ಕನ್ನಡ ರಾಜ್ಯೋತ್ಸವ: 1000ಕ್ಕೂ ಹೆಚ್ಚು ಸ್ಥಳ, 5 ಲಕ್ಷ ಕಂಠಗಳಲ್ಲಿ ಕನ್ನಡ ಗೀತೆ ಗಾಯನ!

ರಾಜ್ಯದಲ್ಲಿ ನವೆಂಬರ್ 1 ಕನ್ನಡ ರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವಲ್ಲೇ ಹಿಂದೆಂದೂ ನಡೆದಿರದ ಅಭೂತಪೂರ್ವ ಕನ್ನಡ ಉತ್ಸವ ನಡೆಸಲು ಸಕಲ ಸಿದ್ಧತೆಗಳೂ ನಡೆದಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 1 ಕನ್ನಡ ರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವಲ್ಲೇ ಹಿಂದೆಂದೂ ನಡೆದಿರದ ಅಭೂತಪೂರ್ವ ಕನ್ನಡ ಉತ್ಸವ ನಡೆಸಲು ಸಕಲ ಸಿದ್ಧತೆಗಳೂ ನಡೆದಿವೆ.

ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಅಕ್ಟೋಬರ್ 28 ರಂದು ಆಯೋಜಿಸಿರುವ 5 ಲಕ್ಷ ಕಂಠಗಳ ಕನ್ನಡ ಗೀತಗಾಯನ ಕಾರ್ಯಕ್ರಮ ಅಸಾಧಾರಣ ರೀತಿಯಲ್ಲಿ ಆಯೋಜಿಸಿ ಯಶಸ್ವಿಗೊಳಿಸಲು ರಾಜ್ಯದ ಎಲ್ಲ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಚರ್ಚಿಸಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ರಾಜ್ಯದ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಐದು ಲಕ್ಷಕ್ಕೂ ಅಧಿಕ ಮಂದಿ ಈ ಗೀತಗಾಯನದಲ್ಲಿ ಭಾಗವಹಿಸಲಿದ್ದಾರೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

ಸರ್ಕಾರದ ಸಚಿವರ ಸಹಕಾರದೊಂದಿಗೆ ವಿವಿಧ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಅಕ್ಟೋಬರ್ 28 ರಂದು ನಡೆಯಲಿರುವ ಈ ಗೀತಗಾಯನ ಕೇವಲ ಸರ್ಕಾರದ ಅಧಿಕಾರಿ ಸಿಬ್ಬಂದಿಗಳು ಮಾಡುವ ಸರ್ಕಾರಿ ಕಾರ್ಯಕ್ರಮವಾಗದೇ ಕನ್ನಡ ನಾಡಿನ ಜನಮಾನಸದ ಅಭಿಮಾನದ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕು ಸ್ವಯಂ ಸ್ಫೂರ್ತಿಯಿಂದ ಜನತೆ ಈ ಗೀತಗಾಯನದಲ್ಲಿ ಹಾಡುವ ಮೂಲಕ ತಮ್ಮ ಅಭಿಮಾನ ಮತ್ತು ಕನ್ನಡ ಭಾಷೆ ಬಗೆಗಿನ ಪ್ರೀತಿಯನ್ನ ಅಭಿವ್ಯಕ್ತಿಗೊಳಿಸಲು ವೇದಿಕೆಯನ್ನಾಗಿ ಮಾಡುವ ಜವಾಬ್ದಾರಿ ಪ್ರತಿ ಜಿಲ್ಲಾಡಳಿತದ ಮೇಲಿದೆ. ಅದಕ್ಕೆ ಬೇಕಾದ ಪೂರ್ವಸಿದ್ಧತೆ, ಮಾಹಿತಿ ನೀಡುವಿಕೆ ಮತ್ತು ಕಾರ್ಯಕ್ರಮ ಆಯೋಜನೆಗೆ ಪೂರ್ಣ ಬದ್ಧತೆಯೊಂದಿಗೆ ಕೆಲಸ ಮಾಡಬೇಕೆಂದು ಜಿಲ್ಲಾಡಳಿತಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗ್ರಾಮಪಂಚಾಯಿತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಕಾರ್ಯಕ್ರಮದ ಜವಾಬ್ದಾರಿ ವಹಿಸಬೇಕು. ಇದಕ್ಕಾಗಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಿ ಹಾಡುವ ತಂಡಗಳ ಮಾಹಿತಿ, ಅವರಿಗೆ ಬೇಕಾದ ಕನಿಷ್ಠ ಅಗತ್ಯಗಳು ಮತ್ತು ಈ ಕಾರ್ಯಕ್ರಮದ ಪ್ರಚಾರ ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಗಿದೆ.

ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಂಮವ’, ನಿಸಾರ್ ಅಹಮ್ಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಡಾ. ಹಂಸಲೇಖ ಅವರ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’- ಈ ಮೂರು ಗೀತೆಗಳು ಅಕ್ಟೋಬರ್ 28 ರಂದು ಬೆಳಿಗ್ಗೆ 11 ಗಂಟೆಗೆ ಏಕ ಕಾಲದಲ್ಲಿ ರಾಜ್ಯಾದ್ಯಂತ ಮೊಳಗಲಿವೆ.

