ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ವಿಳಂಬದಿಂದ ಇನ್ನೂ ಸಿಕ್ಕಿಲ್ಲ ಸ್ವಾತಂತ್ರ್ಯ

ಭಾರತ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆಗೆ ಸರ್ವಸನ್ನದ್ಧವಾಗಿದೆ. ಆದರೆ ಈ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ವಿಳಂಬದ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ.
ಹಿರಿಯ ನಾಗರಿಕರು (ಸಾಂಕೇತಿಕ ಚಿತ್ರ)
ಹಿರಿಯ ನಾಗರಿಕರು (ಸಾಂಕೇತಿಕ ಚಿತ್ರ)

ಮೈಸೂರು: ಭಾರತ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆಗೆ ಸರ್ವಸನ್ನದ್ಧವಾಗಿದೆ. ಆದರೆ ಈ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ವಿಳಂಬದ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ.

ಮೈಸೂರಿನಲ್ಲಿ 90 ಕ್ಕೂ ಹೆಚ್ಚು ಮಂದಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಅವಲಂಬಿಗಳು ಮಾಸಿಕ 10,000 ರೂಪಾಯಿಗಳ ಪಿಂಚಣಿ ಪಡೆಯಬೇಕಿದ್ದು, ಏಪ್ರಿಲ್ ನಿಂದ ಅವರಿಗೆ ಪಿಂಚಣಿ ಹಣ ಬಂದಿಲ್ಲ. 

ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಪಿಂಚಣಿಗೆ ಸಂಬಂಧಿಸಿದ ಕಡತಗಳನ್ನು  ಜಿಲ್ಲಾಡಳಿತ ಇತ್ಯರ್ಥಗೊಳಿಸಿದ್ದು, ಸ್ವಾತಂತ್ರ್ಯ ಹೋರಾಟಗಾರರ ಬ್ಯಾಂಕ್ ಖಾತೆಗೆ ಪಿಂಚಣಿ ಮೊತ್ತವನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಹಲವು ಮಂದಿ ಸ್ವಾತಂತ್ರ್ಯ ಹೋರಾಟಗಾರರಿಗೆ ಇನ್ನೂ ಬಾಕಿ ಹಣ ಬಂದಿಲ್ಲ. ಈ ರೀತಿಯ ವಿಳಂಬ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುತ್ತದೆ ಹಾಗೂ ಸ್ವಾತಂತ್ರ್ಯ ದಿನಾಚರಣೆ ವೇಳೆಯಷ್ಟೇ ಅಧಿಕಾರಿಗಳನ್ನು ತಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದು ಸ್ವಾತಂತ್ರ್ಯ ಹೋರಾಟಗಾರರು ಆರೋಪಿಸಿದ್ದಾರೆ. 

ಏಪ್ರಿಲ್ ನಿಂದ ಪಿಂಚಣಿ ಹಣ ಬಾರದೇ ಇರುವ ಬಗ್ಗೆ ಮಾತನಾಡಿರುವ ಮೈಸೂರು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ವೈ.ಸಿ ರೇವಣ್ಣ, ಪಿಂಚಣಿ ಹಣ ಬರುವುದು ವಿಳಂಬವಾಗಿರುವುದು  ಅನಾರೋಗ್ಯದಿಂದ ಬಳಲುತ್ತಿರುವ ತಾವು ಹಾಗೂ ತಮ್ಮ ಅವಲಂಬಿತರಿಗೆ ಮತ್ತಷ್ಟು ತೊಂದರೆಯಾಗಿದೆ. 

"ಕೊರೋನಾದಂತಹ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿಯೂ ಈ ವಿಳಂಬ ಧೋರಣೆ ಮುಂದುವರೆದಿದ್ದು, ಔಷಧಗಳನ್ನೂ ಖರೀದಿಸಲು ಸಾಧ್ಯವಾಗದ ಮಟ್ಟಿಗೆ ಸ್ವಾತಂತ್ರ್ಯ ಹೋರಾಟಗಾರರನ್ನು ಬಾಧಿಸಿದೆ" ಎಂದು ಹೇಳಿದ್ದಾರೆ.

