ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರ ಓಡಾಟಕ್ಕೆ ನಿರ್ಬಂಧ: ಸುತ್ತೋಲೆ ಹಿಂಪಡೆದ ಮೈಸೂರು ವಿವಿ

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಳಿಕ ಮೈಸೂರು ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಚಲನವಲನ ಮೇಲೆ ನಿರ್ಬಂಧ ವಿಧಿಸಿತ್ತು. ಸಂಜೆ 6.30ರ ನಂತರ ವಿದ್ಯಾರ್ಥಿನಿಯರು ಹೊರಗೆ ಅಡ್ಡಾಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿತ್ತು.
ಮೈಸೂರು ವಿವಿ
ಮೈಸೂರು ವಿವಿ

ಬೆಂಗಳೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಳಿಕ ಮೈಸೂರು ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರ ಚಲನವಲನ ಮೇಲೆ ನಿರ್ಬಂಧ ವಿಧಿಸಿತ್ತು. ಸಂಜೆ 6.30ರ ನಂತರ ವಿದ್ಯಾರ್ಥಿನಿಯರು ಹೊರಗೆ ಅಡ್ಡಾಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿತ್ತು. ಆದರೆ ಅದಕ್ಕೆ ವ್ಯಾಪಕವಾದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸುತ್ತೋಲೆ ಹಿಂಪಡೆಯಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ ತಿಳಿಸಿದ್ದಾರೆ.

ವಿಶ್ವವಿದ್ಯಾಲಯಗಳ ಕ್ಯಾಂಪಸ್ ಗಳು ವಿಸ್ತಾರವಾಗಿರುತ್ತದೆ ಎಂಬುದು ಸಾಮಾನ್ಯ ನಿಜವಾದ ಸಂಗತಿಯಾದರೂ ವಿದ್ಯಾರ್ಥಿನಿಯರು, ಹೆಣ್ಣುಮಕ್ಕಳ ಓಡಾಟಕ್ಕೆ ನಿರ್ಬಂಧ ಹೇರುವುದು ಸರಿಯಾದ ನಿಯಮವಲ್ಲ. ಅದರ ಬದಲಿಗೆ ಕ್ಯಾಂಪಸ್ ನ್ನು ಸುರಕ್ಷಿತವಾಗಿಡಲು ಕ್ರಮ ಕೈಗೊಳ್ಳುವಂತೆ ಮೈಸೂರು ವಿವಿ ಕುಲಪತಿಗಳಿಗೆ ಸೂಚಿಸಿದ್ದೇನೆ ಎಂದು ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ವಿಶ್ವವಿದ್ಯಾಲಯ ನಿನ್ನೆ ಹೊರಡಿಸಿದ್ದ ಸುತ್ತೋಲೆಯಲ್ಲಿ ಸಂಜೆ 6.30ರ ಬಳಿಕ ಕುಕ್ಕರಹಳ್ಳಿ ಕೆರೆ ಆವರಣದಲ್ಲಿಯೂ ಜನರು ಓಡಾಡುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿತ್ತು. ಪೊಲೀಸರು ಮೌಖಿಕವಾಗಿ ನೀಡಿದ ಸೂಚನೆ ಮೇರೆಗೆ ಸುರಕ್ಷತೆ ಮತ್ತು ಮುಂಜಾಗ್ರತೆ ಕ್ರಮವಾಗಿ ವಿ.ವಿ ಈ ಸುತ್ತೋಲೆ ಹೊರಡಿಸಿತ್ತು.

ಇದೀಗ ವಿವಿ ಆವರಣದಲ್ಲಿ ಭದ್ರತಾ ಸಿಬ್ಬಂದಿ ಸಂಜೆ 6 ಗಂಟೆಯಿಂದ 9 ಗಂಟೆಯವರೆಗೆ ಗಸ್ತು ತಿರುಗುವಂತೆ ಸೂಚಿಸಲಾಗಿದೆ. 

ಇನ್ನು ಅತ್ಯಾಚಾರ ಪ್ರಕರಣವನ್ನು ಸಚಿವ ಅಶ್ವಥ ನಾರಾಯಣ ಅವರು ಖಂಡನೀಯ, ಹೆಣ್ಣು ಮಕ್ಕಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹೆಣ್ಣುಮಕ್ಕಳು ಸ್ವಾತಂತ್ರ್ಯವನ್ನು ಉಲ್ಲಂಘಿಸದಂತೆ ಅವರಿಗೆ ರಕ್ಷಣೆ ನೀಡಬೇಕಾದ್ದು ನಾಗರಿಕ ಸಮಾಜದ ಕರ್ತವ್ಯ, ಎಲ್ಲೆಲ್ಲಿ ಕ್ಯಾಂಪಸ್ ನಲ್ಲಿ ಅಗತ್ಯವಿದೆಯೋ ಅಲ್ಲಿ ಕ್ಲೋಸ್ಡ್ ಸರ್ಕ್ಯುಟ್ ಕ್ಯಾಮರಾ ಅಳವಡಿಸಬೇಕು, ವಿಶ್ವವಿದ್ಯಾಲಯ ಕ್ಯಾಂಪಸ್ ಗಳಲ್ಲಿ ತೀವ್ರ ಜಾಗ್ರತೆಯಿರಬೇಕಾಗುತ್ತದೆ. ಸರ್ಕಾರ ಈಗಾಗಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ತಂತ್ರಜ್ಞಾನ ಅಳವಡಿಕೆ ಮೂಲಕ ಕ್ರಮಗಳನ್ನು ಹೆಚ್ಚಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com