ಹುಬ್ಬಳ್ಳಿ: ನ್ಯುಮೋಕಾಕಲ್ ಕಾಂಜು ಗೇಟ್ ಲಸಿಕೆಗೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ

ಮಗುವನ್ನು ನ್ಯೂಮೋನಿಯಾದಿಂದ ರಕ್ಷಣೆ ಮಾಡುವ ನ್ಯುಮೋಕಾಕಲ್ ಕಾಂಜು ಗೇಟ್ ಲಸಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿಂದು ಚಾಲನೆ ನೀಡಿದರು.
ಮಗುವಿಗೆ ಲಸಿಕೆ ಹಾಕುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಗುವಿಗೆ ಲಸಿಕೆ ಹಾಕುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಮಗುವನ್ನು ನ್ಯೂಮೋನಿಯಾದಿಂದ ರಕ್ಷಣೆ ಮಾಡುವ ನ್ಯುಮೋಕಾಕಲ್ ಕಾಂಜು ಗೇಟ್ ಲಸಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿಂದು ಚಾಲನೆ ನೀಡಿದರು. ಮಕ್ಕಳಿಗೆ ನೀಡುತ್ತಿರುವ ಲಸಿಕೆಗಳ ಜೊತೆಗೆ ನ್ಯುಮೋನಿಯಾ ತಡೆಯಲು ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆಯನ್ನು ಮಗುವಿನ ಒಂದೂವರೆ, ಮೂರುವರೆ ಹಾಗೂ ಒಂಬತ್ತನೇ ತಿಂಗಳ ವಯಸ್ಸಿನಲ್ಲಿ ಈ ಲಸಿಕೆ ಹಾಕಿಸಬೇಕಾಗುತ್ತದೆ. 

ನಂತರ ಮಾತನಾಡಿದ ಮುಖ್ಯಮಂತ್ರಿ,  ಕೋವಿಡ್ ಅಲೆಗಳು ರಾಜ್ಯ ಮತ್ತು ದೇಶದ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯ ಮತ್ತು ಕೊರತೆಗಳೆರಡನ್ನೂ ಪರಿಚಯಿಸಿವೆ. ಜೊತೆಗೆ ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳಲ್ಲಿ ಗುಣಾತ್ಮಕ ಮತ್ತು ಗಮನಾರ್ಹ ಅಭಿವೃದ್ಧಿ ತರಲು ಕಾರಣವಾಗಿವೆ. ದೇಶದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ 100 ಕೋಟಿ ಕೋವಿಡ್ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇದಕ್ಕಾಗಿ ಹೆಮ್ಮೆ ಪಡೋಣ. ಆದರೆ ವಿಶ್ರಮಿಸುವುದು ಬೇಡ ಎಂದು ಅವರು ತಿಳಿಸಿದರು.

ವಿಪತ್ತನ್ನು ಕೂಡ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಬೇಕು (Convert calamity into opportunity) ಎಂಬ ಮಾತನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ನಿಜ ಮಾಡಿ ತೋರಿಸಿದೆ. ಕೋವಿಡ್ ವೈರಾಣು ಕಾಲಿಟ್ಟಾಗ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಿಪಿಇ ಕಿಟ್, ಮಾಸ್ಕ್, ಕೈಗವಸುಗಳಿರಲಿಲ್ಲ. ಇಂದು ಈ ಉತ್ಪನ್ನಗಳನ್ನಷ್ಟೇ ಅಲ್ಲ, ಕೋವಿಡ್ ಲಸಿಕೆಯನ್ನು ಕೂಡ ರಫ್ತು ಮಾಡುವ ಸಾಮರ್ಥ್ಯ ಗಳಿಸಿಕೊಂಡಿದ್ದೇವೆ. ಭಾರತದ ಈ ಸಾಧನೆಗೆ ವಿಶ್ವವೇ ಬೆರಗಾಗಿದೆ ಎಂದು ನುಡಿದರು.

ಇನ್ನು 3-4 ತಿಂಗಳ ಅವಧಿಯಲ್ಲಿ ಮತ್ತೆ ನೂರು ಕೋಟಿ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ರಾಜ್ಯದಲ್ಲಿಯೂ ಡಿಸೆಂಬರ್ ಅಂತ್ಯದ ವೇಳೆಗೆ ಶೇ. 90 ರಷ್ಟು ಜನರಿಗೆ ಮೊದಲ ಡೋಸ್ ಹಾಗೂ ಶೇ. 70 ರಷ್ಟು ಎರಡನೇ ಡೋಸ್ ಲಸಿಕೆ ನೀಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.

