ಹುಬ್ಬಳ್ಳಿ: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ನೀಡುವ ಯೋಜನೆಗೆ ಹಲವು ಪೋಷಕರು ಮತ್ತು ಸಮಾಜದ ಒಂದು ವರ್ಗದ ಜನ, ಹಲವು ಮಠಾಧೀಶರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಕನಿಷ್ಠ ಮೂವರು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗೆ ಸೇರಿಸಿದ್ದಾರೆ. ಇದಕ್ಕೆ ಕಾರಣ ಮೊಟ್ಟೆ ನೀಡುವ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳು ಹೋಗುವುದು ಬೇಡವೆಂದು ಪೋಷಕರ ನಿರ್ಧಾರ.
ಕೊಪ್ಪಳದ ಸರ್ಕಾರಿ ಶಾಲೆಯೊಂದರ 1ನೇ ತರಗತಿಯ ಮಗುವಿನ ಪೋಷಕರು, ಯಾವಾಗ ಶಾಲೆಯಲ್ಲಿ ಮೊಟ್ಟೆ ನೀಡುತ್ತಾರೆ ಎಂದು ಗೊತ್ತಾಯಿತೋ ಅಂದು ವರ್ಗಾವಣೆ ಪತ್ರ(Leaving certificate 0r transfer certificate) ಪಡೆದುಕೊಂಡರು. ಬೇರೆ ಮಕ್ಕಳು ಮೊಟ್ಟೆ ತಿನ್ನುವುದು ನೋಡಿ ತಮ್ಮ ಮಗು ಕೂಡ ಮೊಟ್ಟೆ ತಿನ್ನಲು ಆರಂಭಿಸಬಹುದು ಎಂಬ ಆತಂಕ ಈ ಪೋಷಕರದ್ದಂತೆ. ಇದೇ ರೀತಿ ಬಳ್ಳಾರಿಯಲ್ಲಿ ಎರಡು ಪ್ರಕರಣಗಳಾಗಿವೆ. ಆದರೆ ಸರ್ಕಾರ ಆದೇಶವಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮೊಟ್ಟೆ ಮತ್ತು ಬಾಳೆಹಣ್ಣನ್ನು ಮಕ್ಕಳಿಗೆ ನೀಡಲು ಮುಂದಾಗಿದ್ದಾರೆ.
ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಟಿ.ಸಿ( ಪ್ರಮಾಣ ಪತ್ರಗಳನ್ನು) ನೀಡುವಂತೆ ಒತ್ತಾಯಿಸುತ್ತಿರುವ ಕೆಲವು ಘಟನೆಗಳು ನಮ್ಮ ಗಮನಕ್ಕೆ ಬಂದಿವೆ. ಇದು ಮಧ್ಯಾಹ್ನದ ಊಟ ಯೋಜನೆಗಳಲ್ಲಿ ಮೊಟ್ಟೆಗಳನ್ನು ನೀಡುತ್ತಿರುವುದಕ್ಕೆ ಸಂಘಟನೆಯ ಸದಸ್ಯರ ಪ್ರತಿಭಟನೆಯ ಸಂಕೇತವಾಗಿದೆ. ಶಾಲೆಗಳು ಮೊಟ್ಟೆ ತಿನ್ನುವ ಮತ್ತು ಬಾಳೆಹಣ್ಣು ತಿನ್ನುವ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಪಟ್ಟಿಯ ಪ್ರಕಾರ ಆಹಾರ ಒದಗಿಸಲಾಗಿದೆ. ಇಲ್ಲಿ ಮಕ್ಕಳನ್ನು ಮೊಟ್ಟೆ ತಿನ್ನುವಂತೆ ಒತ್ತಾಯಿಸುವ ಅಥವಾ ಅವರ ಮೇಲೆ ಪ್ರಭಾವ ಬೀರುವ ಪ್ರಶ್ನೆಯೇ ಇಲ್ಲ ಎಂದು ಬಳ್ಳಾರಿಯ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.
ಅಪೌಷ್ಟಿಕತೆ ವಿರುದ್ಧ ಶಾಲಾ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಘೋಷಿಸಿತ್ತು. ಕಲ್ಯಾಣ ಕರ್ನಾಟಕ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಅನೇಕ ಅಪೌಷ್ಟಿಕ ಮಕ್ಕಳು ಓದುತ್ತಾರೆ ಎಂಬುದು ತಿಳಿದಿರುವ ಸಂಗತಿಯಾಗಿದೆ, ಹೀಗಾಗಿ ಸರ್ಕಾರ ಮೊಟ್ಟೆಗಳನ್ನು ನೀಡಲು ಮುಂದಾಗಿದೆ. ಸರ್ಕಾರದ ಈ ಕ್ರಮವನ್ನು ಅನೇಕರು ಸ್ವಾಗತಿಸಿದರೆ, ಆಯ್ದ ಸಂಘಟನೆಗಳು ಬೀದರ್, ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ಮೊಟ್ಟೆಗಳನ್ನು ನೀಡುವ ಯೋಜನೆಯಿಂದ ಹಿಂದೆ ಸರಿಯಬೇಕೆಂದು ಪ್ರತಿಭಟನೆ ನಡೆಸಿದವು. ಬದಲಿಗೆ ಸಸ್ಯಾಹಾರದಲ್ಲಿ ಪ್ರೋಟೀನ್ ಆಹಾರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಮೊಟ್ಟೆ ಮತ್ತು ಬಾಳೆಹಣ್ಣುಗಳನ್ನು ಪರಿಚಯಿಸಿದ ನಂತರ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಸುಧಾರಿಸಿದೆ ಎಂಬ ವರದಿಗಳೂ ಇವೆ. ಮಕ್ಕಳಿಗೆ ತೊಂದರೆಯಾಗದಂತೆ ಸರಕಾರ ಪ್ರತಿಭಟನಾ ನಿರತ ಸಂಘಟನೆಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ಶಿಕ್ಷಣ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಕೆಲವು ಶಾಲೆಗಳಲ್ಲಿ ಮೊಟ್ಟೆ ಸೇವಿಸುವ ಮಕ್ಕಳ ಜೊತೆ ಕೂರಿಸದೆ ಸಸ್ಯಾಹಾರಿ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಿದ ಉದಾಹರಣೆಗಳಿವೆ.
ಮೊದಲು ಎಲ್ಲಾ ಮಕ್ಕಳು ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದರು. ಆದರೆ ಈಗ ಮೊಟ್ಟೆ ವಿತರಿಸಲು ಆರಂಭಿಸಿದ ನಂತರ ಕೊಪ್ಪಳ ತಾಲೂಕಿನ ಕೆಲವು ಶಾಲೆಗಳು ಮಕ್ಕಳ ನಡುವೆ ಭಿನ್ನಾಭಿಪ್ರಾಯ ತರುತ್ತಿವೆ. ಮಕ್ಕಳ ವಿವಿಧ ಆಹಾರ ಪದ್ಧತಿಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಕಾರ್ಯಕರ್ತೆಯೊಬ್ಬರು ಹೇಳುತ್ತಾರೆ.
Advertisement