ಈ ಹಿಂದೆ ಖಜಾನೆಯಿಂದ ನೇರವಾಗಿ ನಮ್ಮ ಬ್ಯಾಂಕ್ ಖಾತೆಗಳಿಗೆ ಪಿಂಚಣಿ ಹಣ ಬರುತ್ತಿತ್ತು. ಆದರೆ ಹೊಸ ವ್ಯವಸ್ಥೆ ಪರಿಚಯಿಸಿದಾಗಿನಿಂದಲೂ ಈ ಸಮಸ್ಯೆ ಎದುರಾಗುತ್ತಿದೆ. ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸಬೇಕೆಂದು 94 ವರ್ಷದ ಹಿರಿಯರಾದ ರೇವಣ್ಣ ಹೇಳಿದ್ದಾರೆ. 

ಸ್ವಾತಂತ್ರ್ಯ ದಿನಾಚರಣೆ ಬಂದಾಗ ಮಾತ್ರ ನಮ್ಮ ದೂರುಗಳಿಗೆ ಸ್ಪಂದಿಸುತ್ತಾರೆ ಎನ್ನುತ್ತಾರೆ ಮತ್ತೋರ್ವ ಸ್ವಾತಂತ್ರ್ಯ ಹೋರಾಟಗಾರ. 

"ಕಳೆದ ವರ್ಷವೂ 3 ತಿಂಗಳ ಪಿಂಚಣಿ ಹಣ ಸಿಕ್ಕಿರಲಿಲ್ಲ. ಈ ವರ್ಷವೂ ಇದೇ ರೀತಿಯಾಗಿದೆ. ಈಗ ಹಲವರಿಗೆ ಪಿಂಚಣಿ ಹಣ ದೊರೆತಿದೆ. ಆದರೆ ಇನ್ನೂ ಕೆಲವರಿಗೆ ಸಿಕ್ಕಿಲ್ಲ. ಇನ್ನು ಕೆಲವು ವರ್ಷಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಹಲವರು ಇನ್ನು ಕೆಲವು ವರ್ಷಗಳ ನಂತರ ಇರುವುದೇ ಇಲ್ಲವಾದ್ದರಿಂದ ಸ್ವಾತಂತ್ರ್ಯ ಹೋರಾಟಗಾರರ ಯೋಜನೆಯೇ ಇಲ್ಲವಾಗಬಹುದು. ಕನಿಷ್ಠ ಅಲ್ಲಿಯವರೆಗಾದರೂ ಸರ್ಕಾರ ನಮಗೆ ಸಕಾಲದಲ್ಲಿ ಪಿಂಚಣಿ ಹಣ ನೀಡಬೇಕು" ಎಂದು ಮತ್ತೋರ್ವ ಸ್ವಾತಂತ್ರ್ಯ ಹೋರಾಟಗಾರರು ಮನವಿ ಮಾಡಿದ್ದಾರೆ.

ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದು, ನಾನು ಜಿಲ್ಲಾಧಿಕಾರಿಯಾಗಿ ಬಂದ ನಂತರ ಈ ಸಮಸ್ಯೆಯನ್ನು ಬಗೆಹರಿಸಲಾಗುತ್ತಿದೆ, ಎರಡು ವಾರಗಳ ಹಿಂದೆ ಅವರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ"

ಹಳೆಯ ಪಿಂಚಣಿ ಯೋಜನೆಯನ್ನು ಜಿಲ್ಲಾಡಳಿತವೇ ಪಿಂಚಣಿ ವಿತರಿಸುವ ಕೆ-2 ಗೆ ವರ್ಗಾವಣೆ ಮಾಡಲಾಗಿದ್ದರಿಂದ ಕೆಲವು ತಾಂತ್ರಿಕ ಸಮಸ್ಯೆಗಳಿದ್ದವು. ಸ್ವತಃ ಕೆಲವು ಸ್ವಾತಂತ್ರ್ಯ ಹೋರಾಟಗಾರರನ್ನು ಭೇಟಿ ಮಾಡಿದ್ದು ಈ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಕೋವಿಡ್ ಕಾರಣ ಹೊರಗೆ ಹೋಗಲು ಸಾಧ್ಯವಾಗದೇ ಇನ್ನೂ ಕೆಲವರು ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿರಲಿಲ್ಲ.  ಇನ್ನೂ 10-20 ಪ್ರಕರಣಗಳಲ್ಲಿ ಪಿಂಚಣಿ ಬಾಕಿ ಇದೆ. ಅದನ್ನು ಶನಿವಾರ ಅಥವಾ ಸೋಮವಾರ ಬೆಳಿಗ್ಗೆ ವೇಳೆಗೆ ಇತ್ಯರ್ಥಗೊಳಿಸಲಾಗುವುದು" ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com