ವೀಕೆಂಡ್ ಕರ್ಫ್ಯೂ ಬಗ್ಗೆ ನನಗೆ ಗೊತ್ತಿಲ್ಲ; ಅಭಿಮಾನಿಗಳ ಮುಂದೆ ಮೀಸೆ ತಿರುವಿದ ವಿನಯ್ ಕುಲಕರ್ಣಿ; ಕೊರೋನಾ ರೂಲ್ಸ್ ಬ್ರೇಕ್!

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಅವರ ಹತ್ಯೆ ಪ್ರಕರಣದಲ್ಲಿ ಸಿಬಿಐಯಿಂದ ಬಂಧನಕ್ಕೊಳಗಾಗಿ ಹಿಂಡಲಗಾ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಶನಿವಾರ ಜೈಲಿನಿಂದ ಹೊರಬಂದರು.
ವಿನಯ್ ಕುಲಕರ್ಣಿ
ವಿನಯ್ ಕುಲಕರ್ಣಿ

ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಅವರ ಹತ್ಯೆ ಪ್ರಕರಣದಲ್ಲಿ ಸಿಬಿಐಯಿಂದ ಬಂಧನಕ್ಕೊಳಗಾಗಿ ಹಿಂಡಲಗಾ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಶನಿವಾರ ಜೈಲಿನಿಂದ ಹೊರಬಂದರು.

ಜೈಲಿಂದ ಹೊರಬರುತ್ತಿದ್ದಂತೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹಣೆಗೆ ತಿಲಕವಿಟ್ಟು ಆರತಿ ಮಾಡಿ ಸ್ವಾಗತಿಸಿ ನಾಳೆ ರಕ್ಷಾ ಬಂಧನ ಹಿನ್ನೆಲೆಯಲ್ಲಿ ರಾಕಿ ಕಟ್ಟಿದರು. ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕೇವಲ ಸ್ವಾಗತ, ಸೇಬು ಹಾರ ಸನ್ಮಾನ, ಘೋಷಣೆ, ಮಹಿಳೆಯರಿಂದ ಸ್ವಾಗತ ಇವಿಷ್ಟಕ್ಕೇ ಸಂಭ್ರಮ ಸೀಮಿತವಾಗಿರಲಿಲ್ಲ.

ಅಲ್ಲಿಂದ ಅಭಿಮಾನಿಗಳು ತೆರೆದ ಕಾರಿನಲ್ಲಿ ಮೆರವಣಿಗೆ ಸಾಗಿ ಹಿಂಡಲಗಾದ ಗಣಪತಿ ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಅಲ್ಲಿ ವಿನಯ್ ಕುಲಕರ್ಣಿಯವರು ಪೂಜೆ ಸಲ್ಲಿಸಿದರು. ಆದರೆ ಇಲ್ಲಿ ಕೊರೋನಾ ನಿಯಮ ಸ್ಪಷ್ಟವಾಗಿ ಉಲ್ಲಂಘನೆಯಾಗಿರುವುದು ಕಂಡುಬಂತು. ಯುದ್ಧದಿಂದ ಗೆದ್ದು ಬಂದಂತೆ ಮೀಸೆ ತಿರುವಿದ ವಿನಯ್ ಕುಲಕರ್ಣಿ ಅಭಿಮಾನಿಗಳತ್ತ ಕೈಮುಗಿದು ಗೆದ್ದುಬಂದ ಖುಷಿಯ ಸೂಚನೆ ನೀಡಿದರು. ಅಭಿಮಾನಿಗಳು ಜೈಕಾರ ಹಾಕುತ್ತಲೇ ಇದ್ದರು.

ಬೆಳಗಾವಿಯಲ್ಲಿ ಸದ್ಯ ಕೊರೋನಾ ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಸಾಮಾನ್ಯ ಭಕ್ತರಿಗೆ ಹೊರಗೆ ಹೋಗಲು ದೇವಸ್ಥಾನಕ್ಕೆ ಪ್ರವೇಶವಿಲ್ಲ. ಹಾಗಾದರೆ ಜನಸಾಮಾನ್ಯರಿಗೆ ಒಂದು ನ್ಯಾಯ, ಜನಪ್ರತಿನಿಧಿಗಳೆ ಇನ್ನೊಂದು ನ್ಯಾಯವೇ ಎಂಬ ಪ್ರಶ್ನೆ ಇಲ್ಲಿ ಉದ್ಧವವಾಗುತ್ತಿದೆ.

