಂದರು.
ಸಂಕುಚಿತ ಮನೋಭಾವದಿಂದ ಹೊರಗೆ ಬಂದಾಗ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಚಾಮರಾಜನಗರ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ನನ್ನಿಂದಾದ ಕೊಡುಗೆ, ಸೇವೆ ಮಾಡುತ್ತೇನೆ, ಮುಂದೆ ಕೂಡ ಸಂದರ್ಭ ಬಂದಾಗಲೆಲ್ಲ ಜಿಲ್ಲೆಗೆ ಭೇಟಿ ನೀಡುತ್ತಿರುತ್ತೇನೆ ಎಂದು ಜನತೆಗೆ ಆಶ್ವಾಸನೆ ನೀಡಿದರು. ನೆರೆದಿದ್ದ ಜನಸಮೂಹ ಮುಖ್ಯಮಂತ್ರಿ ಬೊಮ್ಮಾಯಿ ಪರ ಘೋಷಣೆ ಕೂಗಿದರು.
ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಮುಖ್ಯಮಂತ್ರಿ ಪದವಿ ಕಳೆದುಹೋಗುತ್ತದೆ ಎಂಬ ನಂಬಿಕೆ ಸಾಕಷ್ಟಿದ್ದು, ಅನೇಕ ಮುಖ್ಯಮಂತ್ರಿಗಳು ಅಧಿಕಾರದಲ್ಲಿರುವಾಗ ಹಿಂದೆ ಇಲ್ಲಿಗೆ ಭೇಟಿ ನೀಡಿರಲಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆ ನಂಬಿಕೆಯನ್ನು ತೊಡೆದುಹಾಕಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