ಟಿಎನ್ಐಇ ಫಲಶ್ರುತಿ: ಕಿಡಿಗೇಡಿಗಳ ಬೆಂಕಿಗೆ ಭಸ್ಮವಾಗಿದ್ದ ಗ್ರಂಥಾಲಯಕ್ಕೆ ನೆರವಿನ ಮಹಾಪೂರ!

ದುಷ್ಕರ್ಮಿಗಳು ಹಚ್ಚಿದ ಬೆಂಕಿಯ ಪರಿಣಾಮ ಭಸ್ಮಗೊಂಡಿದ್ದ ಕನ್ನಡ ಪುಸ್ತಕ ಪ್ರೇಮಿ ಸೈಯದ್ ಇಸಾಕ್ ಅವರ ಸಾರ್ವಜನಿಕ ಗ್ರಂಥಾಲಯ ಪುನರ್ ನಿರ್ಮಾಣಕ್ಕೆ ನೆರವಿನ ಹೊಳೆ ಹರಿದುಬರುತ್ತಿದೆ. 
ಗ್ರಂಥಾಲಯದಲ್ಲಿ ನಿಂತಿರುವ ಸೈಯದ್ ಇಸಾಕ್
ಗ್ರಂಥಾಲಯದಲ್ಲಿ ನಿಂತಿರುವ ಸೈಯದ್ ಇಸಾಕ್

ಮೈಸೂರು: ದುಷ್ಕರ್ಮಿಗಳು ಹಚ್ಚಿದ ಬೆಂಕಿಯ ಪರಿಣಾಮ ಭಸ್ಮಗೊಂಡಿದ್ದ ಕನ್ನಡ ಪುಸ್ತಕ ಪ್ರೇಮಿ ಸೈಯದ್ ಇಸಾಕ್ ಅವರ ಸಾರ್ವಜನಿಕ ಗ್ರಂಥಾಲಯ ಪುನರ್ ನಿರ್ಮಾಣಕ್ಕೆ ನೆರವಿನ ಹೊಳೆ ಹರಿದುಬರುತ್ತಿದೆ. 

3,000 ಭಗವತ್ ಗೀತೆ. 1000ಕ್ಕೂ ಹೆಚ್ಚು ಖುರಾನ್, ಬೈಬಲ್ ಪುಸ್ತಕಗಳು ಹಾಗೂ 11,000 ಇನ್ನಿತರೆ ಪುಸ್ತಕಗಳಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಶನಿವಾರ ಕಿಡಿಗೇಡಿಗಳು ಬೆಂಕಿ ಹಚ್ಚಿ, ಕಾಲ್ಕಿತ್ತಿದ್ದರು. 

ಘಟನೆ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ವರದಿ ಮಾಡಿತ್ತು. ಅಲ್ಲದೆ, ಗ್ರಂಥಾಲಯ ಪುನರ್ ನಿರ್ಮಾಣಕ್ಕೆ ಸೈಯದ್ ಇಸಾಕ್ ಅವರು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದರು. 

ಈ ವರದಿಯನ್ನು ಗಮನಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಸೈಯದ್ ಅವರೊಂದಿಗೆ ಮಾತನಾಡಿ ಧೈರ್ಯ ತುಂಬಿದ್ದಾರೆ. 

ಸೈಯದ್ ಅವರೊಂದಿಗೆ ಮಾತನಾಡಿರುವ ಕುರಿತು ಸ್ವತಃ ಸುರೇಶ್ ಕುಮಾರ್ ಅವರೇ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. 

ಮೈಸೂರಿನ ಸೈಯ್ಯದ್‌ ಇಸಾಕ್‌ರೊಂದಿಗೆ ಮಾತನಾಡಿ ಅವರಿಗೆ ಸಾಂತ್ವನ ಹೇಳಲು ಪ್ರಯತ್ನಿಸಿದೆ. (ಪತ್ರಕರ್ತ ಗೆಳೆಯರೊಬ್ಬರು ನೀಡಿದ ಸಂಪರ್ಕ ಸಂಖ್ಯೆಯ ಮೂಲಕ). ಸೈಯದ್ ಇಸಾಕ್ ಅವರು ಕಳೆದ ಅನೇಕ ವರ್ಷಗಳಿಂದ ಪುಸ್ತಕಗಳ ಸಂಗ್ರಹ ಮಾಡಿ ವಿನೂತನ ಗ್ರಂಥಾಲಯದ ಮೂಲಕ ಬೇರೆಯವರಿಗೆ ಕನ್ನಡ ಓದಲು ಕನ್ನಡ ಕಲಿಸಲು ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ದಿನ 100-150 ಜನ ಇದರಿಂದ ಲಾಭ ಪಡೆಯುತ್ತಿದ್ದರು.