ಇದಕ್ಕೆ ಬೇರ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಹಾಗೂ ವಿಶ್ವಾದ್ಯಂತ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು, ಕನ್ನಡ ಕೂಟಗಳು ತಮಗೆ ಒದಗಿಸಿರುವ ನಿರ್ದಿಷ್ಟ ಜಾಲತಾಣ ಸಂಪರ್ಕದ ಮೂಲಕ ಒಟ್ಟಿಗೆ ಸೇರಿ ಹಾಡುವ ತಾಂತ್ರಿಕ ಸಂಯೋಜನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿದೆ.

ಇದರ ಮೂಲಕ ಒಂದೇ ಬಾರಿ ವಿಶ್ವದಾದ್ಯಂತ ಕನ್ನಡ ಗೀತೆಗಳು ಲಕ್ಷ ಲಕ್ಷ ಕಂಠಗಳಲ್ಲಿ ಮೊಳಗಲಿದೆ. ಇದು ಈ ಹಿಂದೆ ಎಂದೂ ನಡೆದಿರದ ಬೃಹತ್ ಹಾಗೂ ಅವಿಸ್ಮರಣೀಯ ಕಾರ್ಯಕ್ರಮವಾಗಲಿದೆ.

ಇಡೀ ನಾಡನ್ನು ಈ ಬಾರಿಯ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡಮಯವನ್ನಾಗಿ ಮಾಡಲು, ಕನ್ನಡದ ಭಾವಲಹರಿ ಜನಮನದ ನರನಾಡಿಗಳಲ್ಲಿ ಸಂಚರಿಸುವ ರೋಮಾಂಚನವನ್ನು ಉಂಟು ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಈ ಅಭಿಯಾನ ರೂಪುಗೊಂಡಿದೆ.

ನಾಡಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಶಾಲಾ- ಕಾಲೇಜುಗಳ ಆವರಣದಲ್ಲಿ, ವಿಶ್ವವಿದ್ಯಾಲಯಗಳ ಆವರಣಗಳಲ್ಲಿ, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳ ಆವರಣಗಳಲ್ಲಿ ಹಾಗೂ ಮೈಸೂರಿನ ಅರಮನೆಯ ಮುಂಭಾಗ ಮತ್ತು ವಿಶ್ವವಿಖ್ಯಾತ ಹಂಪಿಯ ಕಲ್ಲಿನ ರಥ ಹಾಗೂ ಮಹಾನವಮಿ ದಿಬ್ಬವೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸುಪ್ರಸಿದ್ಧ ಸ್ಮಾರಕಗಳ ಮುಂದೆ ಸಾವಿರಾರು ಜನರು ಒಟ್ಟಿಗೆ ನಿಂತು ಈ ಗೀತಗಾಯನದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಮೈಸೂರು ಅರಮನೆ, ಹಂಪಿ ಹಾಗೂ ಸಾಂಸ್ಕೃತಿಕ ತಾಣಗಳಲ್ಲಿ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಮೆಟ್ರೋ, ಉಡುಪಿ ಶ್ರೀ ಕೃಷ್ಣ ಮಂದಿರ, ಸಿದ್ಧಗಂಗಾ ಮಠ ಹಾಗೂ ಚಿತ್ರದುರ್ಗ ಕೋಟೆಗಳಲ್ಲಿ ಸಾವಿರರು ಜನ ಒಟ್ಟಿಗೆ ನಿಂತು ಈ ಕನ್ನಡ ಗೀತೆಗಳ ಗಾಯನ ಮಾಡಲಿದ್ದಾರೆ.

ಕನ್ನಡ ಗೀತಗಾಯನ ಕಾರ್ಯಕ್ರಮದ ಸ್ವರೂಪ ಮತ್ತು ಸಂಕಲ್ಪ:
ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ನಾಳೆ ಅಕ್ಟೋಬರ್ 28ರಂದು ಆಯೋಜಿಸಲಾಗಿರುವ ಲಕ್ಷಕಂಠಗಳ ಗೀತಗಾಯನ ಕಾರ್ಯಕ್ರಮದಲ್ಲಿ ಸ್ವೀಕರಿಸಬೇಕಾಗಿರುವ ಸಂಕಲ್ಪ ಮತ್ತು ಸ್ವರೂಪ ಕುರಿತು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಗೀತಗಾಯನದಲ್ಲಿ ಭಾಗವಹಿಸುವವರೆಲ್ಲರೂ ಬೆಳಿಗ್ಗೆ ನಿಗದಿಪಡಿಸಿದ ಸ್ಥಳಗಳಲ್ಲಿ ಹಾಜರಿರಬೇಕು. ಮೊದಲಿಗೆ ನಾಡಗೀತೆ ಹಾಡಲಾಗುವುದು. ಆ ನಂತರ ಈಗಾಗಲೇ ಸೂಚಿಸಿರುವ ಮೂರು ಕನ್ನಡ ಗೀತೆಗಳನ್ನು ಹಾಡಲಾಗುವುದು. ಇದೇ ಸಂದರ್ಭದಲ್ಲಿ ಗೀತಗಾಯನದ ನಂತರ ಸಂಕಲ್ಪವೊಂದನ್ನು ಸ್ವೀಕರಿಸಬೇಕು.

“ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ.
ಕನ್ನಡದಲ್ಲೇ ಬರೆಯುತ್ತೇನೆ.
ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ.
ಎಂಬ ಪಣ ತೊಡುತ್ತೇನೆ.
ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ.
ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ

ಎಂದು ಸಂಕಲ್ಪ ಮಾಡುವಂತೆ ಸಚಿವರು ಕರೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com