ಬೆಳಗಾವಿ ಅಧಿವೇಶನ: ರೈತರ ಸಂಕಷ್ಟವನ್ನು ಸಭೆಯ ಮುಂದಿಟ್ಟ ಸಿದ್ದರಾಮಯ್ಯ, ಬೆಳೆ ಹಾನಿಗೆ ಮೂರು ಪಟ್ಟು ಪರಿಹಾರಕ್ಕೆ ಆಗ್ರಹ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಂದು ಅತಿವೃಷ್ಟಿಯಿಂದಾದ ಬೆಳೆ ಹಾನಿ ಕುರಿತಂತೆ ನಿಲುವಳಿ ಸೂಚನೆ 69ರಡಿ ವಿಧಾನಸಭೆಯಲ್ಲಿಂದು ಮಾತನಾಡಿದರು. ನಿನ್ನೆ ಪ್ರಾಸ್ತಾವಿಕವಾಗಿ ಮಾತನಾಡಿದ್ದ ಸಿದ್ದರಾಮಯ್ಯ, ಇಂದು ಅತಿವೃಷ್ಟಿ ಕುರಿತಂತೆ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಸಭೆಯ ಮುಂದಿಟ್ಟರು.
ವಿಧಾನಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ವಿಧಾನಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಳಗಾವಿ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಂದು ಅತಿವೃಷ್ಟಿಯಿಂದಾದ ಬೆಳೆ ಹಾನಿ ಕುರಿತಂತೆ ನಿಲುವಳಿ ಸೂಚನೆ 69ರಡಿ ವಿಧಾನಸಭೆಯಲ್ಲಿಂದು ಮಾತನಾಡಿದರು. ನಿನ್ನೆ ಪ್ರಾಸ್ತಾವಿಕವಾಗಿ ಮಾತನಾಡಿದ್ದ ಸಿದ್ದರಾಮಯ್ಯ, ಇಂದು ಅತಿವೃಷ್ಟಿ ಕುರಿತಂತೆ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಸಭೆಯ ಮುಂದಿಟ್ಟರು.

ರಾಜ್ಯದಲ್ಲಿ ಕೊಯ್ಲಿಗೆ ಬಂದ ಬೆಳೆ ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಳೆದ 60 ವರ್ಷಗಳಲ್ಲಿ ಕಾಣದಂತಹ ಮಳೆಯನ್ನು ಈ ಬಾರಿ ರಾಜ್ಯ ಕಂಡಿದೆ ಎಂದು ಸಿದ್ದರಾಮಯ್ಯ ಸಭೆಯ ಗಮನ ಸೆಳೆದರು.

2019ರಲ್ಲಿ ಉತ್ತರ ಕರ್ನಾಟಕದಲ್ಲಿ ಅತ್ಯಧಿಕ ಮಳೆ ಬಿದ್ದಿದೆ. ಈ ವೇಳೆ 2 ಲಕ್ಷ 76 ಸಾವಿರ ಮನೆಗಳು ಹಾನಿಯಾಗಿವೆ. ಆದರೆ, ಮನೆ ಕಳೆದುಕೊಂಡ 1 ಲಕ್ಷ 33 ಸಾವಿರ ಕುಟುಂಬಗಳಿಗೆ ಮಾತ್ರ ಪರಿಹಾರ ಸಿಕ್ಕಿದೆ. ಉಳಿದವರಿಗೆ ನೆರವು ದೊರೆತಿಲ್ಲ ಎಂದು ಅಪಾದಿಸಿದರು. ಗೋಕಾಕ್, ರಾಯಭಾಗ ತಾಲೂಕುಗಳಿಗೆ ಭೇಟಿ ನೀಡಿದಾಗ 50ಕ್ಕೂ ಹೆಚ್ಚು ಮಹಿಳೆಯರು ಪರಿಹಾರ ಸಿಗದಿದ್ದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು.

ಎನ್ ಡಿಆರ್ ಎಫ್ ನಿಯಮ ಪರಿಷ್ಕರಿಸಬೇಕು: ಎನ್ ಡಿಆರ್ ಎಫ್ ನಿಯಮದ ಪ್ರಕಾರ ಶೇಕಡಾ 33ಕ್ಕಿಂತ ಅಧಿಕ ಬೆಳೆ ಹಾನಿಯಾಗಿದ್ದರೆ ಮಾತ್ರ ಪರಿಹಾರ ನೀಡಲು ಪರಿಗಣಿಸಲಾಗುತ್ತದೆ. ಶೇ. 32. 99 ರಷ್ಟು ಹಾನಿಯಾದರೆ ಎನ್ ಡಿಆರ್ ಎಫ್ ಪರಿಗಣಿಸಲ್ಲ. ಅಲ್ಲದೇ, ಕೇವಲ ಜಮೀನಿನಲ್ಲಿ ಬೆಳೆದು ನಿಂತ ಬೆಳೆಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಆದರೆ, ರಾಶಿ ಮಾಡಿದ ಧಾನ್ಯಗಳು ಮಳೆಗೆ ತುತ್ತಾದರೆ ರೈತರಿಗೆ ಪರಿಹಾರ ಸಿಗಲ್ಲ. ಈ ನಿಯಮಗಳು ಬದಲಾಗಬೇಕು ಎಂದ ಸಿದ್ದರಾಮಯ್ಯ, 20 ವರ್ಷಗಳ ಹಿಂದೆ ಜಾರಿಗೆ ಬಂದಿರುವ ಎನ್ ಡಿಆರ್ ಎಫ್ ನ್ನು ಈವರೆಗೆ ಪರಿಷ್ಕರಿಸಿಲ್ಲ. ರಾಜ್ಯ ಸರ್ಕಾರ ಇದನ್ನು ಪರಿಷ್ಕರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಒಣ ಬೇಸಾಯದಲ್ಲಿನ 1 ಹೆಕ್ಟೇರ್ ಜಮೀನಿಗೆ 6,800 ರೂ, ನೀರಾವರಿ  ಪ್ರದೇಶದ 1 ಹೆಕ್ಟೇರ್ ಜಮೀನಿಗೆ 13,500 ರೂ. ತೋಟಗಾರಿಕೆ ಬೇಸಾಯದಲ್ಲಿನ 1 ಹೆಕ್ಟೇರ್ ಪ್ರದೇಶಕ್ಕೆ 18 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಇದನ್ನು ಮೂರು ಪಟ್ಟು ಹೆಚ್ಚಿಸಬೇಕಾಗಿದೆ ಎಂದು ಸಿದ್ದರಾಮಯ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟರು.

ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಇಲ್ಲ: ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳೇ ಇಲ್ಲ ಎಂದು ರಾಜ್ಯ ಸರ್ಕಾರವನ್ನು ಚುಚ್ಚಿದ ಸಿದ್ದರಾಮಯ್ಯ, ರಾಜ್ಯದ 31 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಲ್ಲಿ ಅತಿವೃಷ್ಟಿ ಸಂಭವಿಸಿದೆ. 13 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ಅಧಿಕಾರಿಗಳು ಇಂದು ಮಾಹಿತಿ ನೀಡಿರುವುದಾಗಿ ಸಿದ್ದರಾಮಯ್ಯ ಸದನಕ್ಕೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com