ಮಹದಾಯಿ ಕುರಿತು ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಮಹತ್ವದ ಹೇಳಿಕೆ
ಬೆಳಗಾವಿ: ಕರ್ನಾಟಕದ ಬಹು ಉದ್ದೇಶಿತ ಮಹದಾಯಿ ಯೋಜನೆ ಕುರಿತು ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಬಹುಬೇಡಿಕೆ ಯೋಜನೆಯಾಗಿರುವ ಮಹದಾಯಿ ಕಾಮಗಾರಿಗಾಗಿ ಹೋರಾಟ ನಡೆಯುತ್ತಲೆ ಇವೆ. ಆದರೆ, ಈವರೆಗೂ ಈ ಯೋಜನೆ ಆರಂಭ ಕಂಡಿಲ್ಲ. ಮಹದಾಯಿ ಯೋಜನೆ ಕುರಿತಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ವಿಧಾನಸಭೆಯಲ್ಲಿ ಉತ್ತರಿಸಿದರು.
ಮಹದಾಯಿ ನ್ಯಾಯಾಧೀಕರಣದ ಆದೇಶ ಬಂದಮೇಲೆ ನೀರು ಹಂಚಿಕೆ ಕುರಿತಂತೆ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಗಿದೆ. ರಾಜ್ಯದ ಬೇಡಿಕೆಯಾಗಿದ್ದ ಕಳಸಾ ನಾಲಾ ಯೋಜನೆಗೆ 3.56 ಟಿಎಂಸಿ, ಬಂಡೂರಿ ನಾಲಾ ಯೋಜನೆಗೆ 4 ಟಿಎಂಸಿ ಬಂದಿಲ್ಲ. ರಾಜ್ಯಕ್ಕೆ ಕಡಿಮೆ ನೀರು ಹಂಚಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಈಗಿರುವ ಟ್ರಿಬ್ಯುನಲ್ ನಲ್ಲಿ ನೀಡಿರುವ ಹಂಚಿಕೆ ಆಧಾರದ ಮೇಲೆ ಡಿಪಿಆರ್ ಸಿದ್ಧಪಡಿಸಬೇಕಾ? ಅಥವಾ ಪೂರ್ಣ ತೀರ್ಪು ಬಂದ ಮೇಲೆ ಯೋಜನಾ ವರದಿ ಸಿದ್ಧಪಡಿಸಬೇಕಾ ಎಂಬ ಗೊಂದಲದಲ್ಲಿ ಸರ್ಕಾರ ಇತ್ತು. ಸದ್ಯ ಈಗಿರುವ ನ್ಯಾಯಾಧೀಕರಣದ ತೀರ್ಪಿನ ಪ್ರಕಾರ, ನಮ್ಮ ಪಾಲಿನ ನೀರು ಬಳಸಿಕೊಳ್ಳುವ ಸಂಬಂಧ ಯೋಜನಾ ವರದಿಯಲ್ಲಿ ಬದಲಾವಣೆ ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೇವೆ. ಮಹದಾಯಿ ಯೋಜನಾ ವರದಿಗೆ ಕೇಂದ್ರ ಸರ್ಕಾರದಿಂದ ಅನುಮತಿ ದೊರೆಯಲಿದೆ. ಎಂಒ ನಿವಾರಣೆಯಾಗಬೇಕಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ, ಕೇಂದ್ರದ ಬೆನ್ನುಬಿದ್ದಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ್ದ ಕುಮಾರಸ್ವಾಮಿ, ಕಳಸಾ-ಬಂಡೂರಿ ಯೋಜನೆಯಲ್ಲಿ ಸಿಡಬ್ಲುಸಿ ಮಧ್ಯಪ್ರವೇಶದಿಂದಾಗಿ ಡಿಪಿಆರ್ ಅನುಮೋದನೆಗೊಳ್ಳುತ್ತಿಲ್ಲ ಎಂದರು. ಈ ಪ್ರಶ್ನೆಗೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಸಿಡಬ್ಲುಸಿ ವಿಚಾರ ಸುಪ್ರೀಂಕೋರ್ಟ್ ನಲ್ಲಿದೆ ಎಂದರು. ಬಳಿಕ ಮಾತನಾಡಿದ ಎಚ್ ಡಿ ಕೆ, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಶೀಘ್ರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಯೋಜನೆಗೆ ಅನುಮತಿ ಪಡೆಯಬೇಕು ಎಂದು ಆಗ್ರಹಿಸಿದರು.