ಬೆಳಗಾವಿ: ಕಿಡಿಗೇಡಿಗಳಿಂದ ಸಂಗೊಳ್ಳಿ ರಾಯಣ್ಣ ಪುತ್ಥಳಿ ಭಗ್ನ; ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ; ಪರಿಸ್ಥಿತಿ ಉದ್ವಿಗ್ನ

ಬೆಂಗಳೂರಿನ ಸದಾಶಿವನಗರದಲ್ಲಿರುವ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಸುರಿದ ಪ್ರಕರಣ ಬೆನ್ನಲ್ಲೇ ಬೆಳಗಾವಿಯಲ್ಲಿ ಕೆಲ ಪುಂಡರು ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಭಗ್ನಗೊಳಿಸಿರುವ ಘಟನೆ ಶನಿವಾರ ಬೆಳಗಿನ ಜಾವ 3 ಗಂಟೆ ಸಮಾರಿಗೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಬೆಂಗಳೂರಿನ ಸದಾಶಿವನಗರದಲ್ಲಿರುವ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಸುರಿದ ಪ್ರಕರಣ ಬೆನ್ನಲ್ಲೇ ಬೆಳಗಾವಿಯಲ್ಲಿ ಕೆಲ ಪುಂಡರು ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಭಗ್ನಗೊಳಿಸಿರುವ ಘಟನೆ ಶನಿವಾರ ಬೆಳಗಿನ ಜಾವ 3 ಗಂಟೆ ಸಮಾರಿಗೆ ನಡೆದಿದೆ.

ಬೆಳಗಾವಿಯ ಅನಗೋಳದ ಕನಕದಾಸ ಕಾಲೊನಿಯಲ್ಲಿ ಪ್ರತಿಷ್ಠಾಪಿಸಿದ್ದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪುತ್ಥಳಿಯನ್ನು ಕೆಡವಿರುವ ಕಿಡಿಗೇಡಿಗಳು ಅಟ್ಟಹಾಸ ಮೆರದಿದ್ದಾರೆ.

ಪುತ್ಥಳಿಯನ್ನು ಭಗ್ನಗೊಳಿಸಿದ್ದಷ್ಟೇ ಅಲ್ಲದೆ, ಖಡ್ಗ, ಗುರಾಣಿಯನ್ನು ಬೇರೆ ಬೇರೆ ಕಡೆ ಇಟ್ಟು ಅಗೌರವವನ್ನು ಸೂಚಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತಯೇ ಸ್ಥಳಕ್ಕೆ ಟಿಳಕವಾಡಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದು, ಈ ಸಮಯದಲ್ಲೇ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿರುವುದು ಪೊಲೀಸರಿಗೆ ಹೊಸ ತಲೆನೋವು ಶುರುವಾದಂತಾಗಿದೆ.

ಬೆಂಗಳೂರಿನಲ್ಲಿ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಸುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಹಿಂದೂಪರ ಸಂಘಟನೆಗಳು ದಿಢೀರ್​ ಪ್ರತಿಭಟನೆ ನಡೆಸಿದ್ದು ಕಂಡು ಬಂದಿತ್ತು.

ಪ್ರತಿಭಟನೆ ವೇಳೆ ಕೆಲ ಎಂಇಎಸ್​ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಉದ್ಧಟತನ ಪ್ರದರ್ಶನ ಮಾಡಿದ್ದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಕರ್ತವ್ಯಕ್ಕೆ ಬಂದಿರುವ ಸರ್ಕಾರಿ ವಾಹನಗಳ ಮೇಲೆ ಕಲ್ಲು ಎಸೆದು ಉದ್ಧಟತನ ಮೆರೆಯಲಾಗಿದೆ. ಲಾಡ್ಜ್​ ಮುಂಭಾಗದಲ್ಲಿ ನಿಲ್ಲಿಸಿದ್ದ ಸರ್ಕಾರದ ಕಾರುಗಳ ಮೇಲೆ ಕಲ್ಲು ತೂರಿ ಪುಂಡರು ಅಟ್ಟಹಾಸ ಮೆರೆದಿದ್ದಾರೆ.

ಕರ್ನಾಟಕ ಸರ್ಕಾರ ಎಂದು ಹೆಸರು ಬರೆದಿರುವ ಕಡೆ ಉದ್ದೇಶಪೂರ್ವಕವಾಗಿ ಕಲ್ಲು ಎಸೆಯಲಾಗಿದ್ದು, ಕೆಲ ವಾಹನಗಳ ಬೋರ್ಡ್​​ಗಳನ್ನ ಕಿತ್ತು ತೆಗೆದುಕೊಂಡು ಹೋಗಿರುವ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಸರ್ಕಾರದ ಆರು ಕಾರುಗಳು ಜಖಂಗೊಂಡಿವೆ ಎಂದು ತಿಳಿದುಬಂದಿದೆ.

ಬಿಗುವಿನ ವಾತಾವರಣ ನಿರ್ಮಾಣಗೊಳ್ಳುತ್ತಿದ್ದಂತೆ ಪರಿಸ್ಥಿತಿ ‌ನಿಯಂತ್ರಿಸಲು ಬೆಳಗಾವಿ ಪೊಲೀಸರು ಲಾಠಿ ಚಾರ್ಜ್​ ನಡೆಸಿದ್ದಾರೆ. ಕಲ್ಲು ತೂರಿ ಪುಂಡಾಟ ಮೆರೆಯುತ್ತಿದ್ದವರ ಮೆಲೆ ಪೊಲೀಸರು ಲಾಠಿ ಚಾರ್ಜ್​ ನಡೆಸಿದ್ದು, ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡು ಬಂದಿದ್ದಾರೆ. ಪ್ರಮುಖವಾಗಿ ರಾಮಲಿಂಗಖಿಂಡ ಗಲ್ಲಿ, ಕುಲಕರ್ಣಿ ಗಲ್ಲಿ, ಪಾಟೀಲ್ ಗಲ್ಲಿಯಲ್ಲಿ ಲಾಠಿ ಚಾರ್ಜ್​ ನಡೆಸಲಾಗಿದೆ.

ಕಳೆದ ರಾತ್ರಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡ ಹಿನ್ನೆಲೆ ಭದ್ರತೆಗೆ ಹೆಚ್ಚಿನ ಪೊಲೀಸ್ ​ಪಡೆಗಳನ್ನು ಕರೆಸಿಕೊಳ್ಳಲಾಗಿತ್ತು. ಅಹಿತಕರ ವಾತಾವರಣ ಸೃಷ್ಟಿಯಾಗದಂತೆ ಇದೀಗ ನಗರದ ಎಲ್ಲೆಡೆ ಪೊಲೀಸರು ಗಸ್ತು ತಿರುಗಲು ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com