ಗೋಪಾಲಕೃಷ್ಣನನ್ನು ಬಂಧಿಸದಂತೆ ಹಿರಿಯ ನಾಯಕರೊಬ್ಬರಿಂದ ಧಮಕಿ, ಎಸ್.ಆರ್.ವಿಶ್ವನಾಥ್‌ಗೆ ಬಿಗಿಭದ್ರತೆ

ತಮ್ಮ ಹತ್ಯೆಗೆ ಸಂಚು ರೂಪಿಸಿದ್ದ ಗೋಪಾಲಕೃಷ್ಣನನ್ನು ಬಂಧಿಸದಂತೆ ಹಿರಿಯ ನಾಯಕರೊಬ್ಬರು ಸಿಸಿಬಿ ಪೋಲೀಸರಿಗೆ ಧಮಕಿ ಹಾಕಿದ್ದಾರೆಂದು ಸ್ವತಃ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಆರೋಪಿಸಿದ್ದಾರೆ.
ಶಾಸಕ ಎಸ್ ಆರ್ ವಿಶ್ವನಾಥ್
ಶಾಸಕ ಎಸ್ ಆರ್ ವಿಶ್ವನಾಥ್

ಬೆಂಗಳೂರು: ತಮ್ಮ ಹತ್ಯೆಗೆ ಸಂಚು ರೂಪಿಸಿದ್ದ ಗೋಪಾಲಕೃಷ್ಣನನ್ನು ಬಂಧಿಸದಂತೆ ಹಿರಿಯ ನಾಯಕರೊಬ್ಬರು ಸಿಸಿಬಿ ಪೋಲೀಸರಿಗೆ ಧಮಕಿ ಹಾಕಿದ್ದಾರೆಂದು ಸ್ವತಃ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಆರೋಪಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕುಳ್ಳ ದೇವರಾಜ್ ಜೈಲಿನಲ್ಲಿದ್ದು ಕ್ಷಮಾಪನ ಪತ್ರ ಕಳುಹಿಸಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಯುವ ಬಗ್ಗೆ ಗೃಹ ಸಚಿವರಿಗೆ ಸೂಕ್ಷ್ಮವಾಗಿ ತಿಳಿಸಿದ್ದೆ. ಕುಳ್ಳ ದೇವರಾಜ್ ಗೋಪಾಲಕೃಷ್ಣನ ಪರಮ ಶಿಷ್ಯ. ಅವನು ತಾನು ಮಾಡಿಸಿರುವ ಬಗ್ಗೆ ಯಾರಿಗೂ ಗೊತ್ತಾಗಬಾರದು ಎಂದು ಹೇಳಿದ್ದಾನೆ. ಸುಮಾರು ಮೂರು ತಾಸಿಗೂ ಹೆಚ್ಚು ಇದ್ದೆ. ನಾನು ಎಷ್ಟೊತ್ತಿಗೆ ಎಲ್ಲಿ ಹೋಗುತ್ತೇನೆ. ಎಷ್ಟೊತ್ತಿಗೆ ಹೊಡೀಬೇಕು ಅಂಥ ಮೇಲಿಂದ ಮೇಲೆ ಹೇಳುತ್ತಾನೆ. ಇದುವರೆಗೆ ಕೊಲೆಗೆ ಪ್ರಯತ್ನ ನಡೆದಿಲ್ಲ. ಆದರೆ, ಷಡ್ಯಂತ್ರ ನಡೆದಿದೆ. ನನಗೆ ಯಾವುದೇ ರಕ್ಷಣೆ ಬೇಕಿಲ್ಲ. ನನ್ನ ಶಕ್ತಿ ಮೇಲೆ ನನಗೆ ನಂಬಿಕೆ ಇದೆ. ಯಾವುದೇ ರಕ್ಷಣೆ ಬೇಕಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಗೋಪಾಲಕೃಷ್ಣ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟವರು. ಗೋಪಾಲಕೃಷ್ಣ ಏಕೆ ನನ್ನ ಕೊಲೆಗೆ ಸಂಚು ಹೂಡಿದರೋ ಗೊತ್ತಿಲ್ಲ. ಗೋಪಾಲಕೃಷ್ಣ ತಮ್ಮ ಎದುರಾಳಿನೇ ಅಲ್ಲ. ದ್ವೇಷದ ರಾಜಕಾರಣ ಮಾಡಿಲ್ಲ. ಹೀಗಿದ್ದರೂ ಗೋಪಾಲಕೃಷ್ಣ ಸಂಚು ಏಕೆ ರೂಪಿಸಿದರೋ ಗೊತ್ತಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.

ಈ ಸಂಬಂಧ ಗೃಹ ಸಚಿವರಿಗೆ ದೂರು ನೀಡಿದ್ದು, ಮುಖ್ಯಮಂತ್ರಿಗಳಿಗೂ ಹತ್ಯೆ ಸಂಚು ಬಗ್ಗೆ ಮಾಹಿತಿ ನೀಡಿದ್ದೇನೆ. ಕುಳ್ಳ ದೇವರಾಜ ನನಗೆ ಪರಿಚಯವಾದರೂ ಆತ ಬಿಜೆಪಿ ಪಕ್ಷದ ಕಾರ್ಯಕರ್ತ ಅಲ್ಲ. 32 ಎಕರೆ ಜಮೀನು ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದರು.

