ಕೆಎಸ್ಆರ್‌ಟಿಸಿ ಬಸ್ ಓಡಿಸುತ್ತಿರುವುದು ಖಾಸಗಿ ಡ್ರೈವರ್ ಎಂಬ ಸುದ್ದಿಯು ಸತ್ಯಕ್ಕೆ ದೂರವಾದದ್ದು: ಕಳಸದ ಸ್ಪಷ್ಟನೆ

ಕೆಎಸ್ಆರ್‌ಟಿಸಿ ಬಸ್ ಓಡಿಸುತ್ತಿರುವ ಖಾಸಗಿ ಡ್ರೈವರ್ ಎಂಬ ಸುದ್ದಿಯು ಸತ್ಯಕ್ಕೆ ದೂರವಾದದ್ದು, ಯಾವುದೇ ಒಂದೇ ಒಂದು ಬಸ್ ಅನ್ನು ಖಾಸಗಿಯವರಾಗಲಿ, ನಿವೃತ್ತಿ ಹೊಂದಿದವರಾಗಲಿ ಚಾಲನೆ ಮಾಡುತ್ತಿಲ್ಲ ಎಂದು ಕೆ‌ಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸ್ಪಷ್ಟಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಎಸ್ಆರ್‌ಟಿಸಿ ಬಸ್ ಓಡಿಸುತ್ತಿರುವ ಖಾಸಗಿ ಡ್ರೈವರ್ ಎಂಬ ಸುದ್ದಿಯು ಸತ್ಯಕ್ಕೆ ದೂರವಾದದ್ದು, ಯಾವುದೇ ಒಂದೇ ಒಂದು ಬಸ್ ಅನ್ನು ಖಾಸಗಿಯವರಾಗಲಿ, ನಿವೃತ್ತಿ ಹೊಂದಿದವರಾಗಲಿ ಚಾಲನೆ ಮಾಡುತ್ತಿಲ್ಲ ಎಂದು ಕೆ‌ಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸ್ಪಷ್ಟಪಡಿಸಿದ್ದಾರೆ.

ಮೈಸೂರು ಟೂ ಚಾಮರಾಜನಗರ ಬಸ್ ನಲ್ಲಿ ಚಾಲನೆ ಮಾಡುತ್ತಿರುವವರು ಖಾಸಗಿ ಬಸ್ ಡ್ರೈವರ್ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಪತ್ರಿಕಾ ಪ್ರಕಟಣೆ ನೀಡಿರುವ ಕಳಸದ್,ಕಂಡಕ್ಟರ್ ಹಾಗೂ ಡ್ರೈವರ್ ರನ್ನು ಕೇಳಿದರೆ ಅವರು ತಮ್ಮನ್ನು ಸಾರಿಗೆ ನೌಕರರು ಎಂದು ಒಪ್ಪಿ ಕೊಳ್ಳುತ್ತಿಲ್ಲದಿರುವುದು ನಿಜ. ಸಹ ನೌಕರರಿಂದ ಅವರಿಗೆ ನಿರಂತರ ಬೆದರಿಕೆ, ಹಲ್ಲೆ ಮಾಡುವುದಾಗಿ ಕರೆಗಳು ಬರುತ್ತಿರುವುದರಿಂದ ಅವರು ತಮ್ಮ ಗುರುತನ್ನು ಮರೆಮಾಚುತ್ತಿದ್ದಾರೆ.

