"ಮಾತಾಡ್ ಮಾತಾಡ್ ಕನ್ನಡ" ಮನೆಮನ ತಲುಪಿಸಲು ಮುಂದಾದ ಸುನೀಲ್ ಕುಮಾರ್

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗುತ್ತಿದ್ದಂತೆಯೇ ಸುನೀಲ್ ಕುಮಾರ್,ಇಲಾಖೆಗೆ ಹೊಸರೂಪ ನೀಡಲು ಮುಂದಾಗಿದ್ದು, ಇದರ ಪ್ರಮುಖ ಭಾಗವಾಗಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಹಿಂದಿನಂತೆ ಕೇವಲ‌ ನವೆಂಬರ್‌ 1ಕ್ಕೆ ಮಾತ್ರ ಸೀಮಿತಗೊಳಿಸಿ ಚರ್ವಿತಚರ್ವಾಣ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗುತ್ತಿದ್ದಂತೆಯೇ ಸುನೀಲ್ ಕುಮಾರ್,ಇಲಾಖೆಗೆ ಹೊಸರೂಪ ನೀಡಲು ಮುಂದಾಗಿದ್ದು, ಇದರ ಪ್ರಮುಖ ಭಾಗವಾಗಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಹಿಂದಿನಂತೆ ಕೇವಲ‌ ನವೆಂಬರ್‌ 1ಕ್ಕೆ ಮಾತ್ರ ಸೀಮಿತಗೊಳಿಸಿ ಚರ್ವಿತಚರ್ವಾಣ ಮಾಡದೇ ಕನ್ನಡ ರಾಜ್ಯೋತ್ಸವವನ್ನು ಉತ್ಸವದಂತೆ ರಾಜ್ಯ ಸೇರಿದಂತೆ ವಿದೇಶಗಳಲ್ಲಿಯೂ ಇದರ ಘಮ ಪಸರಿಸಲು ಹೊರಟಿದ್ದಾರೆ.

ಹೌದು, ಈ ಬಾರಿ "ಮಾತಾಡ್ ಮಾತಾಡ್ ಕನ್ನಡ" ವೆನ್ನುವ ಅಭಿಯಾನದಡಿ ನಮ್ಮ ಕನ್ನಡ ಮತ್ತಷ್ಟು ಶೋಭೆಗೊಳ್ಳಲಿದೆ.

ಸುನೀಲ್ ಕುಮಾರ್ ಸಚಿವರಾದ ಆರಂಭದಲ್ಲಿಯೇ ಇಲಾಖೆಯ ಯಂತ್ರವನ್ನು‌ ಚುರುಕುಗೊಳಿಸಿ ಆರಂಭದಲ್ಲಿಯೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯ ಮಾದರಿಯನ್ನು ಬದಲಾಯಿಸಿ ಜನರಿಂದಲೇ ಪುರಸ್ಕೃತರ ಆಯ್ಕೆ ನಡೆಸಲು‌ ಪಾರದರ್ಶಕ ಹಾದಿಯನ್ನು ಹಾಕಿಕೊಟ್ಟರು. ಇದೀಗ ಮುಂದುವರೆದ ಭಾಗವಾಗಿ ಕನ್ನಡ ರಾಜ್ಯೋತ್ಸವ ಎಲ್ಲರ ಮನೆಮನ ತಲುಪಿಸಲು ಮುಂದಾಗಿದ್ದಾರೆ.

ಈ ಬಾರಿ ಒಂದು ವಾರಗಳ ಕಾಲ ಕನ್ನಡ ರಾಜ್ಯೋತ್ಸವ ನಡೆಯಲಿದ್ದು, ಕನ್ನಡಕ್ಕಾಗಿ ನಾವು ಶೀರ್ಷಿಕೆಯಡಿಯಲ್ಲಿ, "ಮಾತಾಡ್ ಮಾತಾಡ್ ಕನ್ನಡ ಅಭಿಯಾನ" ನಡೆಯಲಿದೆ.

ಅಕ್ಟೋಬರ್ 24 ರಿಂದ 30ರವರೆಗೆ ಒಂದು ವಾರಗಳ ಕಾಲ ಅಭಿಯಾನ ನಡೆಯಲಿದ್ದು, ಅಭಿಯಾನದ ಹಿನ್ನೆಲೆಯಲ್ಲಿ 6 ರೀತಿಯ ಕಾರ್ಯಕ್ರಮ ರೂಪಿಸಲಾಗಿದೆ. 

