ಸಾರಿಗೆ ಇಲಾಖೆ ನೌಕರರ ಮುಷ್ಕರಕ್ಕೆ ಕಾರ್ಮಿಕ ಇಲಾಖೆ ನಿಷೇಧ: ನಕಲಿ ಸುದ್ದಿ ಹಬ್ಬಿಸುವವರ ವಿರುದ್ಧ ದೂರು ದಾಖಲು
ಸಾರಿಗೆ ನಿಗಮದ ಹಲವು ಸಂಘಟನೆಗಳು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ನಿಷೇಧಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.
Published: 10th April 2021 08:48 AM | Last Updated: 10th April 2021 08:49 AM | A+A A-

ಬನಶಂಕರಿಯ ಬಸ್ ನಿಲ್ದಾಣದಲ್ಲಿ ಭದ್ರತೆ ಕಾಯುತ್ತಿರುವ ಪೊಲೀಸ್ ಸಿಬ್ಬಂದಿ
ಬೆಂಗಳೂರು: ಸಾರಿಗೆ ನಿಗಮದ ಹಲವು ಸಂಘಟನೆಗಳು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ನಿಷೇಧಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.
ಕೈಗಾರಿಕಾ ವಿವಾದ ಕಾಯ್ದೆಯಡಿ ಆದೇಶ ಹೊರಡಿಸಲಾಗಿದ್ದು ಕಾರ್ಮಿಕ ಇಲಾಖೆಯ ಹೆಚ್ಚುವರಿ ಆಯುಕ್ತರು ಕಾರ್ಮಿಕ ನ್ಯಾಯಾಧೀಕರಣಕ್ಕೆ ಈ ವಿಷಯವನ್ನು ತಿಳಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು, ಮುಷ್ಕರ ಇನ್ನು ಕಾನೂನುಬಾಹಿರವಾಗುತ್ತದೆ. ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಇನ್ನು ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಲೇಬೇಕು, ಬಾರದಿದ್ದರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಆದೇಶದಲ್ಲಿ ಬಿಎಂಟಿಸಿ ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಅಗತ್ಯ ಸೇವೆಗಳಡಿಯಲ್ಲಿ ತರಲಾಗಿದೆ ಎಂದು ಹೇಳಿದರು.
ಇನ್ನೂ ಸರ್ಕಾರ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ(ಎಸ್ಮಾ)ವನ್ನು ರಾಜ್ಯದಲ್ಲಿ ಜಾರಿಗೆ ತಂದಿಲ್ಲ. ನೌಕರರ ವಿರುದ್ಧ ಕೂಡ ಇದುವರೆಗೆ ಕ್ರಮ ಕೈಗೊಂಡಿಲ್ಲ. ಆದರೆ ಮುಷ್ಕರ ನಿಲ್ಲಿಸದಿದ್ದರೆ ಸರ್ಕಾರಕ್ಕೆ ಬೇರೆ ಮಾರ್ಗವಿಲ್ಲ ಎನ್ನುತ್ತಾರೆ ಸಾರಿಗೆ ಇಲಾಖೆ ನೌಕರರು.
ಇನ್ನು ಕರ್ತವ್ಯಕ್ಕೆ ಹಾಜರಾಗುವ ನೌಕರರನ್ನು ಬೆದರಿಸುವವರ ವಿರುದ್ಧ ಸಾರಿಗೆ ಇಲಾಖೆ ನೌಕರರು ಸೈಬರ್ ಕ್ರೈಂ ಪೊಲೀಸ್ ಬಳಿ ದಾವಿಸಿ ಎಫ್ಐಆರ್ ದಾಖಲಿಸಿದ್ದಾರೆ. ನಿನ್ನೆ ಸಾಯಂಕಾಲ ಕೆಲಸಕ್ಕೆ ಬಂದವರಿಗೆ ಬೆದರಿಕೆಯೊಡ್ಡಿದ್ದಾರೆ ಎಂದು ಹೇಳಿದ ಚಾಲಕರ ದೂರಿನ ಮೇಲೆ ನಾವು ಸೈಬರ್ ಕ್ರೈಂಗೆ ದೂರು ನೀಡಿದ್ದೇವೆ. ಚಿಕ್ಕಬಳ್ಳಾಪುರದ ಚಾಲಕ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಬಗ್ಗೆ ನಕಲಿ ಸುದ್ದಿ ಹಬ್ಬಿಸುವವರ ವಿರುದ್ಧ ಕೂಡ ದೂರು ನೀಡಲಾಗಿದೆ ಎಂದರು.