ಮಂಗಳೂರು ಪಾಲಿಕೆ ವಿರುದ್ಧ ಕ್ರಮಕ್ಕೆ ಕೆಎಸ್ಪಿಸಿಬಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ

ಮಂಗಳೂರು ನಗರದಲ್ಲಿ ಕಲುಷಿತಗೊಂಡಿರುವ ಕುಡಿಯುವ ನೀರಿನ ವಿಚಾರದಲ್ಲಿ ಸಂವೇದನಾ ಶೂನ್ಯ ವಿಧಾನ ಅನುಸರಿಸುತ್ತಿರುವ ಮಂಗಳೂರು ಮಹಾನಗರ ಪಾಲಿಕೆ ವಿರುದ್ದ ಕ್ರಮ ಜರುಗಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್ಪಿಸಿಬಿ) ಶುಕ್ರವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ. 
ಮಂಗಳೂರು ಮಹಾನಗರ ಪಾಲಿಕೆ
ಮಂಗಳೂರು ಮಹಾನಗರ ಪಾಲಿಕೆ
Updated on

ಬೆಂಗಳೂರು: ಮಂಗಳೂರು ನಗರದಲ್ಲಿ ಕಲುಷಿತಗೊಂಡಿರುವ ಕುಡಿಯುವ ನೀರಿನ ವಿಚಾರದಲ್ಲಿ ಸಂವೇದನಾ ಶೂನ್ಯ ವಿಧಾನ ಅನುಸರಿಸುತ್ತಿರುವ ಮಂಗಳೂರು ಮಹಾನಗರ ಪಾಲಿಕೆ ವಿರುದ್ದ ಕ್ರಮ ಜರುಗಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್ಪಿಸಿಬಿ) ಶುಕ್ರವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ. 

ಮಂಗಳೂರಿನಲ್ಲಿ ಹರಿಯುವ ಫಲ್ಗುಣಿ ಉಪನದಿ ಕಲುಷಿತವಾಗಿರುವ ಕುರಿತು ಕೆಎಸ್ಪಿಸಿಬಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ (ಪಿಐಎಲ್) ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಮಂಗಳೂರಿನ ನಿವಾಸಿಗಳು ತ್ಯಾಜ್ಯ ಸುರಿಯುವ ಪ್ರದೇಶದಲ್ಲಿಂದ ಬರುವ ಕಲುಷಿತ ನೀರನ್ನು ಕುಡಿಯಲು ಒತ್ತಾಯಿಸಿದಾಗ ಈ ನ್ಯಾಯಾಲಯವು ಮೂಕ ಪ್ರೇಕ್ಷಕವಾಗಿರಲು ಸಾಧ್ಯವಿಲ್ಲ” ಎಂದು ಪೀಠ ಕಟುವಾಗಿ ಹೇಳಿತು.

ಸರ್ಕಾರಿ ವಕೀಲರು “ತ್ಯಾಜ್ಯ ಸುರಿಯುವ ಪ್ರದೇಶವು ಸುಮಾರು 30-40 ವರ್ಷಗಳಷ್ಟು ಹಳೆಯದು ಮತ್ತು ಅದನ್ನು ಹಂತ ಹಂತವಾಗಿ ತೆರವುಗೊಳಿಸಲಾಗುವುದು” ಎಂದರು. ಮಳವೂರು ನೀರಿನ ಸಂಸ್ಕರಣಾ ಘಟಕದಲ್ಲಿ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಮುಗ್ರೋಡಿ ಕನ್ಸ್ಟ್ರಕ್ಷನ್ ಎಂಬ ಖಾಸಗಿ ಸಂಸ್ಥೆಯ ಪರೀಕ್ಷಾ ವರದಿಯನ್ನು ಪೀಠಕ್ಕೆ ಸರ್ಕಾರವು ಸಲ್ಲಿಸಿತು. ಆದರೆ, ಪೀಠವು ಖಾಸಗಿ ಸಂಸ್ಥೆಯ ವರದಿಯನ್ನು ನಿರಾಕರಿಸಿತು.

“ಮಂಗಳೂರು ನಗರದಲ್ಲಿ ನೀರನ್ನು ವಿಶ್ಲೇಷಿಸುವ ಕೆಲಸವನ್ನು ಯಾವ ಕಾನೂನಿನ ಅಡಿಯಲ್ಲಿ ಮುಗ್ರೋಡಿ ಕನ್ಸ್ಟ್ರಕ್ಷನ್ಗೆ ವಹಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ನ್ಯಾಯಾಲಯವು ನಿಜವಾಗಿಯೂ ವಿಫಲವಾಗಿದೆ” ಎಂದು ಪೀಠ ಹೇಳಿತು.

ಎಂಸಿಸಿಗೆ ಪೀಠವು ಛೀಮಾರಿ ಹಾಕಿದ್ದು, ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆದೇಶ ಮಾಡಿದೆ. ನೀರಿನ ಗುಣಮಟ್ಟ ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಮಾಸಿಕ ವರದಿ ಸಲ್ಲಿಸುವಂತೆ ಕೆಎಸ್ಪಿಸಿಬಿ ಮತ್ತು ಎಂಸಿಸಿಗೆ ಪೀಠವು ನಿರ್ದೇಶಿಸಿದ್ದು, ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಮುಂದೂಡಿದೆ. ಅಣೆಕಟ್ಟಿನ ಪ್ರವೇಶ ಮತ್ತು ನಿರ್ಗಮನದಲ್ಲಿ ನಿವಾಸಿಗಳಿಗೆ ಸರಬರಾಜು ಮಾಡಿದ ನೀರನ್ನು ಪರೀಕ್ಷಿಸಲು ಕೆಎಸ್ಪಿಸಿಬಿಗೆ ಪೀಠವು ಆದೇಶಿಸಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com