ಈ ಕುರಿತು ಮಾಹಿತಿ ನೀಡಿರುವ ಸಚಿವರು, ಕನ್ನಡವನ್ನು ಎಲ್ಲ ವ್ಯಕ್ತಿಗಳಿಗೆ, ಮನೆಗಳಿಗೆ ತಲುಪಿಸಬೇಕು ಎಂಬ ಉದ್ದೇಶ ಹೊಂದಲಾಗಿದೆ.‌ ಭಾಷೆಯ ಮೂಲಕ ಸಂಸ್ಕೃತಿ, ಉಡುಗೆ, ತೊಡುಗೆ, ಆಹಾರ ಪದ್ಧತಿ ಮೂಲಕ ವ್ಯಕ್ತಿತ್ವ ನಿರ್ಮಾಣ ಆಗಲಿದೆ. ಜಾಗತಿಕರಣದ ಪ್ರಭಾವದ ನಡುವೆ ಸಂಭ್ರಮಾಚರಣೆ ಆಚರಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ. 

ಅಭಿಯಾನದ ಹಿನ್ನೆಲೆಯಲ್ಲಿ ಲಾಂಛನ, ಕನ್ನಡದ ಹಿರಿಯ ಸಾಧಕರ ನುಡಿಗಳನ್ನು ಒಳಗೊಂಡ ಪ್ರೊಮೊ ಬಳಸುವ ಮೂಲಕ ಕನ್ನಡಪರ ವಾತಾವರಣವನ್ನು ನಾಡಿನಾದ್ಯಂತ ವಾತಾವರಣವನ್ನು ಮೂಡಿಸಲಾಗುತ್ತಿದೆ. ನಾಡಿನ ಎಲ್ಲರೂ ಕನ್ನಡ ಬಳಸುವುದು, ಪ್ರತಿಯೊಬ್ಬರಲ್ಲೂ ಕನ್ನಡ ಭಾಷೆ ಮಹತ್ವವನ್ನು ತಿಳಿಸುವ ಜತೆ ಅನ್ಯ ಭಾಷೆ ಪದಗಳನ್ನು ಬಳಸದೇ ಕನ್ನಡ ಮಾತನಾಡಲು ಪೂರಕ ವಾತಾವರಣ ನಿರ್ಮಿಸುವುದು ಸೇರಿದಂತೆ ಒಂದು ವಾರ ಕಾಲ ಸಂಪೂರ್ಣ ಕನ್ನಡಮಯ ವಾತಾವರಣ ಸೃಷ್ಟಿಸುವ ಮೂಲಕ ಕನ್ನಡಕ್ಕಾಗಿ ನಾವು ಅಭಿಯಾನ ನಡೆಸಲಾಗುತ್ತಿದೆ ಎಂದು ವಿವರಿಸಿದರು.

6 ಕಾರ್ಯಕ್ರಮಗಳು ಇಂತಿವೆ...
ನಾಟಕ, ನೃತ್ಯ, ಸಂಗೀತ ಕಾರ್ಯಕ್ರಮ

ರಾಜ್ಯದ ಐದು ರಂಗಾಯಣಗಳು ಹಾಗೂ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳ ಸಹಯೋಗದಲ್ಲಿ ರಾಜ್ಯದ ಆಯ್ದ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಕರ್ನಾಟಕದ ಹಿರಿಮೆ ಬಿಂಬಿಸುವ ನಾಟಕಗಳು, ನೃತ್ಯ, ಸಂಗೀತ ಕಾರ್ಯಕ್ರಮಗಳನ್ನು ಒಳಗೊಂಡ ಕನ್ನಡ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ. ವಾರ್ಡ್‌ಗಳಲ್ಲಿ ಐಟಿಬಿಟಿ ಸಂಸ್ಥೆಗಳ ಆವರಣಗಳಲ್ಲಿ ಮೆಟ್ರೋ, ವಿಧಾನಸೌಧ, ವಿವಿಧ ಕಾರ್ಖಾನೆ ಆವರಣದಲ್ಲಿ ಇದೇ ತೆರನಾದ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಾಮೂಹಿಕ ಕನ್ನಡ ಗೀತೆ ಗಾಯನ
ರಾಜ್ಯಾದ್ಯಂತ ಅಕ್ಟೋಬರ್ 28 ರಂದು ಬೆಳಗ್ಗೆ ಹನ್ನೊಂದು ಗಂಟೆಗೆ ಒಂದು ಲಕ್ಷ ಕಂಠಗಳಲ್ಲಿ ಕನ್ನಡದ ಮೂರು ಗೀತೆಗಳ ಗಾಯನ ನಡೆಯಲಿದೆ. ಇದಕ್ಕೆ ಈಗಾಗಲೇ ಮೂರು ಕನ್ನಡದ ಗೀತೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು...
ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆ ಕಾಲೇಜು, ವಿಶ್ವವಿದ್ಯಾಲಯ, ತಾಲೂಕು, ಗ್ರಾಮ ಮಟ್ಟದಲ್ಲಿ ಏಕಕಾಲಕ್ಕೆ ನಡೆಯಲಿದೆ. ವಿಧಾನಸೌಧ ಮೆಟ್ಟಿಲುಗಳ ಮೇಲೆ ಸಿಬ್ಬಂದಿಯಿಂದ, ಅಧಿಕಾರಿಗಳಿಂದ ಗಾಂಧಿ ಪ್ರತಿಮೆ ಬಳಿ ಗೀತಗಾಯನ ನಡೆಯಲಿದೆ.