ಜಮೀನ್ದಾರನಾಗಿದ್ದರೂ ಜಮೀನಿನಲ್ಲಿ ಬೆಳೆ ಬೆಳೆಯಲು ಆಗುತ್ತಿಲ್ಲ. ಅಕ್ರಮ ಜಮೀನು ಪಡೆಯುವ ಅಗತ್ಯ ನನಗೆ ಇಲ್ಲ. ಗೋಪಾಲಕೃಷ್ಣಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ. ನಮ್ಮ ಪಕ್ಷ ಸರ್ಕಾರ ನನ್ನ ಜೊತೆ ಇದೆ. ಅವರು ವೀರಪ್ಪ ಮೊಯಿಲಿ ಶಿಷ್ಯ. ಅವರು ವಿಚಾರವಂತರಿದ್ದಾರೆ. ಈ ಬಗ್ಗೆ ತನಿಖೆಯಿಂದ ಎಲ್ಲ ಹೊರಬರಲಿ. ನಮ್ಮ ಪೋಲೀಸರ ಮೇಲೆ ನನಗೆ ನಂಬಿಕೆ ಇದೆ. ಕಡಬಗೆರೆ ಸೀನನಿಂದ ಈಗ ಯಾವುದೇ ರೀತಿಯ ತೊಂದರೆ ಇಲ್ಲ. ಅವನು ಈಗ ತನ್ನ ಪಾಡಿಗೆ ಇದ್ದಾರೆ ಎನ್ನುವ ಮೂಲಕ ಕಡಬಗೆರೆ ಸೀನಗೂ ತಮಗೂ ಈಗ ಸಂಬಂಧವಿಲ್ಲ ಎಂಬುದನ್ನು ವಿಶ್ವನಾಥ್ ಸ್ಪಷ್ಟಪಡಿಸಿದರು.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ಕರೆ ಮಾಡಿ ಧೈರ್ಯ ತುಂಬಿದ್ದಾರೆ. ನಮ್ಮ ರಾಜ್ಯಕ್ಕೆ ಈ ರೀತಿಯ ದ್ವೇಷದ ರಾಜಕಾರಣ ಒಳ್ಳೆಯದಲ್ಲ. ಕೆಲವು ಕಾಂಗ್ರೆಸ್ ನಾಯಕರು ಇದನ್ನು ಸಮರ್ಥನೆ ಮಾಡಿಕೊಳ್ಳುವುದು ಬೇಡ. ಇದು ಒಳ್ಳೆಯ ಬೆಳವಣಿಗೆಯಲ್ಲ. ನೀವು ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಆಗ್ರಹಿಸಿ, ಮುಂದೆ ಈ ರೀತಿಯ ಬೆಳವಣಿಗೆ ರಾಜ್ಯದಲ್ಲಿ ನಡೆಯಬಾರದು. ಬೆಂಗಳೂರಿನ ರೌಡಿಗಳೆಲ್ಲಾ ವಿಶ್ವನಾಥ ಬಳಿ ಇದ್ದಾರೆ ಎಂದು ಹೇಳುವ ಕಾಂಗ್ರೆಸ್‌ನ ಕೆಲವರೇನು ಸಾದುಸಂತರ ಜೊತೆಯಲ್ಲಿದ್ದಾರೆಯೇ? ಎಂದು ತಿರುಗೇಟು ನೀಡಿದರು.

ನನಗೆ ರಕ್ಷಣೆ ಕೊಡುತ್ತೇನೆ ಎನ್ನುವ ಕಾಂಗ್ರೆಸಿಗರು ಅಖಂಡ ಶ್ರೀನಿವಾಸರನ್ನೇ ರಕ್ಷಿಸಲಿಲ್ಲ. ಇನ್ನು ನನ್ನೇನು ರಕ್ಷಣೆ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಂತವರಿದ್ದರೇನೆ ಬಿಜೆಪಿಗೆ ಬೆಲೆ ಬರುತ್ತದೆ ಎಂದು ವಿಶ್ವನಾಥ್ ಮಾರ್ಮಿಕವಾಗಿ ನುಡಿದರು.

ಎಸ್.ಆರ್.ವಿಶ್ವನಾಥ್‌ಗೆ ಬಿಗಿಭದ್ರತೆ
ಬೆಂಗಳೂರು/ಶಿವಮೊಗ್ಗ: ಯಲಹಂಕ ಬಿಜೆಪಿ ಶಾಸಕರೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್‌ ಹತ್ಯೆಗೆ ಸಂಚು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಕಾಂಗ್ರೆಸ್ ಪಕ್ಷದ ಗೋಪಾಲಕೃಷ್ಣ ಅವರು ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಹತ್ಯೆಗೆ ರಾಜಕೀಯ ಕಾರಣ ಎನ್ನಲಾಗಿದೆಯಾದರೂ ಗೃಹ ಇಲಾಖೆ ಪ್ರಾಥಮಿಕ ತನಿಖೆ ನಡೆಸುತ್ತಿದ್ದು, ಇನ್ನೂ ಸೂಕ್ತ ಗಂಭೀರ ತನಿಖೆಗೆ ಮುಂದಾಗಿದೆ.

ಎಸ್.ಆರ್.ವಿಶ್ವನಾಥ್ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲು ಇಲಾಖೆ ಮುಂದಾಗಿರುವುದಾಗಿ ಶಿವಮೊಗ್ಗದಲ್ಲಿ ಸ್ಪಷ್ಟಪಡಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ಈ ಬಗ್ಗೆ,ಸೂಕ್ತ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಬಗ್ಗೆ ಸ್ವತಃ ವಿಶ್ವನಾಥ್ ತಮ್ಮೊಂದಿಗೆ ಮಾತನಾಡಿದ್ದಾರೆ. ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದೆ. ಶಾಸಕರ ಮನವಿಯಂತೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com