ರಾಜ್ಯ ಪರಿಸರ ಇಲಾಖೆ ಯೋಜನೆ: ಬರುತ್ತಿದ್ದಾನೆ ಅರಿಶಿನ ಗಣೇಶ!

ಇಷ್ಟು ದಿನ ಚತುರ್ಥಿಗೆ ಮಣ್ಣಿನಿಂದ, ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಆಗಮಿಸುತ್ತಿದ್ದ ಗಣೇಶ ಈ ಬಾರಿ ಸಾರ್ವಜನಿಕವಾಗಿ ಬಹುತೇಕ ಕಡೆಗಳಲ್ಲಿ ಅರಿಶಿನ ರೂಪದಲ್ಲಿ ಆಗಮಿಸುತ್ತಿದ್ದಾನೆ.
ಅರಿಶಿನ ಗಣೇಶ
ಅರಿಶಿನ ಗಣೇಶ
Updated on

ಬೆಂಗಳೂರು: ಇಷ್ಟು ದಿನ ಚತುರ್ಥಿಗೆ ಮಣ್ಣಿನಿಂದ, ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಆಗಮಿಸುತ್ತಿದ್ದ ಗಣೇಶ ಈ ಬಾರಿ ಸಾರ್ವಜನಿಕವಾಗಿ ಬಹುತೇಕ ಕಡೆಗಳಲ್ಲಿ ಅರಿಶಿನ ರೂಪದಲ್ಲಿ ಆಗಮಿಸುತ್ತಿದ್ದಾನೆ. ಹೌದು, ಈ ಬಾರಿ ಇನ್ನಷ್ಟು ಪರಿಸರ ಪ್ರೇಮ ಹೆಚ್ಚಿಸಲು ಸರ್ಕಾರವೇ ಅರಿಶಿನ ಗಣೇಶನನ್ನು ತಯಾರಿಸುತ್ತಿದೆ.

ಅರಿಶಿನ ಅಂದರೇನೇ ಭಾರತೀಯ ಸಂಸ್ಕೃತಿ ಜೊತೆಗೆ ಅನಾದಿಕಾಲದಿಂದಲೂ ಗುರುತಿಸಿಕೊಂಡು ಬಂದಿರುವ ವಿಶೇಷ ವಸ್ತು. ಈ ಅರಿಶಿನಕ್ಕೂ ನಮ್ಮ ಭಾರತೀಯ ಸಂಪ್ರದಾಯಕ್ಕೂ ಅವಿನಾಭಾವ ನಂಟು. ಯಾವುದೇ ಶುಭಕಾರ್ಯವಿರಲೀ, ಪೂಜೆ ಪುನಸ್ಕಾರವಿರಲಿ ಅಲ್ಲಿ ಅರಿಶಿನ ಇರಲೇಬೇಕು. ಬೆಳಿಗ್ಗೆ ಹೊಸ್ತಿಲಲ್ಲಿ ಅರಿಶಿನವಿಟ್ಟು ದಿನ ಆರಂಭಿಸುವವರು ಬಹುತೇಕರು.

ಭಾರತೀಯರು ಇಂತಹ ಅಮೂಲ್ಯ ಅರಿಶಿನವನ್ನು ಈ ಹಿಂದಿನಿಂದಲೂ ಮನೆಮದ್ದಾಗಿ, ಅಡುಗೆಗೆ ನೈಸರ್ಗಿಕ ಬಣ್ಣವಾಗಿ, ರೋಗನಿರೋಧಕವಾಗಿ ಅಲ್ಲದೇ ನಂಜು ನಿರೋಧಕವಾಗಿಯೂ ಬಳಸುತ್ತಿದ್ದಾರೆ. ಇನ್ನು ಹೆಂಗಳೆಯರ ಸೌಂದರ್ಯವರ್ಧಕವೂ ಅರಿಶಿನವೇ ಆಗಿದೆ.

ಇಂತಹ ಬಹುಪಯೋಗಿ ಅರಿಶಿನ (ಹಳದಿ) ಇದೀಗ ಗಣೇಶನ ರೂಪದಲ್ಲಿ ಎಲ್ಲರ ಮನೆಮನೆಗೂ ಆಗಮಿಸುತ್ತಿದ್ದಾನೆ. ಅಂದ್ಹಾಗೆ ಈ ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿಶೇಷವಾದ ಯೋಜನೆಯಾಗಿ ಗಣಪತಿ ಹಬ್ಬಕ್ಕೆ 10 ಲಕ್ಷ ಅರಿಶಿನ ಗಣಪತಿ ತಯಾರಾಗುತ್ತಿವೆ.

ಅರಿಶಿನ‌ ಗಣೇಶ ಪರಿಕಲ್ಪನೆಯನ್ನು ಈ ಮೊದಲೇ ಮಾಡಲಾಗಿದ್ದು, ಪರಿಸರ ರಕ್ಷಣೆಗೆ ಇದು ಸಹಕಾರಿಯಾಗಲಿದೆ. ಅರಿಶಿಣ ಎಂದರೆ ಸಂಸ್ಕೃತಿಗೆ ಹತ್ತಿರವಾದದ್ದು. ಹೀಗಾಗಿ ಅರಿಶಿನ ಗಣೇಶನ ಅಭಿಯಾನವನ್ನು ರಾಜ್ಯ ಪರಿಸರ ಇಲಾಖೆ ಮಾಡುತ್ತಿದೆ.

ಜನರೇ ಅರಿಶಿನ ಗಣೇಶನನ್ನು ತಯಾರಿಸಲಿ ಎಂಬುದು ಇದರ ಉದ್ದೇಶವಾಗಿದ್ದು, ಪರಿಸರ ಇಲಾಖೆಯಿಂದ ಅರಿಶಿನ ಗಣೇಶನನ್ನು ನಿರ್ಮಿಸಿ ವಿತರಿಸುತ್ತಿಲ್ಲ. ಬದಲಿಗೆ ಸಂಸ್ಕೃತಿಯ ಜೊತೆಗೆ ಪರಿಸರವನ್ನು ಕಾಪಾಡುವ ಪರಿಸರ ಸ್ನೇಹಿ ಅರಿಶಿನ ಗಣೇಶನ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಭಾವನಾತ್ಮಕವಾಗಿ ಮತ್ತಷ್ಟು ಬಾಂಧವ್ಯ ಬೆಳೆಸುವ ಜೊತೆಗೆ ಮನೆಮನೆಯಲ್ಲಿ ಕಲೆಗಾರರನ್ನು ಹುಟ್ಟಿಹಾಕಲಿರುವ ಅರಿಶಿನ ಗಣೇಶ ಮಕ್ಕಳಿಗೆ ಇನ್ನಷ್ಟು ಹತ್ತಿರವಾಗಲಿದ್ದಾನೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com