ಹೊರವರ್ತುಲ ರಸ್ತೆ, ಏರ್ಪೋರ್ಟ್ ಮೆಟ್ರೋ ರೈಲು ಮಾರ್ಗದಿಂದ ನಗರದ ಸಮಗ್ರ ಅಭಿವೃದ್ಧಿಯ ಚಿತ್ರಣ ಬದಲು: ತೇಜಸ್ವಿ ಸೂರ್ಯ

"ಔಟರ್ ರಿಂಗ್ ರೋಡ್ ಮತ್ತು ಏರ್ಪೋರ್ಟ್ ಮಾರ್ಗಗಳ ಮೆಟ್ರೋ ಹಾಗೂ ಸಬರ್ಬನ್ ರೈಲು ಯೋಜನೆಯ ಅನುಮೋದನೆಯಿಂದ ನಗರವು 'ಫಾಸ್ಟ್ ಟ್ರಾಕ್'ಗೆ ಅಡಿಯಿಡಲಿದೆ"- ಸಂಸದ ತೇಜಸ್ವೀ ಸೂರ್ಯ 
ಪತ್ರಿಕಾಗೋಷ್ಠಿಯಲ್ಲಿ ಸಂಸದ ತೇಜಸ್ವಿ ಸೂರ್ಯ, ಆರೋಗ್ಯ ಸಚಿವ ಡಾ. ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್
ಪತ್ರಿಕಾಗೋಷ್ಠಿಯಲ್ಲಿ ಸಂಸದ ತೇಜಸ್ವಿ ಸೂರ್ಯ, ಆರೋಗ್ಯ ಸಚಿವ ಡಾ. ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್

ಬೆಂಗಳೂರು: ಔಟರ್ ರಿಂಗ್ ರೋಡ್ ಮತ್ತು ಏರ್ಪೋರ್ಟ್ ಮಾರ್ಗಗಳ ಮೆಟ್ರೋ ಹಾಗೂ ಸಬರ್ಬನ್ ರೈಲು ಯೋಜನೆಯ ಅನುಮೋದನೆಯಿಂದ ನಗರವು 'ಫಾಸ್ಟ್ ಟ್ರಾಕ್'ಗೆ  ಅಡಿಯಿಡಲಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕ್ಯಾಬಿನೆಟ್ ಸಮಿತಿಯು ಬೆಂಗಳೂರು ಮೆಟ್ರೋ ಹಂತ 2A & 2B ಗೆ ಅನುಮೋದನೆ ನೀಡಿದ್ದು, ಸಿಲ್ಕ್ ಬೋರ್ಡ್ ನಿಂದ ಕೆ ಆರ್ ಪುರಂ( ಹಂತ 2A)  ಮತ್ತು ಕೆ ಆರ್ ಪುರಂ ನಿಂದ ಹೆಬ್ಬಾಳ ಮಾರ್ಗವಾಗಿ ಏರ್ಪೋರ್ಟ್ ( ಹಂತ 2B) ಮಾರ್ಗವು 14,788 ಕೋಟಿ ರೂ,ಗಳ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿದೆ.

ಯೋಜನೆಯ ಮಹತ್ವದ ಕುರಿತು ವಿವರಿಸಿದ ಸಂಸದ ತೇಜಸ್ವೀ ಸೂರ್ಯ, ಭಾರತದ 167 ಬಿಲಿಯನ್ ಡಾಲರ್ ಗಳ ಐ ಟಿ ಆದಾಯದಲ್ಲಿ ಬೆಂಗಳೂರು ನಗರವು ಶೇ 40 ರಷ್ಟು ಪಾಲು ಹೊಂದಿದ್ದು, ಔಟರ್ ರಿಂಗ್ ರೋಡ್ ನಲ್ಲಿರುವ ಐ ಟಿ ಕಂಪೆನಿಗಳಿಂದಲೇ ಶೇ.32 ರಷ್ಟು ಕೊಡುಗೆ ಇದ್ದು, ಸದರಿ 17ಕಿಮೀ  ಮಾರ್ಗವು ಮೆಟ್ರೋ ರೈಲು ಸೌಲಭ್ಯದಿಂದ ವಂಚಿತವಾಗಿತ್ತು. ಹಲವು ಕಂಪನಿಗಳ 5.5 ಲಕ್ಷ ಉದ್ಯೋಗಿಗಳು ಸಂಚರಿಸಲಿರುವ ಈ ಮಾರ್ಗದಲ್ಲಿ ಸರಾಸರಿ ವಾಹನ ವೇಗವು ಪ್ರತಿ ಘಂಟೆಗೆ/4 ಕಿಮೀ ಮಂದಗತಿಗೆ ಇಳಿದಿರುವುದು ಈ ಮಾರ್ಗದ ಸಂಚಾರ ದಟ್ಟಣೆಗೆ ಹಿಡಿದ ಕೈಗನ್ನಡಿಯಾಗಿದೆ. ಆದ್ದರಿಂದ ಈ ಯೋಜನೆಯ ಪ್ರಾಮುಖ್ಯತೆ, ತ್ವರಿತಗತಿಯ ಅನುಮೋದನೆಗೆ ಸಂಬಂಧಿಸಿದಂತೆ ಕೇಂದ್ರ ನಗರಾಭಿವೃದ್ಧಿ ಸಚಿವರಾದ ಹರ್ದೀಪ್ ಸಿಂಗ್ ಪುರಿ, ನೀತಿ ಆಯೋಗದ ಸಿ.ಇ. ಓ ಅಮಿತಾಭ್ ಕಾಂತ್ ರನ್ನು ಹಲವು ಬಾರಿ ಭೇಟಿಯಾಗಿ ವಿವರಿಸಿದ್ದಾಗಿ ತಿಳಿಸಿದರು. 