ಅವರ ಈ ವಿನೂತನ ಗ್ರಂಥಾಲಯಕ್ಕೆ ದುಷ್ಕರ್ಮಿಗಳು ಬೆಂಕಿಹಾಕಿ ಸುಮಾರು 11 ಸಾವಿರ ಪುಸ್ತಕಗಳನ್ನು ಭಸ್ಮ ಮಾಡಿದ್ದಾರೆ. ಇದರಲ್ಲಿ ಸುಮಾರು 3000 ಸಾವಿರ ಭಗವದ್ಗೀತೆ ಪ್ರತಿಗಳು ಇದ್ದವಂತೆ. ಅವರ ಬಳಿ ಇದ್ದ ಪುಸ್ತಕಗಳ ಪೈಕಿ ಶೇಕಡ 85 ರಷ್ಟು ಪುಸ್ತಕಗಳು ಕನ್ನಡ ಭಾಷೆಯಲ್ಲಿ ಇದ್ದವೆಂದು ತಿಳಿದುಬಂದಿದೆ. ಅವರ ಅನೇಕ ವರ್ಷಗಳ ಈ ಸಂಗ್ರಹಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ. ‘ನಾನಂತೂ ಓದಿಲ್ಲ ಬೇರೆಯವರನ್ನು ಓದಿಸಬೇಕು ಎಂಬ ಉದ್ದೇಶ ನನ್ನದು. ಆದರೆ ನನ್ನ ಎಲ್ಲಾ ಕಾರ್ಯಕ್ಕೆ ಇಂದು ಬೆಂಕಿ ಇಡಲಾಗಿದೆ’ ಎಂದು ಬಿಕ್ಕಳಿಸುತ್ತಾ ಹೇಳಿದರು ಸೈಯದ್ ಇಸಾಕ್. ಅವರಿಗೆ ಅಗತ್ಯ ನೆರವು, ಸಾಂತ್ವನ ನೀಡುವುದು ನಮ್ಮೆಲ್ಲರ ಕರ್ತವ್ಯ. ನಾನು ಅವರಿಗೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಹಾಗೂ ಶೀಘ್ರದಲ್ಲಿಯೇ ಮೈಸೂರಿನಲ್ಲಿ ಅವರನ್ನು ಭೇಟಿಯಾಗುವುದಾಗಿ ತಿಳಿಸಿದ್ದೇನೆಂದು ತಿಳಿಸಿದ್ದಾರೆ.

ಇಸಾಕ್ ಅವರ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿರುವುದಕ್ಕೆ ಸಾರ್ವಜನಿಕ ವಲಯದಿಂದ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಕೆಲವರು ಗ್ರಂಥಾಲಯ ಪುನರ್ ನಿರ್ಮಾಣಕ್ಕಾಗಿ ನೆರವಿಗಾಗಿ ಅಭಿಯಾನವನ್ನು ಆರಂಭಿಸಿದ್ದಾರೆ. 

ಗ್ರಂಥಾಲಯದ ಮೂಲಕ ಇಸಾಕ್ ಅವರು ಸಾಕಷ್ಟು ಸ್ಥಳೀಯರಿಗೆ ಸಹಾಯ ಮಾಡುತ್ತಿದ್ದರು ಎಂದು ಮಿಸ್ಬಾಹ್ ಎಂಬ ಮಹಿಳೆ ಹೇಳಿದ್ದಾರೆ. 

ಸುದ್ದಿ ತಿಳಿಯುತ್ತಿದ್ದಂತೆಯೇ ಚಾಮರಾಜಪೇಟೆ ಶಾಸಕ ಬಿ.ಝಡ್. ಜಮೀರ್ ಅಹ್ಮದ್ ಅವರು ಮೈಸೂರು ಬೆಂಬಲಿಗರ ಮೂಲಕ ರೂ.2 ಲಕ್ಷ ಸಹಾಯ ಮಾಡಿದ್ದಾರೆ. 

ಶಿಕ್ಷಣ ತಜ್ಞ ಮುಜಾಫರ್ ಅಸ್ಸಾದಿಯವರು ಇಸಾಕ್ ಪರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದು, ಗ್ರಂಥಾಲಯ ಪುನರ್ ನಿರ್ಮಾಣಕ್ಕೆ ಒಂದೊಂದು ಪುಸ್ತಕವನ್ನು ದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಬೆಂಗಳೂರಿನ ಹಲವು ಪ್ರಕಾಶನ ಸಂಸ್ಥೆಗಳೂ ಕೂಡ ಇಸಾಕ್ ಅವರ ಗ್ರಂಥಾಲಯಕ್ಕೆ ಪುಸ್ತಕ ನೀಡುವುದಾಗಿ ತಿಳಿಸಿವೆ. 

ಈ ನಡುವೆ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಮೈಸೂರಿನಲ್ಲಿ ಇಸಾಕ್ ಅವರನ್ನು ಭೇಟಿ ಮಾಡಿದ್ದು, ಭಗವತ್ ಗೀತೆ, ಖುರಾನ್ ಹಾಗೂ ಬೈಬಲ್ ಗಳ ಹಲವು ಪ್ರತಿಗಳನ್ನು ನೀಡಿದ್ದಾರೆ. 

ಭಸ್ಮವಾಗಿದ್ದ ಸ್ಥಳದಲ್ಲಿಯೇ ಗ್ರಂಥಾಲಯ ಪುನರ್ ನಿರ್ಮಾಣವಾಗಬೇಕು. ಸ್ಥಳೀಯರಿಗೆ ಗ್ರಂಥಾಲಯ ಸಹಾಯಕವಾಗಬೇಕು. ಇಲ್ಲಿನ ಜನರು ಗ್ರಂಥಾಲಯಕ್ಕೆ ಬಂದು ಓದಬೇಕು. ಪ್ರಮುಖವಾಗಿ ಕನ್ನಡ ಪುಸ್ತಕಗಳನ್ನು ಓದಬೇಕು. ಗ್ರಂಥಾಲಯಕ್ಕೆ ನನ್ನ ಹೆಸರು ಇಡುವುದು ನನಗೆ ಬೇಕಿಲ್ಲ. ಈ ಗ್ರಂಥಾಲಯ ಸಾರ್ವಜನಿಕರಿಗೆ ಸಹಾಯಕವಾಗಲಿ ಎಂದು ಇಸಾಕ್ ಅವರು ಹೇಳಿದ್ದಾರೆ. 

ಈ ನಡುವೆ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದುಷ್ಕರ್ಮಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com