ಜೈಲಿಂದ ಹೊರಬಂದ ವಿನಯ್ ಕುಲಕರ್ಣಿಯವರನ್ನು ಮೆರವಣಿಗೆ ಸಾಗಲು ಅನುಮತಿ ನೀಡಿದವರು ಯಾರು, ಪೊಲೀಸರು ಏಕೆ ಕ್ರಮ ಕೈಗೊಂಡಿಲ್ಲ, ಎಲ್ಲವನ್ನೂ ನೋಡಿ ಸುಮ್ಮನಾಗಿದ್ದೇಕೆ, ಅಷ್ಟೊಂದು ಸಂಖ್ಯೆಯಲ್ಲಿ ಸೇರಿದ ಜನರನ್ನು ನಿಯಂತ್ರಿಸಲು ಇದ್ದದ್ದು ಕೇವಲ 50 ಮಂದಿ ಪೊಲೀಸರು ಮಾತ್ರ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

ವಿನಯ್ ಕುಲಕರ್ಣಿ ಪ್ರತಿಕ್ರಿಯೆ: ಜೈಲಿನಲ್ಲಿರುವಾಗ ನಾನು ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆ, ನನ್ನಲ್ಲಿ ಬದಲಾವಣೆ ಮಾಡಿಕೊಂಡೆ, ಇನ್ನು ಮುಂದೆ ನಾನು ಬೇರೆಯ ರೀತಿಯ ರಾಜಕಾರಣಿಯಾಗಿರುತ್ತೇನೆ. ನಾನು ನಿರ್ದೋಷಿಯಾಗಿ ಹೊರಬರುವ ನಿರೀಕ್ಷೆಯಿತ್ತು, ಸುಪ್ರೀಂ ಕೋರ್ಟ್ ನನಗೆ ಜಾಮೀನು ನೀಡಿದ್ದಕ್ಕೆ ಧನ್ಯವಾದಗಳು, ಮುಂದಿನ ದಿನಗಳಲ್ಲಿ ಹೋರಾಟ ಮಾಡಿ ಸಂಪೂರ್ಣ ನಿರ್ದೋಷಿಯಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ ಎಂದರು.

ನಾನು ಜೈಲಲ್ಲಿದ್ದೆ, ನನಗೆ ಕೋವಿಡ್ ವೀಕೆಂಡ್ ಕರ್ಫ್ಯೂ ಬಗ್ಗೆ ಗೊತ್ತಿಲ್ಲ, ನನಗೆ ಹೇಗೆ ಗೊತ್ತಾಗಬೇಕು, ನಾವು ಯಾರನ್ನೂ ಇಲ್ಲಿಗೆ ಕರೆಸಿಕೊಂಡು ಅವರು ಬಂದವರಲ್ಲ, ಅವರಷ್ಟಕ್ಕೆ ಬಂದು ಸೇರಿದ್ದರು. ನನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆಗೆ ನಿಂತ ಅಭಿಮಾನಿಗಳು, ಕುಟುಂಬಸ್ಥರು, ರಾಜಕೀಯ ಮುಖಂಡರು, ಸ್ವಾಮೀಜಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದರು. 

ಪೊಲೀಸರಿಂದ ಕೇಸು ದಾಖಲು: ಕೊರೋನಾ ನಿಯಮ ಉಲ್ಲಂಘನೆಯಾಗಿದೆ ಎಂದು ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಬೆಳಗಾವಿ ಗ್ರಾಮಾಂತರ ಠಾಣೆ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದ್ದಾರೆ. ವಿನಯ್ ಕುಲಕರ್ಣಿ ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಅಭಿಮಾನಿಗಳ ವಿರುದ್ಧ ಕೇಸು ದಾಖಲಾಗಿದೆ. ದೇವಸ್ಥಾನದಲ್ಲಿನ ಭದ್ರತಾ ಸಿಬ್ಬಂದಿ ಹೊರಗೆ ಕಳುಹಿಸಿದರು. 

ಇದಕ್ಕೆ ವಿನಯ್ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರು ಯಾವ ರೀತಿ ಬೇಕಾದರೂ ಮೆರವಣಿಗೆ ಮಾಡಬಹುದು, ಏನು ಬೇಕಾದರೂ ಮಾಡಬಹುದಾ, ನನಗೆ ನ್ಯಾಯಾಂಗ ಮೇಲೆ ನಂಬಿಕೆಯಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com