ನಂದಿನಿ ಬ್ರ್ಯಾಂಡ್ ನಲ್ಲಿ ನಕಲಿ ತುಪ್ಪ; ಡಾಲ್ಡಾ, ಪಾಮೊಲಿನ್ ತುಂಬುತ್ತಿದ್ದ ಘಟಕದ ಮೇಲೆ ಮೈಮುಲ್ ದಾಳಿ!

ನಂದಿನಿ ತುಪ್ಪದ ಬ್ರ್ಯಾಂಡ್ ನಲ್ಲಿ ನಕಲಿ ಡಾಲ್ಡಾ, ಪಾಮೊಲಿನ್ ತುಂಬುತ್ತಿದ್ದ ಅಕ್ರಮ ಘಟಕದ ಮೇಲೆ ಮೈಮುಲ್ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ನಕಲಿ ನಂದಿನಿ ತುಪ್ಪದ ಟಿನ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ನಂದಿನಿ ಬ್ರಾಂಡ್ ಹೆಸರಲ್ಲಿ ನಕಲಿ ತುಪ್ಪ
ನಂದಿನಿ ಬ್ರಾಂಡ್ ಹೆಸರಲ್ಲಿ ನಕಲಿ ತುಪ್ಪ

ಮೈಸೂರು: ನಂದಿನಿ ತುಪ್ಪದ ಬ್ರ್ಯಾಂಡ್ ನಲ್ಲಿ ನಕಲಿ ಡಾಲ್ಡಾ, ಪಾಮೊಲಿನ್ ತುಂಬುತ್ತಿದ್ದ ಅಕ್ರಮ ಘಟಕದ ಮೇಲೆ ಮೈಮುಲ್ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ನಕಲಿ ನಂದಿನಿ ತುಪ್ಪದ ಟಿನ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರಿನ ಹೊರವಲಯದ ಹೊಸಹುಂಡಿ ಗ್ರಾಮದ ಹೊರವಲಯದಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕವನ್ನು ಸ್ಥಳೀಯರ ನೆರವಿನಿಂದ ಮೈಸೂರು ಜಿಲ್ಲಾ ಹಾಲು ಒಕ್ಕೂಟ (ಮೈಮುಲ್) ಹಾಗೂ ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಂದಿನಿ ಬ್ರಾಂಡ್ ಲೇಬಲ್ ಗಳನ್ನು ಟಿನ್ ಗಳಿಗೆ ಅಳವಡಿಸಿ ಅದಕ್ಕೆ ಡಾಲ್ಡಾ (ವನಸ್ಪತಿ) ಮತ್ತು ಪಾಮೊಲಿನ್ ಅನ್ನು ತುಂಬಿ ಮಾರಾಟ ಮಾಡುತ್ತಿದ್ದ ಆಘಾತಕಾರಿ ವಿಚಾರ ಬಯಲಾಗಿದೆ. ದಾಳಿ ವೇಳೆ ಸುಮಾರು ಒಂದೂವರೆ ಟನ್‌ನಷ್ಟು ಕಲಬೆರಕೆ ತುಪ್ಪ, 500 ಕೆ.ಜಿ ವನಸ್ಪತಿ, 500 ಲೀಟರ್ ಪಾಮೊಲಿನ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಮೂಲಗಳ ಪ್ರಕಾರ ‘ಹ್ಯೂಮನ್ ರೈಟ್ಸ್’ ಸಂಘಟನೆಯ ಸದಸ್ಯರು ಹಾಗೂ ಸ್ಥಳೀಯರು ಘಟಕದ ಮೇಲೆ ಮೊದಲಿಗೆ ದಾಳಿ ನಡೆಸಿದ್ದರು. ನಂತರ, ‘ಮೈಮುಲ್’ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಕೂಡಲೇ ಎಚ್ಚೆತ್ತ ಮೈಮುಲ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ಹಾಗೂ ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿ ಡಾ.ಪ್ರಸಾದ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ನಕಲಿ ನಂದಿನಿ ತುಪ್ಪ ತಯಾರಿಸುತ್ತಿದ್ದುದು ಖಚಿತಗೊಂಡಿದೆ. 