ಇದಷ್ಟೇ ಅಲ್ಲದೇ ಮೆಟ್ರೋ ಹಾಗೂ ಸಬರ್ಬನ್ ರೈಲು ಯೋಜನೆಯ ಮಹತ್ವ,ಅಗತ್ಯತೆ ಕುರಿತು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಕೇಂದ್ರ ರೈಲ್ವೆ ಸಚಿವರಾದ ಪಿಯೂಷ್ ಗೋಯಲ್ ರಿಗೂ ಮನವರಿಕೆ ಮಾಡಿದ್ದು, ಈ ಕುರಿತು ಸಂಸತ್ತಿನಲ್ಲಿಯೂ ಮಾತನಾಡಿ, ತ್ವರಿತಗತಿಯಲ್ಲಿ ಈ ಎರಡೂ ಮೆಟ್ರೋ ಮಾರ್ಗಗಳಿಗೆ ಅನುಮೋದನೆ ನೀಡುವಂತೆ ಗಮನ ಸೆಳೆದಿದ್ದನ್ನು ಸಂಸದರು ವಿವರಿಸಿದರು.

2025 ರ ಹೊತ್ತಿಗೆ ಈ ಮಾರ್ಗಗಳಲ್ಲಿ ಪ್ರತಿನಿತ್ಯ 7.5 ಲಕ್ಷ ಪ್ರಯಾಣಿಕರು ಸಂಚರಿಸುವ ಅಂದಾಜಿದೆ. ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆಯ ಬಹುಮುಖ್ಯ 'ಜೀವನಾಡಿ'ಯಾಗಿ ಈ 2 ಮಾರ್ಗಗಳು ಕಾರ್ಯನಿರ್ವಹಿಸಲಿದ್ದು, ಯೋಜನೆಗೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ" ಎಂದು ಸಂಸದ ತೇಜಸ್ವೀ ಸೂರ್ಯ ಹೇಳಿದರು.

ಸಬರ್ಬನ್ ರೈಲು ಮತ್ತು ಮೆಟ್ರೋ ಮಾರ್ಗಗಳ ಅನುಷ್ಠಾನದಿಂದ ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಕಾಣಲಿದ್ದು, ಕೇಂದ್ರ ಸರ್ಕಾರಕ್ಕೆ ನನ್ನ ಧನ್ಯವಾದಗಳು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. 

ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ನವರು ಈ ಯೋಜನೆಯ ಅನುಷ್ಠಾನವನ್ನು ಆದ್ಯತೆಯ ಮೇರೆಗೆ ಪರಿಗಣಿಸಿ, ಸಮಗ್ರ ಒಪ್ಪಿಗೆ ನೀಡಿದ್ದನ್ನು ನಾನು ಶ್ಲಾಘಿಸುತ್ತೇನೆ" ಎಂದು ಸಂಸದ ತೇಜಸ್ವೀ ಸೂರ್ಯ ಕೃತಜ್ಞತೆ ಸಲ್ಲಿಸಿದರು.

ಮೆಟ್ರೋ ಹಂತ 2A & 2B  ಮಾರ್ಗಗಳ ಅನುಷ್ಠಾನದಿಂದ ಏರ್ಪೋರ್ಟ್ ಗೆ ತೆರಳುವ ಸಾವಿರಾರು ನಾಗರಿಕರಿಗೆ ಅನುಕೂಲವಾಗಲಿದ್ದು,  ಕೆ ಆರ್ ಪುರಂ, ಯಲಹಂಕ ಮತ್ತು ಹೆಬ್ಬಾಳ ರೇಲ್ವೆ ನಿಲ್ದಾಣಗಳಲ್ಲಿನ ಇಂಟರ್ ಚೇಂಜ್ ವ್ಯವಸ್ಥೆಯಿಂದ  ಟ್ರಾಫಿಕ್ ಹಾಟ್ ಸ್ಪಾಟ್ ಗಳಲ್ಲಿ ಸಂಚಾರ ಸಮಸ್ಯೆಗೆ ಕಡಿವಾಣ ಬೀಳಲಿದ್ದು,  ಹೊಸೂರು ರಸ್ತೆ, ಸರ್ಜಾಪುರ, ವೈಟ್ ಫೀಲ್ಡ್, ಓಲ್ಡ್ ಮದ್ರಾಸ್ ರಸ್ತೆ ಮತ್ತು ಬಳ್ಳಾರಿ ರಸ್ತೆಗಳಲ್ಲಿನ ಸಂಚಾರ ವ್ಯವಸ್ಥೆ ಕೂಡ ಸರಾಗವಾಗಿ ತೆರಳಲು ಸಹಕಾರಿಯಾಗಲಿದೆ" ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com