ಎಂಇಎಸ್ ಗಲಾಟೆ ಚರ್ಚೆಗೆ ಜೆಡಿಎಸ್ ಪಟ್ಟು, ಶಾಸಕ ಭೈರತಿ ಬಸವರಾಜು ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ; ಕಲಾಪ ಮುಂದೂಡಿಕೆ

ವಿಧಾನಸಭೆಯಲ್ಲಿನ ಪ್ರತಿಪಕ್ಷಗಳ ಗದ್ದಲ, ಕೋಲಾಹಲದಿಂದಾಗಿ ಸದನವನ್ನು ಮಧ್ಯಾಹ್ನ 2:30ಕ್ಕೆ  ಮುಂದೂಡಲಾಯಿತು.
ಬೆಳಗಾವಿ ಅಧಿವೇಶನ (ಸಂಗ್ರಹ ಚಿತ್ರ)
ಬೆಳಗಾವಿ ಅಧಿವೇಶನ (ಸಂಗ್ರಹ ಚಿತ್ರ)
Updated on

ಬೆಳಗಾವಿ: ವಿಧಾನಸಭೆಯಲ್ಲಿನ ಪ್ರತಿಪಕ್ಷಗಳ ಗದ್ದಲ, ಕೋಲಾಹಲದಿಂದಾಗಿ ಸದನವನ್ನು ಮಧ್ಯಾಹ್ನ 2:30ಕ್ಕೆ ಮುಂದೂಡಲಾಯಿತು.

ವಿಧಾನಸಭೆಯ 6ನೇ ದಿನದ ಕಲಾಪ ಬೆಳಗ್ಗೆ 11:30ರ ಸುಮಾರಿಗೆ ತಡವಾಗಿ ಆರಂಭವಾಯಿತು. ಸಭೆ ಆರಂಭವಾಗುತ್ತಿದ್ದಂತೆ ಮೃತ ಹಿರಿಯ ರಾಜಕೀಯ ಆರ್.ಎಲ್.ಜಾಲಪ್ಪ ಅವರಿಗೆ ಸಂತಾಪ ಸೂಚಿಸಲಾಯಿತು. ಬಳಿಕ, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನೋತ್ತರ ವೇಳೆಯನ್ನು ಕೈಗೆತ್ತಿಕೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದರು ಧರಣಿ ನಡೆಸಲಾರಂಭಿಸಿದರು. ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದಿದ್ದ ಕೈ ಶಾಸಕರು, ಭೂಕಬಳಿಕೆ ಆರೋಪ ಹೊತ್ತಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರ ರಾಜೀನಾಮೆ ಆಗ್ರಹಿಸಿ, ಘೋಷಣೆ ಕೂಗಿದರು.

ಇದೇ ವೇಳೆ ಜೆಡಿಎಸ್ ಸದಸ್ಯರು ಎಂಇಎಸ್ ಪುಂಡರಿಂದ ಕನ್ನಡಿಗೆ ಆಗಿರುವ ಅವಮಾನವನ್ನು ಖಂಡಿಸಿ ಘೋಷಣೆ ಕೂಗಿದರು. ಜೆಡಿಎಸ್ ಸದಸ್ಯರು ಕನ್ನಡ ಧ್ವಜದ ಶಾಲನ್ನು ಕೊರಳಿಗೆ ಹಾಕಿಕೊಂಡು ನಾಡದ್ರೋಹಿಗಳ ವಿರುದ್ಧ ಘೋಷಣೆ ಕೂಗಿದರು.