ಟಿನ್ ಅಷ್ಟೇ ಅಲ್ಲ.. ಪ್ಯಾಕೆಟ್ ಗಳೂ ನಕಲಿಯೇ
ಇನ್ನು ಅಧಿಕಾರಿಗಳ ದಾಳಿ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದ್ದು, ಆರೋಪಿಗಳು ಕೇವಲ ಟಿನ್ ಗಳನ್ನಷ್ಟೇ ಅಲ್ಲ.. ಪ್ಯಾಕೆಟ್ ಗಳನ್ನೂ ಕೂಡ ನಕಲಿ ಮಾಡಿ ನಕಲಿ ತುಪ್ಪವನ್ನು ನಂದಿನಿ ಬ್ರ್ಯಾಂಡ್ ಪ್ಯಾಕೆಟ್ ಗಳಿಗೆ ತುಂಬಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಕಡಿಮೆ ದರಕ್ಕೆ ಮಾರಾಟ, ಅನುಮಾನಗೊಂಡ ಗ್ರಾಮಸ್ಥರು
ಇನ್ನು ಇಲ್ಲಿ ತಯಾರಾಗುತ್ತಿದ್ದ ನಕಲಿ ನಂದಿನಿ ತುಪ್ಪವನ್ನು ಇಲ್ಲಿನ ಸಿಬ್ಬಂದಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದರು. ಇದರಿಂದ ಅನುಮಾನಗೊಂಡ ಸ್ಥಳೀಯ ಗ್ರಾಮಸ್ಥರು ಪರಿಶೀಲನೆ ನಡೆಸಿದಾಗ ಕಲಬೆರೆಕೆ ಮಾಡುತ್ತಿದ್ದ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

ಭಯ ಬೇಡ, ನಂದಿನಿ ಪಾರ್ಲರ್ ಗಳಲ್ಲಿ ಖರೀದಿ ಮಾಡಿ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ಅವರು, 'ತುಪ್ಪಕ್ಕೆ ವನಸ್ಪತಿ ಹಾಗೂ ಪಾಮಾಲಿನ್‌ನ್ನು ಸೇರಿಸಿ, ನಂದಿನಿ ತುಪ್ಪದ ನಕಲಿ ಲೇಬಲ್ ತಯಾರಿಸಿ, ಸೀಲ್‌ ಮಾಡಿರುವುದು ಪತ್ತೆಯಾಗಿದೆ. ನಕಲಿ ತುಪ್ಪದ ಬಾಟಲಿ ಮೇಲಿನ ಲೇಬಲ್ ಪ್ರಿಟಿಂಗ್ ಬ್ಲರ್‌ ಆಗಿದ್ದು, ಜಿಗ್‌ಜಾಗ್‌ ರೀತಿಯಲ್ಲಿ ಸೀಲಿಂಗ್ ಮಾಡಲಾಗಿದೆ. ಗುಣಮಟ್ಟದ ಚಿಹ್ನೆ (ಕ್ವಾಲಿಟಿ ಮಾರ್ಕ್‌) ಇಲ್ಲ. ಸ್ಥಳೀಯ ಮಟ್ಟದಲ್ಲಿ ಈ ತುಪ್ಪ ಮಾರಾಟ ಮಾಡಿರುವ ಸಾಧ್ಯತೆಗಳು ಕಡಿಮೆ. ಗ್ರಾಹಕರು ಗೊಂದಲಕ್ಕೆ ಒಳಗಾಗದೇ ನಂದಿನಿ ಪಾರ್ಲರ್‌ಗಳಲ್ಲಿ ತುಪ್ಪ ಖರೀದಿಸಬಹುದು’ ಎಂದು ಹೇಳಿದ್ದಾರೆ.

ದಾಳಿ ಕುರಿತು ಮಾತನಾಡಿದ ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿ ಡಾ.ಪ್ರಸಾದ್ ಅವರು, 'ವನಸ್ಪತಿ, ಪಾಮೊಲಿನ್ ಹಾಗೂ ತುಪ್ಪ ಘಟಕದಲ್ಲಿ ಪತ್ತೆಯಾಗಿದ್ದು, ಆರೋಪಿಗಳೆಲ್ಲರೂ ಪರಾರಿಯಾಗಿದ್ದಾರೆ. ಸದ್ಯ, ಅಧಿಕಾರಿಗಳು ಹಾಗೂ ಪೊಲೀಸರಿಂದ ಮಹಜರು ಕಾರ್ಯ ನಡೆಯುತ್ತಿದೆ’ ಎಂದು  ಹೇಳಿದರು.

4 ತಿಂಗಳ ಹಿಂದಷ್ಟೇ ತೆರೆಯಲಾಗಿದ್ದ ಘಟಕ
ಕಳೆದ 4 ತಿಂಗಳುಗಳಿಂದ ಈ ಘಟಕ ತೆರೆಯಲಾಗಿತ್ತು. ಕಡಿಮೆ ಬೆಲೆಗೆ ನಂದಿನಿ ತುಪ್ಪವನ್ನು ಸುತ್ತಮುತ್ತ ಅಂಗಡಿಗಳಿಗೆ ಪೂರೈಕೆ ಮಾಡುತ್ತಿದ್ದುದ್ದನ್ನು ಗಮನಿಸಿದ ಸ್ಥಳೀಯರು ವಿಷಯವನ್ನು ವಿವಿಧ ಸಂಘಟನೆಗಳ ಸದಸ್ಯರ ಗಮನಕ್ಕೆ ತಂದರು. ನಕಲಿ ತುಪ್ಪದ ಬಹುಪಾಲನ್ನು ತಮಿಳುನಾಡಿಗೆ ಕಳುಹಿಸಲಾಗುತ್ತಿತ್ತು ಎಂದ ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com