ಬೆಳಗಾವಿ: ಚಳಿಗಾಲದ ಅಧಿವೇಶನದ ಸಿದ್ಧತೆ ಪರಿಶೀಲಿಸಿದ ಸ್ಪೀಕರ್ ಕಾಗೇರಿ, ಸಭಾಪತಿ ಹೊರಟ್ಟಿ

ಮೂರು ವರ್ಷಗಳ ನಂತರ ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಸುಗಮ ಕಲಾಪಕ್ಕೆ ಅನುಕೂಲವಾಗುವಂತೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
ವಿಶ್ವೇಶ್ವರ ಹೆಗಡಿ ಕಾಗೇರಿ
ವಿಶ್ವೇಶ್ವರ ಹೆಗಡಿ ಕಾಗೇರಿ

ಬೆಳಗಾವಿ: ಮೂರು ವರ್ಷಗಳ ನಂತರ ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಸುಗಮ ಕಲಾಪಕ್ಕೆ ಅನುಕೂಲವಾಗುವಂತೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ಬೆಳಗಾವಿಯಲ್ಲಿಂದು ಅಧಿವೇಶನದ ಸಿದ್ಧತೆ ಕುರಿತು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪರಿಶೀಲನೆ ನಡೆಸಿದರು.

ಬಳಿಕ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ , ರಾಜ್ಯದಲ್ಲಿ ಕೊರೋನಾ ಸೋಂಕಿನ ಹೊಸ ರೂಪಾಂತರ ಆತಂಕದ ನಡುವೆಯೂ ಇದೇ 13 ರಿಂದ 24ರವರೆಗೆ ಅಧಿವೇಶನ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೊರೋನಾ ನಿಯಂತ್ರಣ, ಅದರ ಮುನ್ನೆಚ್ಚರಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಈ ಬಾರಿಯ ಅಧಿವೇಶನದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ. ಸಾರ್ವಜನಿಕರಿಗೆ ಅಧಿವೇಶನ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಇನ್ನುಳಿದಂತೆ ಬೆಂಗಳೂರಿನಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ನಡೆಯುವ ಎಲ್ಲ ಕಲಾಪಗಳು ಬೆಳಗಾವಿಯಲ್ಲೂ ನಡೆಯಲಿವೆ ಎಂದರು. ಸರ್ಕಾರದಿಂದ ಇದುವರೆಗೂ ಯಾವುದೇ ಮಸೂದೆಗಳು ಬಂದಿಲ್ಲ. ಆದಷ್ಟು ಶೀಘ್ರ ಕಳುಹಿಸುವಂತೆ ಈಗಾಗಲೇ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.

ಸದನದಲ್ಲಿ ಚೌಕಟ್ಟು ಮೀರಿ ವರ್ತಿಸಿದರೆ ಅಂತಹ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಚನಾತ್ಮಕ ಫಲಪ್ರದ ಚರ್ಚೆ ನಡೆಯಬೇಕು ಎನ್ನುವುದು ನಮ್ಮ ಉದ್ದೇಶ. ಇತ್ತೀಚೆಗೆ ರಾಜ್ಯಸಭೆಯಲ್ಲಿ ನಡೆಯುತ್ತಿರುವ ಘಟನೆಗಳು ತೀವ್ರ ವಿಷಾದಕರ ಎಂದು ಹೇಳಿದರು. ಸಭಾಪತಿ ಬಸವರಾಜ ಹೊರಟ್ಟಿ, ಆಯಾ ದಿನದ ಕಲಾಪ ಪಟ್ಟಿಯಲ್ಲಿ ನಮೂದಾಗುವ ವಿಷಯಗಳು ಅಂದೇ ಪೂರ್ಣಗೊಳ್ಳಬೇಕು. ಈ ಸಂಬಂಧ ಕಲಾಪ ಸಲಹಾ ಸಮಿತಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ಈ ವಿಷಯದ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದರು.

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಈ ತಿಂಗಳ 10 ರಂದು ಚುನಾವಣೆ ನಡೆಯಲಿದ್ದು, ಅದರಲ್ಲಿ ಸ್ಪರ್ಧಿಸಿರುವ ಹಾಲಿ ಸದಸ್ಯರಿಗೆ ಮುಂದಿನ ವರ್ಷ ಜನವರಿ 5ರ ತನಕ ಸದಸ್ಯರಾಗಿ ಮುಂದುವರಿಯುವ ಎಲ್ಲ ಅಧಿಕಾರಗಳಿವೆ. ಹೀಗಾಗಿ ಅವರು ಈ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಬೆಳಗಾವಿಯಲ್ಲಿ ಶಾಸಕರ ಭವನ ಮತ್ತು ಸಚಿವಾಲಯ ಕಚೇರಿಯನ್ನು ನಿರ್ಮಾಣ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಇದರಿಂದ ಖರ್ಚು, ವೆಚ್ಚ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com