ಕೋವಿಡ್‌ನಿಂದಾಗಿ ದೇಶ ಮಾತ್ರವಲ್ಲ ಇಡೀ ವಿಶ್ವ ಸಮುದಾಯದ ಒಟ್ಟು ಆರೋಗ್ಯ ಸದೃಢವಾಗಿರಬೇಕು ಎಂಬ ಪಾಠ ಕಲಿತಿದ್ದೇವೆ. ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿದೆ. ನಮ್ಮ ರಾಜ್ಯದ ಆಸ್ಪತ್ರೆಗಳಲ್ಲಿ ಒಂದೇ ವರ್ಷದಲ್ಲಿ 1 ಲಕ್ಷ 25 ಸಾವಿರ ಹಾಸಿಗೆಗಳ ಸಾಮರ್ಥ್ಯ ಹೆಚ್ಚಾಗಿದೆ. 4 ಸಾವಿರ ವೈದ್ಯಾಧಿಕಾರಿಗಳ ನೇಮಕ ಮಾಡಿಕೊಳ್ಳಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿಯೂ ಕೂಡ ಆಕ್ಸಿಜನ್ ಬೆಡ್‌ಗಳ ಸೌಲಭ್ಯ ಸ್ಥಾಪನೆಯಾಗಿವೆ. ವೈದ್ಯಕೀಯ ಆಮ್ಲಜನಕ ಉತ್ಪಾದನೆ ಹಾಗೂ ಪೂರೈಕೆ ಸಮರ್ಪಕ ಮತ್ತು ಸಶಕ್ತವಾಗಿದೆ ಎಂದು ವಿವರಿಸಿದರು.

ಕಿಮ್ಸ್ ಸೇವೆ ಶ್ಲಾಘನೆ:

ಉತ್ತರ ಕರ್ನಾಟಕದ ಹೆಮ್ಮೆಯ ಹಾಗೂ ಬಡವರ ಪಾಲಿನ ಸಂಜೀವಿನಿ ಎಂದೇ ಹೆಸರಾಗಿರುವ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಯನ್ನು ಈ ಪ್ರದೇಶದ 6 ರಿಂದ 7 ಜಿಲ್ಲೆಗಳು ಅವಲಂಬಿಸಿವೆ. ಕೋವಿಡ್ ಮೊದಲ ಮತ್ತು ಎರಡನೇ ಅವಧಿಯಲ್ಲಿ ಕಿಮ್ಸ್ ನೀಡಿದ ಸೇವೆ ಶ್ಲಾಘನೀಯವಾಗಿದೆ. ಈ ಸಂಸ್ಥೆ ತನ್ನ ಒಟ್ಟು ಸಾಮರ್ಥ್ಯವನ್ನು ಕ್ರೋಢೀಕರಿಸಿ ಸೇವೆ ನೀಡಿದ ಪರಿಣಾಮ ಸಾವಿರಾರು ಜನರ ಪ್ರಾಣ ಉಳಿದಿದೆ. ಬ್ಲ್ಯಾಕ್ ಫಂಗಸ್ ಖಾಯಿಲೆಗೂ ಕೂಡ ಕಿಮ್ಸ್‌ನಲ್ಲಿ ಪರಿಣಾಮಕಾರಿ ಚಿಕಿತ್ಸೆ ದೊರೆತಿರುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಕ್ತಕಂಠದಿಂದ ಶ್ಲಾಘಿಸಿದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ದೇಶದಲ್ಲಿ ನೂರು ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ. ವೈದ್ಯರು, ದಾದಿಯರು, ನರ್ಸ್, ಅರೆವೈದ್ಯಕೀಯ ಸಿಬ್ಬಂದಿ ಇದಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ಹಗಲಿರುಳು ಶ್ರಮಿಸಿದ್ದಾರೆ. ರಾಜ್ಯದ ಜನತೆ ಸಹಕಾರ ನೀಡಿದ್ದಾರೆ. ಅತಿಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಮಕ್ಕಳಿಗೆ ನೀಡುತ್ತಿರುವ ಲಸಿಕೆಗಳ ಜೊತೆಗೆ ನ್ಯುಮೋನಿಯಾ ತಡೆಯಲು ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆಯನ್ನು ಮಗುವಿನ ಒಂದೂವರೆ, ಮೂರುವರೆ ಹಾಗೂ ಒಂಬತ್ತನೇ ತಿಂಗಳ ವಯಸ್ಸಿನಲ್ಲಿ ಈ ಲಸಿಕೆ ಹಾಕಿಸಬೇಕು ಎಂದರು.

ಲಸಿಕಾಕರಣಕ್ಕೆ ಶ್ರಮಿಸಿದ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಹಂತಗಳ ಅಧಿಕಾರಿಗಳು, ಸಿಬ್ಬಂದಿಯನ್ನು ಪ್ರಾತಿನಿಧಿಕವಾಗಿ ಮುಖ್ಯಮಂತ್ರಿಗಳು ಸನ್ಮಾನಿಸಿ, ಗೌರವಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com