ಗಲಾಟೆಯ ಮಧ್ಯೆಯೆ ಮಾತನಾಡಿದ ಸಿದ್ದರಾಮಯ್ಯ, ಸದನ, ನಿಯಮಾವಳಿಗಳ ಪ್ರಕಾರ ನಡೆಯುತ್ತಿಲ್ಲ. ನಿಯಮ 60ರಡಿ  ಭೂಕಬಳಿಕೆ ಆರೋಪ ಹೊತ್ತಿರುವ ಭೈರತಿ ಬಸವರಾಜ್ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಇನ್ನೊಂದೆಡೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಭುವನೇಶ್ವರಿಗೆ ಅವಮಾನ ಆಗಿದೆ. ಎಲ್ಲವನ್ನೂ ಬದಿಗೊತ್ತಿ ಮೊದಲು ಗಡಿಯೊಳಗಿನ ಎಂಇಎಸ್ ಪುಂಡಾಟಿಕೆ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಆದರೆ ಸಿದ್ದರಾಮಯ್ಯ, ಬೈರತಿ ಬಸವರಾಜ್ ಬಗ್ಗೆ ಚರ್ಚೆ ಮಾಡೋಣ ಬಳಿಕ ಎಂಇಎಸ್ ಪುಂಡಾಟಿಕೆ ಬಗ್ಗೆ ಚರ್ಚಿಸೋಣ ಎಂದು ಜೆಡಿಎಸ್ ಸದಸ್ಯರಿಗೆ ಹೇಳಿದರು. ಆದರೆ, ಜೆಡಿಎಸ್ ಸದಸ್ಯರು ಈ ಮಾತಿಗೆ ಒಪ್ಪದೆ, ಕನ್ನಡ ಭಾಷೆಗೆ ಆಗಿರುವ ಅನ್ಯಾಯದ ಬಗ್ಗೆ ಮೊದಲು ಆದ್ಯತೆ ನೀಡಿ ಚರ್ಚಿಸಬೇಕೆಂದು ಘೋಷಣೆ ಕೂಗಲಾರಂಭಿಸಿದರು.

ಈ ವೇಳೆ ಮಾತನಾಡಿದ, ರಾಜ್ಯದಲ್ಲಿ ಗಂಭೀರ ಘಟನೆಗಳು ನಡೆದಿವೆ. ಕಾಂಗ್ರೆಸ್ ಸದಸ್ಯರು ತಮ್ಮ ಜಾಗಕ್ಕೆ ಹೋಗಿ ಕುಳಿತರೆ, ಸದನ ನಿಯಮಾವಳಿ ಪ್ರಕಾರ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಧ್ಯಕ್ಷರು ಹೇಳಿದರು. ಒಂದೆಡೆ ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಧರಣಿ ನಡೆಸುತ್ತಿದ್ದರೆ, ಮತ್ತೊಂದೆಡೆ ಜೆಡಿಎಸ್ ಶಾಸಕರು, ತಮ್ಮ ಜಾಗದಲ್ಲಿ ನಿಂತು ಘೋಷಣೆ ಕೂಗ ತೊಡಗಿದರು. ಕೆಳಮನೆಯಲ್ಲಿ ಏನೂ ಕೇಳದ ಪರಿಸ್ಥಿತಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,  ಆರಂಭಿಕವಾಗಿ ಪ್ರಶ್ನೋತ್ತರ ತೆಗೆದುಕೊಳ್ಳಬೇಕೆಂಬ ನಿಯಮ ಮಾಡಿಕೊಂಡಿದ್ದೇವೆ. ಆ ಪ್ರಕಾರ ಕಲಾಪ ನಡೆಯಬೇಕೆಂದು ಸಭಾಪತಿ ಕಾಗೇರಿಗೆ ಮನವಿ ಮಾಡಿದರು.

ಅಲ್ಲದೆ, ಕಾಂಗ್ರೆಸ್ ಸದಸ್ಯರು ಚರ್ಚೆ ನಡೆಸಲು ಸದನಕ್ಕೆ ಬಂದಿಲ್ಲ.  ಧರಣಿ ಮಾಡಬೇಕೆಂದೇ ಸಭೆಗೆ ಆಗಮಿಸಿದ್ದಾರೆ. ಇದೊಂದು ಬೇಜವಾಬ್ದಾರಿ ವಿರೋಧ ಪಕ್ಷ ಎಂದು ಟೀಕೆ ಮಾಡಿದರು. ಆದರೆ, ಕೃಷ್ಣ ಬೈರೇಗೌಡ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸಚಿವ ಭೈರತಿ ವಿರುದ್ಧದ ಆರೋಪ ಕುರಿತು ಚರ್ಚಿಗೆ ಪಟ್ಟು ಹಿಡಿದರು. ಗದ್ದಲ, ಕೋಲಾಹಲದಿಂದಾಗಿ ಕಲಾಪ ಸಹಜ ಸ್ಥಿತಿಗೆ ಬಾರದಿದ್ದಾಗ ವಿಧಾನಸಭೆ ಸಭಾಧ್ಯಕ್ಷ, ಕಾಗೇರಿ ಕಲಾಪವನ್ನು ಮಧ್ಯಾಹ್ನ 2:30ಕ್ಕೆ ಮುಂದೂಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com