ಮತಾಂತರ ನಿಷೇಧ ಕಾಯ್ದೆ ಯಾವುದೇ ಧರ್ಮದ ವಿರುದ್ಧವಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಮತಾಂತರ ನಿಷೇಧ ಮಸೂದೆ ಯಾವುದೇ ಧರ್ಮದ ವಿರುದ್ಧವಿಲ್ಲ. ಕಾಯ್ದೆ ಕುರಿತು ಯಾವುದೇ ಸಮುದಾಯ ಆತಂಕ ಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಮತಾಂತರ ನಿಷೇಧ ಮಸೂದೆ ಯಾವುದೇ ಧರ್ಮದ ವಿರುದ್ಧವಿಲ್ಲ. ಕಾಯ್ದೆ ಕುರಿತು ಯಾವುದೇ ಸಮುದಾಯ ಆತಂಕ ಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್‌ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಗೃಹ ಸಚಿವರು, “ಸರ್ಕಾರವು ಎಲ್ಲಾ ಸಮುದಾಯಗಳಿಗೆ ರಕ್ಷಣೆ ನೀಡಲು ಸಂಪೂರ್ಣವಾಗಿ ಬದ್ಧವಾಗಿದೆ. ರಾಜ್ಯದಲ್ಲಿ ಬಲವಂತದ ಮತಾಂತರವನ್ನು ನಿಲ್ಲಿಸುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಮಂಡನೆಯಾಗಲಿದೆಯೇ?
ಹೌದು, ಮಾಡುತ್ತೇವೆ. ಈ ಕುರಿತ ಪ್ರಕ್ರಿಯೆಗಳು ನಡೆಯುತ್ತಿದ್ದು, ಮಸೂದೆ ಬಹುತೇಕ ಸಿದ್ಧವಾಗಿದೆ. ಇದನ್ನು ಬೆಳಗಾವಿಯಲ್ಲಿ (ಡಿಸೆಂಬರ್ 13 ರಿಂದ 24 ರವರೆಗೆ) ಅಧಿವೇಶನದಲ್ಲಿ ಮಂಡನೆ ಮಾಡಲಾಗುತ್ತದೆ. ಬಲವಂತದಿಂದ ಅಥವಾ ಪ್ರಚೋದನೆಯಿಂದ ಮತಾಂತರ ಮಾಡುವುದು ತಪ್ಪಾಗಿದ್ದು, ಅದನ್ನು ತಡೆಯಲು ಕಾನೂನು ತರುತ್ತಿದ್ದೇವೆ. ಅನೇಕ ರಾಜ್ಯಗಳು ಇದೇ ರೀತಿಯ ಕಾನೂನುಗಳನ್ನು ಜಾರಿಗೆ ತಂದಿದೆ. ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಲ್ಲಿನ ಕಾಯ್ದೆಗಳನ್ನು ಅಧ್ಯಯನ ಮಾಡಲಾಗಿದೆ.

ಮಸೂದೆ ಬಗ್ಗೆ ಕ್ರಿಶ್ಚಿಯನ್ ಸಮುದಾಯದಲ್ಲಿ ಸಾಕಷ್ಟು ಆತಂಕವಿದೆ. ನೀವು ಅದನ್ನು ಹೇಗೆ ಪರಿಹರಿಸುತ್ತೀರಿ?
ಮಸೂದೆ ಯಾವುದೇ ಧರ್ಮದ (ಕ್ರಿಶ್ಚಿಯನ್ನರು, ಮುಸ್ಲಿಮರು ಅಥವಾ ಹಿಂದೂಗಳು) ವಿರುದ್ಧವಿಲ್ಲ. ಜನರು ತಮ್ಮ ಧರ್ಮವನ್ನು ಆಚರಿಸಲು ಮುಕ್ತರಾಗಿದ್ದಾರೆ ಮತ್ತು ಪ್ರತಿಯೊಬ್ಬರನ್ನು ರಕ್ಷಿಸಲು ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ. ಒಂದು ಧರ್ಮವನ್ನು ಮುಗಿಸುವ ಮೂಲಕ ಇನ್ನೊಂದು ಧರ್ಮವನ್ನು ಪ್ರಚಾರ ಮಾಡುವುದು ಧರ್ಮವಲ್ಲ ಮತ್ತು ಅದನ್ನು ಸರಳೀಕರಿಸಲು ನಾವು ಮಸೂದೆಯನ್ನು ತರುತ್ತಿದ್ದೇವೆ. ಕ್ರೈಸ್ತ ಸಮುದಾಯ ಅಥವಾ ಇತರೆ ಯಾವುದೇ ಧರ್ಮದವರೂ ಮಸೂದೆ ಕುರಿತು ಆತಂಕ ಪಡುವ ಅಗತ್ಯವಿಲ್ಲ.

ಬೆಳಗಾವಿಯ ಪೊಲೀಸರಿಗೆ ಕ್ರಿಶ್ಚಿಯನ್ ಸಮುದಾಯದ ಜನರು ಮನೆಗಳಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸದಂತೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ?
ಇಲ್ಲ, ಅದು ನಿಜವಲ್ಲ. ಪೊಲೀಸರು ಕೇವಲ ನಿಯಮಗಳನ್ನು ಪಾಲಿಸುತ್ತಿದ್ದು, ಬೇರೆ ಯಾವುದೇ ನಿರ್ದೇಶನ ನೀಡಿಲ್ಲ. ಆದರೆ, ಪ್ರಾರ್ಥನಾ ಸಭೆಗಳನ್ನು ನಡೆಸುವ ಹೆಸರಿನಲ್ಲಿ ಮತಾಂತರಕ್ಕಾಗಿ ಜನರನ್ನು ಸಭೆಗಳಿಗೆ ಕರೆಯುವಂತಿಲ್ಲ. ಬಲವಂತದ ಮತಾಂತರ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಪೊಲೀಸರು ಅದನ್ನು ತಡೆಯುತ್ತಾರೆ.

