ತುಮಕೂರು: 3 ತಿಂಗಳ ಹಿಂದೆ ಶವ ಸಂಸ್ಕಾರ ಮಾಡಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷ; ಕುಟುಂಬಸ್ಥರಲ್ಲಿ ಆತಂಕ

3 ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಯ ಶವಸಂಸ್ಕಾರ, ತಿಥಿಕಾರ್ಯ ಎಲ್ಲವೂ ಮುಗಿದಿತ್ತು. ಕುಟುಂಬಸ್ಥರು ಬಹುತೇಕ ನೋವಿನಿಂದ ಹೊರಬಂದಿದ್ದರು. ಆದ್ರೆ ಅಂದು ಮೃತಪಟ್ಟಿದ್ದ ಎನ್ನಲಾಗಿದ್ದ ವ್ಯಕ್ತಿ 3 ತಿಂಗಳ ನಂತ್ರ ದಿಢೀರ್ ಪ್ರತ್ಯಕ್ಷನಾಗಿದ್ದಾನೆ.
ಮನೆಗೆ ಮರಳಿದ ನಾಗರಾಜಪ್ಪ
ಮನೆಗೆ ಮರಳಿದ ನಾಗರಾಜಪ್ಪ

ತುಮಕೂರು: 3 ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಯ ಶವಸಂಸ್ಕಾರ, ತಿಥಿಕಾರ್ಯ ಎಲ್ಲವೂ ಮುಗಿದಿತ್ತು. ಕುಟುಂಬಸ್ಥರು ಬಹುತೇಕ ನೋವಿನಿಂದ ಹೊರಬಂದಿದ್ದರು. ಆದ್ರೆ ಅಂದು ಮೃತಪಟ್ಟಿದ್ದ ಎನ್ನಲಾಗಿದ್ದ ವ್ಯಕ್ತಿ 3 ತಿಂಗಳ ನಂತ್ರ ದಿಢೀರ್ ಪ್ರತ್ಯಕ್ಷನಾಗಿದ್ದಾನೆ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿರೋ ಪ್ರೇಮಲತಾರ ತಂದೆ ನಾಗರಾಜಪ್ಪ 13 ವರ್ಷದ ಹಿಂದೆ ಚಿಕ್ಕಮಾಲೂರನ್ನು ತೊರೆದು ಹೋಗಿದ್ದರು.

3 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವಾಸವಿರುವ ನಾಗರಾಜಪ್ಪನ ಎರಡನೇ ಮಗಳಾದ ನೇತ್ರಾವತಿಯ ಮನೆಯಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದರು. ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಸಹಾಯಕ ನರ್ಸ್ ಆಗಿ ಕೆಲಸ ಮಾಡುತ್ತಿರುವ ನೇತ್ರಾವತಿ ಅಂದಿನಿಂದಲೂ ತಂದೆ ನಾಗರಾಜಪ್ಪನನ್ನು ನೋಡಿಕೊಳ್ಳುತ್ತಿದ್ದರು.

ಮಗಳು ಕೆಲಸ ಮಾಡುವ ಆಸ್ಪತ್ರೆಯಲ್ಲಿಯೇ ನಾಗರಾಜಪ್ಪ ಸಹ ಚಿಕ್ಕಪುಟ್ಟ ಕೆಲಸ ಮಾಡಿಕೊಂಡಿದ್ದರು. ಆದರೆ ಮೂರು ತಿಂಗಳ ಹಿಂದೆ ಇದ್ದಕ್ಕಿದಂತೆ ಮದ್ಯ ವ್ಯಸನಿಯಾಗಿದ್ದ ನಾಗರಾಜಪ್ಪ ಮತ್ತೆ ಕಾಣೆಯಾಗಿದ್ದಾರೆ. ಎಷ್ಟೇ ಹುಡುಕಿದರೂ ಯಾರಿಗೂ ಸಿಕ್ಕಿರಲಿಲ್ಲ.