ಬಸ್ ನಂಬರ್ ಕೆಎ57ಎಫ್4004 ಬಸ್ ಚಾಮರಾಜನಗರ ಘಟಕದ ಬಸ್ಸು, ಚಾಲಕ ಅಬೀದ್ ಹುಸೇನ್ Badge No.2202 ರವರು ಬಸ್ಸು ಚಾಲನೆ ಮಾಡುತ್ತಿರುವುದು ಎಂದು ಸ್ಪಷ್ಟೀಕರಣ ನೀಡಲಾಗಿದೆ. 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳು ಜನರ ಜೀವನಾಡಿ. ಸಾರಿಗೆ ನೌಕರರು ಸಂಸ್ಥೆಗಳ ಬೆನ್ನೆಲುಬು. ಸಾರಿಗೆ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗಿರುವುದು ಅಕ್ಷರಶಃ ಸತ್ಯ. ಆದರೆ ಈ ಮುಷ್ಕರಕ್ಕೆ ಪ್ರಚೋದನೆ ನೀಡಿದ್ದಾಗ್ಯೂ ಸಹ, ಕರ್ತವ್ಯ ನಿರ್ವಹಿಸುತ್ತಿರುವಾಗ ಸಹ ಸಿಬ್ಬಂದಿಗಳಿಂದ ಜೀವ ಬೆದರಿಕೆ ಇದ್ದಾಗಲೂ, ಬಸ್ಸುಗಳ ಕಾರ್ಯಾಚರಣೆ ಸರ್ವ ರೀತಿಯ ಅಡಚಣೆ ಮಾಡಿದಾಗಲೂ, ಎದೆಗುಂದದೆ, ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವಲ್ಲಿ ಬದ್ಧತೆ ತೋರುತ್ತಿರುವ ನೌಕರರು ಮತ್ತು ಅಧಿಕಾರಿಗಳಿಗೆ ಘಟಕ/ಬಸ್ ನಿಲ್ದಾಣಗಳ ಹತ್ತಿರ ಕೆಲ‌ ನೌಕರರು ಬಂದು ಅವಾಚ್ಯ ಶಬ್ದಗಳಿಂದ ಮಾತನಾಡುವುದು, ಹಲ್ಲೆ‌ನಡೆಸುವುದು,‌ ‌ಈಗಾಗಲೇ ಒಬ್ಬರಿಗೆ ವಿಷ ಕುಡಿಸಿದ್ದೇವೆ ,‌ಇನ್ನೂ 10 ಜನಕ್ಕೆ ವಿಷ ಕುಡಿಸಿ ನಾಟಕ ಮಾಡಲು ತಯಾರು ಮಾಡಿದ್ದೇವೆ ಎನ್ನುವ ಮಾತಗಳನ್ನು ಹೇಳುತ್ತಿರುವುದು ನಿಜಕ್ಕೂ ಆಘಾತಕಾರಿ. 

ಯಾವುದೇ ಖಾಸಗಿ ಚಾಲಕರಾಗಲಿ, ನಿವೃತ್ತಿ ಹೊಂದಿದ ಚಾಲಕರಾಗಲಿ ಬಸ್ಸುಗಳ ಚಾಲನೆ ಮಾಡುತ್ತಿಲ್ಲ, ಸಹ‌ ನೌಕರರ ಹೆದರಿಕೆ ಮತ್ತು ಭಯದಿಂದ ಅವರು ತಮ್ಮ ಗುರುತನ್ನು ಮರೆಮಾಚುವಂತಾಗಿದೆ. ಯಾವುದೇ ನೌಕರರು ತಮ್ಮ ಸಹ ನೌಕರರೊಂದಿಗೆ ಇಷ್ಟು ಅಮಾನವೀಯವಾಗಿ ನಡೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ‌.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನೌಕರರ ಮೇಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ರೀತಿಯ ಪ್ರಕರಣಗಳು ವರದಿಯಾದ ‌ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯನ್ನು‌ ಸಂಪರ್ಕಿಸಿ ದೂರು ದಾಖಲಿಸಲು ಸಂಬಂಧಪಟ್ಟವರಿಗೆ ಸೂಚಿಸಿದೆ.ಈ ರೀತಿಯ ಪ್ರಕರಣಗಳಲ್ಲಿ ಹೆಸರಿಸಿದ ನೌಕರರಿಗೆ ನಿಗಮವು ಅತೀ ಗಂಭೀರ ಪ್ರಕರಣವೆಂದು ಪರಿಗಣಿಸಿ, ಕಾನೂನಾತ್ಮಕವಾಗಿ ಮೊಕದ್ದಮೆ‌ ದಾಖಲಿಸುವ ಪ್ರಕ್ರಿಯೆಗೆ ಮುಂದಾಗಿದೆ. ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಹೆದರುವ ಅಗತ್ಯವಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com