ಕೊಡಗು: ತಾಯಿಯ ನೆನಪುಗಳಿದ್ದ ಮೊಬೈಲ್ ಕಳೆದುಕೊಂಡಿದ್ದ ಮಡಿಕೇರಿ ಬಾಲಕಿಗೆ ಕೊನೆಗೂ ಸಿಕ್ತು ಮೊಬೈಲ್

ಕೊವಿಡ್ ಸೋಂಕಿನಿಂದಾಗಿ ಅಮ್ಮ ತೀರಿಹೋದಳು, ಅವಳ ಜತೆಗಿನ ನೆನಪುಗಳ ಚಿತ್ರಗಳಿದ್ದ ಮೊಬೈಲ್ ಸಹ ಅವಳ ಜತೆಗೇ ಕಾಣೆಯಾಗಿದೆ. ಹುಡುಕಿಕೊಡಿ ಎಂದು ಅಂಗಲಾಚಿದ್ದ ಬಾಲಕಿಗೆ ಇದೀಗ ಆಕೆಯ ಮೊಬೈಲ್ ದೊರೆತಿದೆ.
madikeri-Girl
madikeri-Girl

ಕೊಡಗು:  ಕೊವಿಡ್ ಸೋಂಕಿನಿಂದಾಗಿ ಅಮ್ಮ ತೀರಿಹೋದಳು, ಅವಳ ಜತೆಗಿನ ನೆನಪುಗಳ ಚಿತ್ರಗಳಿದ್ದ ಮೊಬೈಲ್ ಸಹ ಅವಳ ಜತೆಗೇ ಕಾಣೆಯಾಗಿದೆ. ಹುಡುಕಿಕೊಡಿ ಎಂದು ಅಂಗಲಾಚಿದ್ದ ಬಾಲಕಿಗೆ ಇದೀಗ ಆಕೆಯ ಮೊಬೈಲ್ ದೊರೆತಿದೆ.

 ದಯವಿಟ್ಟು ಆ ಮೊಬೈಲ್ ಫೋನ್ ಹುಡುಕಿಕೊಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದ ಬಾಲಕಿಗೆ ಬರೋಬ್ಬರಿ 3 ತಿಂಗಳ ನಂತರ ಆ ಭಾವನಾತ್ಮಕ ಮೊಬೈಲ್ ದೊರೆತಿದೆ. ಈ ಕುರಿತಂತೆ ಪೊಲೀಸರು ಮಾಹಿತಿ ನೀಡಿದ್ದು, ಬಾಲಕಿಯ ಮೊಬೈಲ್ ಪತ್ತೆಯಾಗಿದ್ದು, ಸಂಜೆ ಮೊಬೈಲ್  ಹಸ್ತಾಂತರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಮೊಬೈಲ್ ಇಷ್ಟುದಿನ ಎಲ್ಲಿತ್ತು ಎಂಬ ಮಾಹಿತಿಯನ್ನು ಈವರೆಗೂ ಬಹಿರಂಗಪಡಿಸಿಲ್ಲ.. 

ಕೊಡಗು ಜಿಲ್ಲೆಯ ಗುಮ್ಮನಕೊಲ್ಲಿ ಗ್ರಾಮದ ಹೃತಿಕ್ಷ ಹೆಸರಿನ ಪುಟ್ಟ ಕಂದಮ್ಮ ಕೊವಿಡ್ 2ನೇ ಅಲೆಯಲ್ಲಿ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ತಾಯಿ ಜೊತೆಗೆ ಮಾತನಾಡಲು ಬಳಸುತ್ತಿದ್ದ ಫೋನ್ ಕಾಣೆಯಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಮತ್ತು ಜಿಲ್ಲಾ ಕೊವಿಡ್ ಆಸ್ಪತ್ರೆ ಸಿಬ್ಬಂದಿಗೆ ಪತ್ರ  ಬರೆದು ತನ್ನ ತಾಯಿಯೊಂದಿಗೆ ಇದ್ದ ಮೊಬೈಲ್ ಹುಡುಕಿಕೊಡುವಂತೆ ಮನವಿ ಮಾಡಿದ್ದಳು. ನಮ್ಮ ಮನೆಯಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ನನಗೆ, ನನ್ನ ತಂದೆ ಮತ್ತು ತಾಯಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ತಂದೆ ಮತ್ತು ನಾನು ಹೋಂ ಐಸೋಲೇಷನ್​ನಲ್ಲಿ ಇದ್ದೆವು. ತಾಯಿಗೆ ಕೊರೊನಾ  ತೀವ್ರವಾಗಿದ್ದರಿಂದ ಮೇ 6ರಂದು ಜಿಲ್ಲಾ ಕೊವಿಡ್ ಆಸ್ಪತ್ರೆಗೆ ದಾಖಲಿಸಿದ್ದೆವು. ಆದರೆ ತಾಯಿ ಚಿಕಿತ್ಸೆ ಫಲಕಾರಿಯಾದೆ ಮೇ 16ರಂದು ಬೆಳಿಗ್ಗೆ 6 ಗಂಟೆಗೆ ಮೃತಪಟ್ಟಿದ್ದಾರೆ ಎಂದು ನೊಂದ ಹುಡುಗಿ ಹೃತಿಕ್ಷ ಅಳಲು ತೋಡಿಕೊಂಡಿದ್ದಳು.

‘ತಾಯಿ ಕಳೆದುಕೊಂಡು ನಾನು ತಬ್ಬಲಿಯಾಗಿದ್ದೇನೆ. ತಾಯಿ ಮೊಬೈಲ್‌ನಲ್ಲಿ ನೆನಪಿರುವ ಫೋಟೋಗಳಿವೆ’ಎಂದು ಬಾಲಕಿ ಹೃತಿಕ್ಷ ಕೊಡಗು ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮೊಬೈಲ್ ಗಾಗಿ ತನಿಖೆ ಆರಂಭವಾಗಿತ್ತು. ಇದೀಗ ಆ ಮೊಬೈಲ್ ದೊರೆತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com