ಬೆಳಗಾವಿಯಲ್ಲಿ ಹೆಚ್ಚಿದ ಕನ್ನಡಿಗರ ಕಿಚ್ಚು: ಇಂದು ಹಲವು ಸಂಘಟನೆಗಳಿಂದ ಪ್ರತಿಭಟನೆ, ಸುವರ್ಣ ಸೌಧಕ್ಕೆ ಮುತ್ತಿಗೆ, ಎಂಇಎಸ್ ನಿಷೇಧಕ್ಕೆ ಒತ್ತಾಯ

ಗಡಿನಾಡು ಬೆಳಗಾವಿಯಲ್ಲಿ ಕನ್ನಡಿಗರ ಕಿಚ್ಚು ಹೆಚ್ಚಾಗಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ(MES) ಸೇರಿದಂತೆ ಹಲವರ ದುಷ್ಕೃತ್ಯ ಮತ್ತು ಪುಂಡಾಟಿಕೆ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದಾರೆ. 
ಬೆಳಗಾವಿಯಲ್ಲಿ ಕನ್ನಡಿಗರ ಪ್ರತಿಭಟನೆ
ಬೆಳಗಾವಿಯಲ್ಲಿ ಕನ್ನಡಿಗರ ಪ್ರತಿಭಟನೆ

ಬೆಳಗಾವಿ: ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯಲ್ಲಿ ಪ್ರತಿಭಟನೆಯ ಕಿಚ್ಚು ಹೊತ್ತಿಕೊಳ್ಳುವ ಸಾಧ್ಯತೆ ಇದೆ. ರಾಜ್ಯದಲ್ಲಿ ಎಂಇಎಸ್ ಹಾಗೂ ಶಿವಸೇನೆಯ ಪುಂಡರ ಪುಂಡಾಟವನ್ನು ಕನ್ನಡ ಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆಗೆ ಕನ್ನಡಿಗರ ಶಕ್ತಿಯನ್ನು ತೋರಿಸುವ ಸಂಬಂಧ ಬೆಳಗಾವಿಯಲ್ಲಿ ಬೃಹತ್ ರಾಲಿ ನಡೆಸಲು ಕನ್ನಡಪರ ಸಂಘಟನೆಗಳು ತೀರ್ಮಾನಿಸಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕನ್ನಡ ಪರ ಸಂಘಟನೆಗಳು ಬೆಳಗಾವಿಯ ಸುವರ್ಣ ವಿಧಾನಸೌಧದಿಂದ 10 ಕಿ.ಮೀ. ದೂರದಲ್ಲಿರುವ ಹಿರೇಬಾಗೇವಾಡಿ ಮುಖಾಂತರ ಬೆಳಗಾವಿ ಪ್ರವೇಶಿಸಲು ನಿರ್ಧರಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಕನ್ನಡ ಪರ ಕಹಳೆ ಮೊಳಗಿಸಲು ಹಿರೇಬಾಗೇವಾಡಿಯಲ್ಲಿ ಸಾವಿರಾರು ಜನರು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುತ್ತಿದ್ದಾರೆ.

ಈ ಬಗ್ಗೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಕರವೇ ಬಣದ ನಾರಾಯಣಗೌಡ, ಬೆಂಗಳೂರಿನಿಂದ 120 ವಾಹನಗಳಲ್ಲಿ ಕರವೇ ಕಾರ್ಯಕರ್ತರು ಬೆಳಗಾವಿಯತ್ತ ಹೊರಟಿದ್ದೇವೆ. ಇದಕ್ಕೆ ಧಾರವಾಡದಲ್ಲಿನ ಕಾರ್ಯಕರ್ತರು ಸೇರ್ಪಡೆಯಾಗಿದ್ದು, ಎಲ್ಲರ ಜೊತೆಗೂಡಿ ಬೆಳಗಾವಿಯಲ್ಲಿ ಕನ್ನಡಿಗರ ಶಕ್ತಿಯನ್ನು ಪ್ರದರ್ಶನ ಮಾಡಲು ಸಜ್ಜಾಗಿದ್ದವೆ. ಎಂಎಸ್ ಹಾಗೂ ಶಿವಸೇನೆ ಪುಂಡರ ಕರ್ನಾಟಕದ ಗಡಿಯೊಳಗಿನ ಪುಂಡಾಟ. ಇದನ್ನು ಖಂಡಿಸಿ ಬೃಹತ್ ರಾಲಿಯನ್ನು ಹಮ್ಮಿಕೊಂಡಿದ್ದೇವೆ. ಮಧ್ಯಾಹ್ನ 12 ಗಂಟೆಗೆ ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಸುವರ್ಣಸೌಧಕ್ಕೆಕಾಲ್ನಡಿಗೆಯಲ್ಲಿ ಜಾಥಾ ನಡೆಸಲಿದ್ದೇವೆ. ಬೆಳಗಾವಿಯಲ್ಲಿ ಎಂಇಎಸ್ ರಾಜಕೀಯ ಸ್ಥಾನ-ಮಾನ ಕಳೆದುಕೊಂಡಿದೆ. ಎಂಇಎಸ್ ಪರ ಇದ್ದ ಏಳು ಶಾಸಕರು ಈಗ ಇಲ್ಲ ಎಂದು ತಿಳಿಸಿದರು.

