ಗಡಿ ಜಿಲ್ಲೆಗಳಲ್ಲಿನ ವೀಕೆಂಡ್ ಕರ್ಫ್ಯೂ ರದ್ದು: ವಿವಿಧ ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವ್ ದರ ಹೀಗಿದೆ

ಸದ್ಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವ್ ಪ್ರಮಾಣ ಶೇಕಡಾ 2ಕ್ಕಿಂತ ಕಡಿಮೆ ಇರುವುದರಿಂದ ಆಯಾ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂವನ್ನು ಮುಂದುವರಿಸುವುದು ಅಥವಾ ತೆಗೆದುಹಾಕುವುದನ್ನು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸದ್ಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವ್ ದರ ಶೇಕಡಾ 2ಕ್ಕಿಂತ ಕಡಿಮೆ ಇರುವುದರಿಂದ ಆಯಾ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂವನ್ನು ಮುಂದುವರಿಸುವುದು ಅಥವಾ ತೆಗೆದುಹಾಕುವುದನ್ನು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಆದರೂ ರಾಜ್ಯಾದ್ಯಂತ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಮುಂದುವರಿಯುತ್ತದೆ. ಸರ್ಕಾರದ ಈ ಆದೇಶ ಹಿನ್ನೆಲೆಯಲ್ಲಿ ಶೇಕಡಾ 1.83ರಷ್ಟು ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆ, ಶೇಕಡಾ 1.67 ಪ್ರಕರಣಗಳನ್ನು ಹೊಂದಿರುವ ಕೊಡಗು, ಶೇಕಡಾ 1.83ರಷ್ಟು ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ಉಡುಪಿ ಮತ್ತು ಶೇಕಡಾ 1ರಷ್ಟು ಕೊರೋನಾ ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ಹಾಸನ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂವನ್ನು ತೆಗೆದುಹಾಕಲಾಗಿದೆ.

ಮಹಾರಾಷ್ಟ್ರ, ಕೇರಳ ಗಡಿಭಾಗಗಳಲ್ಲಿ ಕಣ್ಗಾವಲು ಮುಂದುವರಿಕೆ: ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕಳೆದ ತಿಂಗಳು ಹಠಾತ್ತನೆ ಕೋವಿಡ್ ಸಕ್ರಿಯ ಪ್ರಕರಣಗಳು ಹೆಚ್ಚಾಗಿದ್ದರಿಂದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಬೆಳಗಾವಿ, ವಿಜಯಪುರ, ಬೀದರ್ ಮತ್ತು ಕಲಬುರಗಿಗಳಲ್ಲಿ ವಾರಾಂತ್ಯ ಕರ್ಫ್ಯೂವನ್ನು ಹೇರಲಾಗಿತ್ತು. ನೆರೆಯ ರಾಜ್ಯಗಳಿಂದ ಗಡಿ ಜಿಲ್ಲೆಗಳಿಗೆ ಬರುವವರ ಸಂಖ್ಯೆ ಹೆಚ್ಚಿರುವುದರಿಂದ ಈ ಜಿಲ್ಲೆಗಳಲ್ಲಿ ಸಹ ಕೋವಿಡ್ ಸಕ್ರಿಯ ಪ್ರಕರಣಗಳು ಹೆಚ್ಚಾಗಿದ್ದವು. 