ಇತ್ತೀಚೆಗೆ ಬಿಡುಗಡೆಯಾದ ವರದಿಯ ಪ್ರಕಾರ 2021 ರಲ್ಲಿ ಕ್ರಿಶ್ಚಿಯನ್ನರ ಮೇಲಿನ ದಾಳಿಗಳ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ ಮತ್ತು ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳು?
ವಿವಿಧ ಹಿನ್ನೆಲೆಯಿಂದ ಹಲವು ವರದಿಗಳು ಬರುತ್ತಿವೆ. ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಬಂದರೆ ಮಾತ್ರ ಅದು ಸತ್ಯವಾಗಿರಲಿದೆ. ಇತ್ತೀಚೆಗಷ್ಟೇ ಕ್ರೈಸ್ತ ಸಮುದಾಯದ ಹಲವು ಪ್ರತಿನಿಧಿಗಳು ನನ್ನನ್ನು ಭೇಟಿ ಮಾಡಿದ್ದರು. ಮಸೂದೆ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ. ಮಸೂದೆಯಿಂದ ಅವರ ಪ್ರಾರ್ಥನೆಗೆ ಅಥವಾ ಸಮುದಾಯಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.

ಪೊಲೀಸರು ಲಂಚ ಪಡೆಯುತ್ತಿರುವ ಕುರಿತ ನಿಮ್ಮ ಹೇಳಿಕೆಯನ್ನು ಪ್ರತಿಪಕ್ಷಗಳು ಟೀಕಿಸುತ್ತಿವೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಹೇಳಿಕೆ ಕುರಿತು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ನನ್ನ ತಾಲೂಕಿನಲ್ಲಿ ಜಾನುವಾರು ಸಾಗಾಟದ ವಾಹನ ತಡೆಯಲು ಯತ್ನಿಸಿದವರನ್ನು ಕೊಲ್ಲುವ ಯತ್ನ ನಡೆದಿದೆ. ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಅದರಿಂದ ನನಗೆ ನೋವಾಗಿದೆ. ಅದೇ ಸಮಯಕ್ಕೆ ಚಿಕ್ಕಮಗಳೂರಿನಲ್ಲಿ ಇಂಥದ್ದೇ ಘಟನೆಯ ಬಗ್ಗೆ ನನಗೆ ಕರೆ ಬಂತು. ನಾನು ಆ ಹಿನ್ನೆಲೆಯಲ್ಲಿ ಮಾತನಾಡಿದ್ದು ಆ ಪೊಲೀಸ್ ಸಿಬ್ಬಂದಿಯ ಬಗ್ಗೆ ಮಾತ್ರವೇ ಹೊರತು ಎಲ್ಲರ ಕುರಿತಾಗಿಯೂ ಹೇಳಿಲ್ಲ. ಒಬ್ಬ ಗೃಹ ಸಚಿವನಾಗಿ ಪೊಲೀಸರು ಹಾಗೂ ಅವರು ಹಗಲಿರುಳು ಮಾಡುವ ಕೆಲಸಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಒಂದು ದಿನ ಪೊಲೀಸರು ಕೆಲಸ ಮಾಡದಿದ್ದರೆ ಏನಾಗುತ್ತದೆ ಎಂದು ನಮಗೆ ತಿಳಿದಿದೆ.

ಅಧಿವೇಶನದ ಸಂದರ್ಭದಲ್ಲಿ, ಬಿಟ್‌ಕಾಯಿನ್ ಹ್ಯಾಕಿಂಗ್ ಪ್ರಕರಣದ ತನಿಖೆಯ ಕುರಿತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ...?
ಅವರು ಯಾವುದೇ ವಿಷಯವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲಿ, ಅದಕ್ಕೆ ಪ್ರತಿಕ್ರಿಯೆ ನೀಡಲು ನಾವು ಸಮರ್ಥರಿದ್ದೇವೆ. ಅದರ ಬಗ್ಗೆ ಸರ್ಕಾರ ಚಿಂತಿಸುತ್ತಿಲ್ಲ.

ಚುನಾಯಿತ ಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸಬೇಕು. ಸಮಯ ವ್ಯರ್ಥ ಮಾಡದಂತೆ ರೈತರು ಒತ್ತಾಯಿಸುತ್ತಿದ್ದಾರೆ. ಈ ಬಾರಿಯ ಅಧಿವೇಶನದಲ್ಲಿ ಜನರು ಅರ್ಥಪೂರ್ಣ ಚರ್ಚೆಯನ್ನು ನಿರೀಕ್ಷಿಸಬಹುದೇ?
ಇದು ರೈತರಿಂದ ಉತ್ತಮ ಸಲಹೆಯಾಗಿದೆ. ರೈತರಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳು ಅಧಿವೇಶನದಲ್ಲಿ ಸುದೀರ್ಘ ಚರ್ಚೆಯಾಗಬೇಕು. ಸರ್ಕಾರ ಅದನ್ನು ಮಾಡಲಿದೆ.  ಅಧಿವೇಶನದಲ್ಲಿ ನಾವು ಅರ್ಥಪೂರ್ಣ ಚರ್ಚೆ ನಡೆಸಲು ಪ್ರತಿಪಕ್ಷಗಳು ಸರ್ಕಾರದೊಂದಿಗೆ ಸಹಕಾರ ನೀಡಲಿದೆ ಎಂಬ ನಿರೀಕ್ಷೆಗಳಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com