ಬಳ್ಳಾರಿ: ಮರಳು ಮಾಫಿಯಾ ತಂಡದಿಂದ ಕಂದಾಯ ನಿರೀಕ್ಷಕ-ಮತ್ತವರ ಕುಟುಂಬಸ್ಥರ ಮೇಲೆ ಹಲ್ಲೆ

ಬಳ್ಳಾರಿಯ ರೂಪನಗುಡಿ ಹೋಬಳಿಯಲ್ಲಿ 53 ವರ್ಷದ ಕಂದಾಯ ನಿರೀಕ್ಷಕ(Revenue inspector) ಹಾಗೂ ಗ್ರಾಮ ಲೆಕ್ಕಿಗನ(Village Accountant) ಮೇಲೆ 15 ಜನರ ತಂಡವೊಂದು ಹಲ್ಲೆ ಮಾಡಿರುವ ಘಟನೆ ಮೊನ್ನೆ ಬುಧವಾರ ರಾತ್ರಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಳ್ಳಾರಿ: ಬಳ್ಳಾರಿಯ ರೂಪನಗುಡಿ ಹೋಬಳಿಯಲ್ಲಿ 53 ವರ್ಷದ ಕಂದಾಯ ನಿರೀಕ್ಷಕ (Revenue inspector) ಹಾಗೂ ಗ್ರಾಮ ಲೆಕ್ಕಿಗನ (Village Accountant) ಮೇಲೆ 15 ಜನರ ತಂಡವೊಂದು ಹಲ್ಲೆ ಮಾಡಿರುವ ಘಟನೆ ಮೊನ್ನೆ ಬುಧವಾರ ರಾತ್ರಿ ನಡೆದಿದೆ. ಬಳ್ಳಾರಿ ನಗರದ ಮಿಲ್ಲರ್ ಪೇಟೆಯಲ್ಲಿರುವ ಕಂದಾಯ ನಿರೀಕ್ಷಕ ವೆಂಕಟಸ್ವಾಮಿ ಹೆಚ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡ ಏಕಾಏಕಿ ಅವರ ಮೇಲೆ ಹಲ್ಲೆ ನಡೆಸಿದೆ.

ಇತ್ತೀಚೆಗೆ ಮರಳನ್ನು ಟ್ರ್ಯಾಕ್ಟರ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಅದನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಕ್ಕೆ ಕಂದಾಯ ನಿರೀಕ್ಷಕ ವೆಂಕಟಸ್ವಾಮಿ ಹೆಚ್ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ವೆಂಕಟಸ್ವಾಮಿ ಅವರ ಮನೆಯೊಳಗೆ ನುಗ್ಗಿದ ಆರೋಪಿಗಳು ಅವರ ಪತ್ನಿ ಮತ್ತು ಮಗನನ್ನು ದೂಡಿ ಹೊಡೆಯಲು ಆರಂಭಿಸಿದರು.

ಆರು ಮಂದಿ ಬಂಧನ: ಅಕ್ರಮವಾಗಿ ಮರಳು ಮಾಫಿಯಾದಲ್ಲಿ ತೊಡಗಿರುವ ಗ್ಯಾಂಗ್ ನಿಂದ ಈ ಹಲ್ಲೆ ನಡೆದಿದೆ ಎಂದು ತನಿಖೆ ವೇಳೆ ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬಳ್ಳಾರಿ ಪೊಲೀಸರು 6 ಮಂದಿಯನ್ನು ಬಂಧಿಸಿದ್ದು ಇನ್ನು ಉಳಿದವರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಕಳೆದೊಂದು ವರ್ಷದಿಂದ ಬಳ್ಳಾರಿಯಲ್ಲಿ ಇಂತಹ ಪ್ರಕರಣ ನಡೆಯುತ್ತಿರುವುದು ಇದು ಮೂರನೇ ಸಲ, ಅಕ್ರಮ ಕಳ್ಳಸಾಗಣೆ, ಮರಳು ಮಾಫಿಯಾವನ್ನು ವಶಪಡಿಸಿಕೊಂಡ ನಂತರ ತಮಗೆ ಭದ್ರತೆ ನೀಡಬೇಕೆಂದು ಹಾಗೂ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಅಧಿಕಾರಿಗಳು ಪೊಲೀಸರಿಗೆ ಇತ್ತೀಚೆಗೆ ಮನವಿ ಮಾಡಿಕೊಂಡಿದ್ದರು.

ಇದೀಗ ವೆಂಕಟಸ್ವಾಮಿಯವರ ಮೇಲೆ ಹಲ್ಲೆ ನಡೆದ ನಂತರ ಅಧಿಕಾರಿಗಳು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪತಿಯವರಿಗೆ ಭದ್ರತೆ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಬಳ್ಳಾರಿ ಎಸ್ಪಿ ಸೈಡುಲು ಅಡವತ್, ಪೊಲೀಸರು ತನಿಖೆ ಕೈಗೊಂಡಿದ್ದು ಕೆಲವು ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿ ಮಾಡಿದವರು ಮತ್ತು ದಾಳಿಗೀಡಾದ ಅಧಿಕಾರಿ ಒಂದೇ ಏರಿಯಾದಲ್ಲಿದ್ದಾರೆ. ಎಲ್ಲಾ ದೃಷ್ಟಿಕೋನದಿಂದ ತನಿಖೆ ನಡೆಸುತ್ತಿದ್ದೇವೆ. ಅಗತ್ಯಕ್ಕೆ ಅನುಗುಣವಾಗಿ ನಾವು ಅಧಿಕಾರಿಗಳಿಗೆ ಭದ್ರತೆ ನೀಡುತ್ತೇವೆ, ಇದರಿಂದ ಅಧಿಕಾರಿಗಳು ಯಾವುದೇ ಭಯವಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸಬಹುದಾಗಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com