ಕನ್ನಡದಲ್ಲಿ ಮಾತು ಮತ್ತು ಬರವಣಿಗೆ
ಕನ್ನಡ ಭಾಷೆ ಬೆಳೆಸುವ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಎಲ್ಲೆಡೆ ಕನ್ನಡ ಬಳಸುವಂತೆ ಮೊಬೈಲ್‌ನಲ್ಲಿ ಕನ್ನಡದಲ್ಲೇ ಸಂದೇಶ ಕಳಿಸುವುದು, ಜಾಲತಾಣದಲ್ಲಿಯೂ ಕನ್ನಡವನ್ನೇ ಬಳಸುವುದು‌.

ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ
ಒಂದೂ ಅನ್ಯಭಾಷೆಯ ಪದಗಳನ್ನು ಬಳಸದೇ ನಿರರ್ಗಳವಾಗಿ ಕನ್ನಡದಲ್ಲಿ ನಾಲ್ಕು ನಿಮಿಷ ಕಾಲ‌ ನಾಡು-ನುಡಿಯ ಪರಂಪರೆ ಸಂಬಂಧಿಸಿದ ವಿಷಯಗಳ ಕುರಿತು ವಿಡಿಯೋ ಸೆಲ್ಫಿ ತೆಗೆದು ಕಳುಹಿಸುವುದು.

ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೂವರಿಗೆ ಪ್ರಥಮ ಬಹುಮಾನ ಐದು ಸಾವಿರ ರೂ., ದ್ವಿತೀಯ ಬಹುಮಾನ ಮೂರು ಸಾವಿರ ರೂ. ತೃತೀಯ ಬಹುಮಾನ ಎರಡು ಸಾವಿರ ರೂ. ನೀಡಲಾಗುತ್ತದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಐವತ್ತು ಸಾವಿರ ರೂ., ದ್ವಿತೀಯ ಬಹುಮಾನ ಮೂವತ್ತು ಸಾವಿರ ರೂ., ತೃತೀಯ ಬಹುಮಾನ ಇಪ್ಪತ್ತು ಸಾವಿರ ರೂ. ನೀಡಲಾಗುತ್ತದೆ.

ಗಡಿ ಭಾಗದಲ್ಲಿ ಕನ್ನಡ ಜಾಗೃತಿ
ರಾಜ್ಯದ ಗಡಿ ಭಾಗದ ತಾಲೂಕು‌ ಪ್ರದೇಶಗಳಲ್ಲಿ ನಾಡಿನ ಸಂಸ್ಕೃತಿ, ಭಾಷೆ, ಸಾಹಿತ್ಯ ಕುರಿತ ಜಾಗೃತಿ ಕಾರ್ಯಕ್ರಮದ ಮೂಲಕ‌ ಕನ್ನಡಕ್ಕಾಗಿ ನಾವು ಅಭಿಯಾನ‌ ನಡೆಸಲಾಗುತ್ತದೆ.

ಅ.29, 30, 31ರ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕೋತ್ಸವ, ದೇಶೀಯ ಉಡುಪು, ಆಹಾರ ಮೇಳ, ಶಿಲ್ಪಕಲೆ ಮೇಳ ಆಯೋಜಿಸಲಾಗುವುದು. ಜತೆಗೆ ಗೀತ ಗಾಯನ, ನೃತ್ಯ ರೂಪಕ, ಯಕಗಷಗಾನ, ವಿಚಾರ ಸಂಕಿರಣ, ಗಾಯನ, ನಾಟಕ, ವಾದ್ಯ ಸಂಗೀತ, ಸುಗಮ‌ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com