ನಾಗರಾಜಪ್ಪ ಕಾಣೆಯಾದ 8 ದಿನದ ಬಳಿಕ ಅಂದ್ರೆ ಸೆಪ್ಟೆಂಬರ್ 8ರಂದು ಸೆಂಟ್ಜಾನ್ಸ್ ಆಸ್ಪತ್ರೆ ಕಾಂಪೌಂಡ್ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಆಸ್ಪತ್ರೆಯ ಸಿಬ್ಬಂದಿ ನೇತ್ರಾವತಿಗೆ ವಿಷಯ ತಿಳಿಸಿದ್ದು, ತಂದೆ ನಾಗರಾಜಪ್ಪನೇ ಮೃತಪಟ್ಟಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಅಪರಿಚಿತ ಶವ ನಾಗರಾಜಪ್ಪನ ಹೋಲಿಕೆ ಇದ್ದಿದ್ದರಿಂದ ಮಗಳು ನೇತ್ರಾವತಿ ಸಹ ಶವ ತನ್ನ ತಂದೆಯದ್ದೇ ಎಂದು ಒಪ್ಪಿಕೊಂಡು ಈ ಬಗ್ಗೆ ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಚಿಕ್ಕಮಾಲೂರಿಗೆ ಶವ ತಂದು ಸಂಸ್ಕಾರ ಮಾಡಿದ್ದರು.

ಕುಡಿತಕ್ಕೆ ದಾಸನಾಗಿದ್ದ ನಾಗರಾಜಪ್ಪ ಹಿಂದಿನಿಂದಲೂ ಮಾನಸಿಕ ಅಸ್ವಸ್ಥನ ರೀತಿ ವರ್ತಿಸುತ್ತಿದ್ದನಂತೆ. ಮಗಳ‌ ಮನೆಯಿಂದ ಯಾರಿಗೂ ಹೇಳದೇ ಹೋಗಿ ಸಿಕ್ಕ ಕಡೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿ 3 ತಿಂಗಳು ಬೇರೆಬೇರೆ ಊರುಗಳಲ್ಲಿ ತಿರುಗಾಡಿದ್ದನಂತೆ. ನಂತ್ರ ತನ್ನ ಊರಿಗೆ ಬರಬೇಕೆಂದುಕೊಂಡು ವಾಪಸ್ ಬಂದಿದ್ದಾನೆ.

ಬಸ್ ನಿಂದ ಇಳಿದ ಕೂಡಲೇ ಆತನನ್ನು ಆಶ್ಚರ್ಯದಿಂದಲೇ ನೋಡಿದ ಗ್ರಾಮಸ್ಥರು ಸತ್ತುಹೋಗಿದ್ದ ವಿಷಯ ತಿಳಿಸಿದ್ದಾರೆ. ಆತನೇ ಎಲ್ಲರನ್ನ ಗುರುತು ಹಿಡಿದು ಮಾತನಾಡಿಸಿದ ಬಳಿಕ ಈತನೇ ಅಸಲಿ ನಾಗರಾಜಪ್ಪ ಎಂದು ತಿಳಿದುಬಂದಿದೆ.

ಪೊಲೀಸರ ಮಧ್ಯಸ್ಥಿಕೆ ಮತ್ತು ಸ್ಟಾಫ್ ನರ್ಸ್ ನೇತ್ರಾವತಿ ತನ್ನ ತಂದೆಯ ಶವ ಎಂದು ಹೇಳಿದ ನಂತರವೇ ಹೆಣ ನೀಡಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಯಾರ ಶವವನ್ನು ರವಾನಿಸಿದರು ಮತ್ತು ಸೆಪ್ಟೆಂಬರ್ 19 ರಂದು ಅಂತ್ಯಸಂಸ್ಕಾರ ಮಾಡಿದರು ಎಂಬ ಬಗ್ಗೆ ಕೋರಮಂಗಲ ಪೊಲೀಸರು ಗೊಂದಲದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com