ರಾಮನಗರ: ನಾಯಿಯ ವಿಚಾರಕ್ಕೆ ಕಿರಿಕ್; ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದವನ ಬಂಧನ

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕಾರ್ತಿಕ್ (24) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಪರಮೇಶ್ ತಲೆಮರೆಸಿಕೊಂಡಿದ್ದಾನೆ.

ಪ್ರದೀಪ್ ಎಂಬಾತನ ಕೊಲೆಗೆ ಯತ್ನಿಸಿದ ಆರೋಪವಿದೆ. ಮೂವರೂ ಕನಕಪುರದ ಉಯ್ಯಂಬಳ್ಳಿಯ ಕಪನಿಗೌಡನದೊಡ್ಡಿ ಗ್ರಾಮದ ನಿವಾಸಿಗಳಾಗಿದ್ದಾರೆ.  

ವೇಗವಾಗಿ ಬಂದ ಕಾರು ಪ್ರದೀಪ್ ಎಂಬುವವರ ನಾಯಿಗೆ ಡಿಕ್ಕಿ ಹೊಡೆದಿದೆ. ನಂತರ ಕಾರಿನ ಚಾಲಕನಿಗೆ ಪ್ರದೀಪ್ ಬುದ್ದಿ ಹೇಳಿ ಕಳಿಸಿದ್ದಾರೆ, ಚಾಲಕ ಕೂಡ ಕ್ಷಮೆ ಕೇಳಿ ಅಲ್ಲಿಂದ ಹೊರಟಿದ್ದಾನೆ.  ಕೆಲವು ಗಂಟೆಗಳ ನಂತರ ಪರಮೇಶ್ ಎಂಬಾತ ಪ್ರದೀಪ್ ಗೆ ಕರೆ ಮಾಡಿ ನಿಂದಿಸಿದ್ದ, ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಕೆಲವು ನಿಮಿಷಗಳ ನಂತರ, ಪ್ರದೀಪ್ ತನ್ನ ಸ್ನೇಹಿತನ ಮನೆಯ ಬಳಿ ಬಂದಾ, ಪರಮೇಶ್ ಮತ್ತು ಕಾರ್ತಿಕ್ ಸಿಂಗಲ್ ಬ್ಯಾರೆಲ್ ಗನ್ ಹಿಡಿದು ಬೈಕ್‌ನಲ್ಲಿ ಆಗಮಿಸಿದ್ದಾರೆ. ಕಾರ್ತಿಕ್ ಪ್ರದೀಪ್ ಕಡೆಗೆ ಗನ್ ತೋರಿಸಿ ಗುಂಡು ಹಾರಿಸಿದ್ದಾನೆ, ಆದರೆ ಪ್ರದೀಪ್ ತಪ್ಪಿಸಿಕೊಂಡಿದ್ದಾರೆ. ಮತ್ತೊಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ವೇಳೆ ಪ್ರದೀಪ್ ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋಗಿದ್ದಾರೆ.

ಈ ಸಂಬಂಧ ಮಂಗಳವಾರ ದೂರು ದಾಖಲಾಗಿದ್ದು, ಕಾರ್ತಿಕ್ ನನ್ನು ಬಂಧಿಸಲಾಗಿದೆ. ಬಂದೂಕನ್ನು ವಶಪಡಿಸಿಕೊಂಡಿರುವ ಪೊಲೀಸರು ಪರಮೇಶನ ಪತ್ತೆಗೆ ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com