ವಿವಿಧ ಕನ್ನಡಪರ ಸಂಘಟನೆಗಳಿಂದ ಇಂದು ಪ್ರತಿಭಟನೆ: ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಲು, ಕನ್ನಡಿಗರನ್ನು, ಕನ್ನಡ ಭಾಷೆಯನ್ನು ಕೆಣಕುವವರ ವಿರುದ್ಧ ಹೋರಾಡಲು ವಿವಿಧ ಕನ್ನಡಪರ ಸಂಘಟನೆಗಳು ಬೆಳಗಾವಿ ಚಲೋ ನಡೆಸಲು ಮುಂದಾಗಿವೆ. ಇಂದು ಬೆಳಗಾವಿಯಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಕನ್ನಡ ಸಂಘದ ನಾರಾಯಣ ಗೌಡ ಬಣ ಮತ್ತು ಪ್ರವೀಣ್ ಶೆಟ್ಟಿ ಬಣಗಳು ನಿರ್ಧರಿಸಿವೆ. ಇದಕ್ಕೆ ರೈತ ಸಂಘಟನೆಗಳು, ಮಹಿಳಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. 

ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದು ಸರ್ಕಾರದ ಜನ ಪ್ರತಿನಿಧಿಗಳು ಬೆಳಗಾವಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ಹೊತ್ತಿನಲ್ಲಿಯೇ ಎಂಇಎಸ್ ತನ್ನ ಪುಂಡಾಟಿಕೆಯನ್ನು ಮೆರೆಯುತ್ತಿವೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಎಂಇಎಸ್ ಗೆ ಸ್ಪಷ್ಟ ಕಠಿಣ ಸಂದೇಶ ನೀಡಬೇಕೆಂದು ಸಂಘಟನೆಗಳು ಒತ್ತಾಯಿಸುತ್ತಿವೆ. 

ಎಂಇಎಸ್ ನಿಷೇಧಕ್ಕೆ ಒತ್ತಾಯ: ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಂಘಟನೆಯನ್ನು ನಿಷೇಧಿಸಬೇಕು, ಕನ್ನಡ ಬಾವುಟವನ್ನು ಸುಟ್ಟುಹಾಕುವ, ಕನ್ನಡ ಭಾಷೆಗೆ ಧಕ್ಕೆಯನ್ನುಂಟುಮಾಡುವ ಸಂಘಟನೆಯನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಕ್ರಿಯವಾಗಿರಲು ಬಿಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಒತ್ತಾಯಿಸಿದ್ದಾರೆ. ಕಾಲ್ನಡಿಗೆ ಮೂಲಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಚನ್ನಮ್ಮ ವೃತ್ತಕ್ಕೆ ರ್ಯಾಲಿ ಮೂಲಕ ಸಾಗಲು ನಿರ್ಧರಿಸಿದ್ದಾರೆ.

ಬೆಳಗಾವಿಯಲ್ಲಿ ತೀವ್ರ ಕಟ್ಟೆಚ್ಚರಕ್ಕೆ ಸಿಎಂ ಸೂಚನೆ: ಬೆಳಗಾವಿ ನಗರ ಕನ್ನಡಿಗರು ಮತ್ತು ಮಹಾರಾಷ್ಟ್ರ ನಡುವೆ ಸಿಟ್ಟು, ದ್ವೇಷ, ಆಕ್ರೋಶಕ್ಕೆ ಕಾರಣವಾಗಿರುವುದರಿಂದ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪರಿಸ್ಥಿತಿ ಬಹಳ ಸೂಕ್ಷ್ಮವಾಗಿದೆ. ತೀವ್ರ ಕಟ್ಟೆಚ್ಚರ ವಹಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಗೃಹ ಇಲಾಖೆಗೆ ಸೂಚಿಸಿದ್ದಾರೆ. ಬೆಳಗಾವಿಯಾದ್ಯಂತ 2 ಸಾವಿರದ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಡಿಸೆಂಬರ್ 22ರ ಬೆಳಗ್ಗೆ 6 ಗಂಟೆಯವರಗೆ ನಿಷೇಧಾಜ್ಞೆ ಮುಂದುವರಿಸಲಾಗಿದೆ. 

ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಅವರ ಪ್ರತಿಮೆಗಳನ್ನು ದುಷ್ಕರ್ಮಿಗಳು ಗುರಿಯಾಗಿಸಿದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಪ್ರತಿಮ ವ್ಯಕ್ತಿಗಳನ್ನು ಗೌರವಿಸಬೇಕು, ವದಂತಿಗಳಿಗೆ ಕಿವಿಗೊಡುವುದನ್ನು ತಪ್ಪಿಸಬೇಕು ಎಂದು ಜನರಿಗೆ ಮನವಿ ಮಾಡಿದ್ದಾರೆ.

ಶಿವಾಜಿಯ ಪ್ರತಿಮೆಯನ್ನು ಅಪವಿತ್ರಗೊಳಿಸಲಾಗಿದೆ ಎಂಬ ಸುದ್ದಿಯ ನಂತರ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ಬ್ರಿಟಿಷರ ವಿರುದ್ಧ ಹೋರಾಡಿದ 19 ನೇ ಶತಮಾನದ ದೇಶಭಕ್ತ ರಾಯಣ್ಣನ ಪ್ರತಿಮೆಯನ್ನು ಧ್ವಂಸಗೊಳಿಸಿದ್ದೇ ಬೆಳಗಾವಿಯಲ್ಲಿ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. 

ದೇಶಭಕ್ತರನ್ನು ಗೌರವಿಸುವಂತೆ ನಾನು ಜನರಲ್ಲಿ ಮನವಿ ಮಾಡುತ್ತೇನೆ, ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ, ಗೌರವಾರ್ಥವಾಗಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜರ ಪ್ರತಿಮೆಗಳನ್ನು ನಿರ್ಮಿಸಲಾಗಿದೆ, ನಾವು ಅವರನ್ನು ಗೌರವಿಸಿ ಘನತೆಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. 

ಬೆಂಗಳೂರಲ್ಲಿ ಪ್ರತಿಭಟನೆಯ ರೊಚ್ಚು: ಬೆಳಗಾವಿ ಅಷ್ಟೇ ಅಲ್ಲ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಟಾಳ್ ಪಕ್ಷದ ನೃತೃತ್ವದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದೆ.  ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುವ ಈ ಪ್ರತಿಭಟನೆಯಲ್ಲಿ ಎಂಇಎಸ್ ಪುಂಡಾಟಿಕೆ ಖಂಡಿಸಿ ಮಧ್ಯಾಹ್ನ 11 ಗಂಟೆಗೆ ಕರಾಳ ದಿನ ಆಚರಿಸಲು ನಿರ್ಧರಿಸಲಾಗಿದೆ.

ಅಲ್ಲದೆ ಶಿವರಾಮೇಗೌಡ ಬಣದ ಕರವೇ ಕಾರ್ಯಕರ್ತರು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮುಂದೆ ಎಂಇಎಸ್ ಹಾಗೂ ಶಿವಸೇನೆಯ ಭೂತದಹನ ಮಾಡಿ, ನಾಡದ್ರೋಹಿಗಳ ವಿರುದ್ಧಕ ಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪುಂಡರ ವಿರುದ್ಧ ಸಣ್ಣ-ಪುಟ್ಟಕ್ರಮಗಳನ್ನುಕೈಗೊಳ್ಳುವುದು ಸಮಂಜಸವಲ್ಲ. ನಾಳೆಯೊಳಗೆ ಎಂಇಎಸ್ ಹಾಗೂ ಶಿವಸೇನೆಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಕನ್ನಡಪರ ಸಂಘಟನೆಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿವೆ. ಅಲ್ಲದೆ, ನಾಳೆ ಏನಾದ್ರೂ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳದಿದ್ದರೆ, ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಭೆ ಸೇರಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com