ಮೈಸೂರು, ಚಾಮರಾಜನಗರ ಮತ್ತು ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ಆರಂಭದಲ್ಲಿ ವಾರಾಂತ್ಯ ಕರ್ಫ್ಯೂವನ್ನು ತೆಗೆದುಹಾಕಲು ಅನುವು ಮಾಡಿಕೊಡಲಾಗಿದ್ದರೂ ಕೇರಳದ ಇತರ ಜಿಲ್ಲೆಗಳಲ್ಲಿ ಕಳೆದ ಗುರುವಾರದವರೆಗೆ ವಾರಾಂತ್ಯ ಕರ್ಫ್ಯೂ ಮುಂದುವರಿದಿತ್ತು. ಉಡುಪಿ ಜಿಲ್ಲೆ ಕೇರಳದ ಗಡಿಜಿಲ್ಲೆಯಲ್ಲದಿದ್ದರೂ ಕೂಡ ವಾರಾಂತ್ಯ ಕರ್ಫ್ಯೂ ಮುಂದುವರಿದಿತ್ತು. ಹಾಸನದಲ್ಲಿ ಸಹ ಹೇರಲಾಗಿತ್ತು.

ಕಳೆದೊಂದು ವಾರದ ಅಂಕಿಅಂಶ ತೆಗೆದುಕೊಂಡರೆ ರಾಜ್ಯದ 14 ಜಿಲ್ಲೆಗಳಲ್ಲಿ ಶೂನ್ಯ ಪಾಸಿಟಿವ್ ಪ್ರಕರಣಗಳಿವೆ. 6 ಜಿಲ್ಲೆಗಳಲ್ಲಿ ಶೇಕಡಾ ಶೂನ್ಯದಿಂದ 1 ಇದ್ದರೆ, 10 ಜಿಲ್ಲೆಗಳಲ್ಲಿ ಶೇಕಡಾ 1ರಿಂದ ಶೇಕಡಾ 2ರಷ್ಟು ಕೊರೋನಾ ಪಾಸಿಟಿವ್ ಪ್ರಮಾಣವಿದೆ. ಮೊನ್ನೆ ಗುರುವಾರ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ ರವಿಕುಮಾರ್ ಹೊರಡಿಸಿರುವ ಆದೇಶದಲ್ಲಿ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್ ಸಕ್ರಿಯ ದರ ದಿನೇದಿನೇ ಇಳಿಮುಖವಾಗುತ್ತಿದೆ. ರಾಜ್ಯದಲ್ಲಿ ಸದ್ಯ ಸರಾಸರಿ ಶೇಕಡಾ 0.73ರಷ್ಟು ಇದ್ದರೆ ಜಿಲ್ಲೆಗಳಲ್ಲಿ ಶೇಕಡಾ 2ಕ್ಕಿಂತ ಕಡಿಮೆಯಿದೆ ಎಂದು ತಿಳಿಸಲಾಗಿದೆ.

ಈಗಿರುವ ಅಂಕಿಅಂಶಗಳನ್ನು ಮುಂದುವರಿಸಲು ಮತ್ತು ಪಾಸಿಟಿವ್ ಪ್ರಮಾಣವನ್ನು ಶೂನ್ಯಕ್ಕೆ ತರಲು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ. ಗಡಿಜಿಲ್ಲೆಗಳಲ್ಲಿ ಕಣ್ಗಾವಲು, ಕೊರೋನಾ ಪರೀಕ್ಷೆ, ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆ, ಲಸಿಕೆ, ಸೂಕ್ಷ್ಮ ವಲಯಗಳ ಕ್ರಮಗಳನ್ನು ಪಾಲಿಸಬೇಕಾಗುತ್ತದೆ.

ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಕೇರಳ ಮತ್ತು ಮಹಾರಾಷ್ಟ್ರಗಳ ಗಡಿ ಜಿಲ್ಲೆಗಳ ಚೆಕ್ ಪೋಸ್ಟ್ ಗಳಲ್ಲಿ ತೀವ್ರ ಕಟ್ಟುನಿಟ್ಟಿನ ಕಣ್ಗಾವಲು ಮುಂದುವರಿಸಲಾಗುತ್ತದೆ. ಇನ್ನು ಈ ಜಿಲ್ಲೆಗಳಲ್ಲಿ ಶಾಲೆ ಆರಂಭ ಕುರಿತಂತೆ ಶಿಕ್ಷಣ ಇಲಾಖೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com