ಪಕ್ಷದಲ್ಲಿನ ಬದಲಾವಣೆ ಮಾಧ್ಯಮಗಳ ಸೃಷ್ಟಿಯಷ್ಟೇ, 2023ರ ಚುನಾವಣೆಯನ್ನು ಬಿಜೆಪಿ ಒಗ್ಗಟ್ಟಿನಿಂದ ಎದುರಿಸಲಿದೆ: ಸಿಎಂ ಬೊಮ್ಮಾಯಿ

ಪಕ್ಷದಲ್ಲಿ ಬದಲಾವಣೆ ಆಗುತ್ತದೆ ಎನ್ನುವುದು ಕೇವಲ ಮಾಧ್ಯಮಗಳ ಸೃಷ್ಟಿಯಷ್ಟೇ. ಪಕ್ಷ ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇದ್ದು, ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಸಾಮೂಹಿಕವಾಗಿ ಎದುರಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ಪಕ್ಷದಲ್ಲಿ ಬದಲಾವಣೆ ಆಗುತ್ತದೆ ಎನ್ನುವುದು ಕೇವಲ ಮಾಧ್ಯಮಗಳ ಸೃಷ್ಟಿಯಷ್ಟೇ. ಪಕ್ಷ ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇದ್ದು, ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಸಾಮೂಹಿಕವಾಗಿ ಎದುರಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಡಿಸೆಂಬರ್ 28 ಮತ್ತು 29 ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ಕೋರ್ ಕಮಿಟಿ ಮತ್ತು ಕಾರ್ಯಕಾರಿ ಸಭೆಗಳಲ್ಲಿ ಸಂಭವನೀಯ ಚರ್ಚೆಯ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.

ಪಕ್ಷದಲ್ಲಿ ಬದಲಾವಣೆಗಳಾಗುತ್ತದೆ ಎಂಬುದು ಮಾಧ್ಯಮಗಳ ಸೃಷ್ಟಿಯಷ್ಟೇ. ನೀವೇ ಸೃಷ್ಟಿಸಿ, ನಾವೇ ಪ್ರಶ್ನೆ ಮಾಡುತ್ತಿದ್ದೀರಿ. ಸಂಪುಟ ಪುನಾರಚನೆ ಮಾಧ್ಯಮ ಸೃಷ್ಟಿಯಾಗಿದೆ. ಪುನಾರಚನೆ ಆಗುವ ವಿಚಾರ ನಮಗೆ ಗೊತ್ತಿಲ್ಲ, ನಾವು ಪಕ್ಷದಲ್ಲಿ ಏನು ಚರ್ಚೆ ಮಾಡುತ್ತೇವೆ, ಏನು ರಾಜಕಾರಣ ಮಾಡುತ್ತೇವೆ ಅಂತ ನಿಮಗೆ ಹೇಳುವ ಅಗತ್ಯವಿಲ್ಲ. ಯಾವ ಸಂದರ್ಭದಲ್ಲಿ ಏನು ಚರ್ಚೆ ಮಾಡಬೇಕೋ ಮಾಡುತ್ತೇವೆ, ಅದು ನಮ್ಮ ಪಕ್ಷದ ಆಂತರಿಕ ವಿಚಾರ ಎಂದು ಹೇಳಿದರು.

ರಾಜ್ಯ ಬಿಜೆಪಿಯ ವಿಚಾರಗಳೆಲ್ಲವನ್ನೂ ಪಕ್ಷದ ಹೈಕಮಾಂಡ್ ಗಮನಿಸುತ್ತಿದೆ. ಏನೆಲ್ಲ ಚರ್ಚೆ ಆಗುತ್ತಿದೆಯೋ‌ ಎಲ್ಲವನ್ನೂ ಹೈಕಮಾಂಡ್ ನೋಡುತ್ತಿದೆ, ಯಾವುದೇ ತೊಂದರೆ ಇಲ್ಲ. ಪಕ್ಷ ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಕೊಡುತ್ತೇವೆ. ನಮ್ಮ ಕೆಲಸಗಳನ್ನು ಮುಂದಿಟ್ಟುಕೊಂಡು ನಾವು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ಶಾಸಕ ರಮೇಶ್ ಜಾರಕಿಹೊಳಿ ವಿರುದ್ದದ ಕ್ರಮ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಲ್ಲವೂ ಪಕ್ಷದ ಹೈಕಮಾಂಡ್ ಗಮನದಲ್ಲಿದೆ. ತಾವು ಕೇಳುವಂತಹ ಎಲ್ಲವೂ ಕೂಡ ಪಕ್ಷದ ಹೈಕಮಾಂಡ್ ನೋಡುತ್ತಿದೆ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ‌ ವಿರುದ್ದ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಹೊಸ ವರ್ಷ ಆಚರಣೆಗೆ ಪ್ರವಾಸಿ ತಾಣ, ರೆಸಾರ್ಟ್​​ಗಳಿಗೆ ಮುಗಿಬೀಳುತ್ತಿರುವ ವಿಚಾರ ಕುರಿತು ಮಾತನಾಡಿ, ಸಂಭ್ರಮಾಚರಣೆಗೆ ಜನರು ಎಲ್ಲಾದರೂ ಹೋಗಲಿ. ಆದರೆ, ಕೋವಿಡ್ ನಿಯಮಗಳನ್ನು ಅನುಸರಿಸಲಿ. ಅವರಿಗೆ ಎಲ್ಲಿಗೆ ಬೇಕಾದರೂ ಹೋಗಲು ಸ್ವಾತಂತ್ರ್ಯ ಇದೆ, ಆದರೆ ಕೋವಿಡ್ ನಿಯಮ ಪಾಲಿಸಿ ಸಂಭ್ರಮಾಚರಣೆ ಮಾಡಬೇಕು ಎಂದು ಸಲಹೆ ನೀಡಿದರು.

ಇಂದು ಕೋವಿಡ್ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಕಾರ್ಯಕ್ರಮ ಇದೆ. ಈ ಯೋಜನೆ ಜಾರಿ ವಿಳಂಬ ಆಗಿಲ್ಲ. ಕೋವಿಡ್ ಮೃತರ ಕುರಿತು ದಾಖಲೆಗಳ ಸಂಗ್ರಹ ನಡೆಯುತ್ತಿತ್ತು. ಎರಡು ತಿಂಗಳು ನೀತಿ ಸಂಹಿತೆ ಇತ್ತು, ಹಾಗಾಗಿ ಸ್ವಲ್ಪ ವಿಳಂಬವಾಗಿದೆ. ಆದರೆ ಈಗಾಗಲೇ ಎಲ್ಲ ಕಡೆ ಜಿಲ್ಲಾಧಿಕಾರಿಗಳು ಪರಿಹಾರ ಕೊಡುತ್ತಿದ್ದಾರೆ, ಇಂದು ಕೇವಲ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಹೇಳಿದರು.

ರಾತ್ರಿ ಕರ್ಫ್ಯೂಗೆ ವಿರೋಧ ವ್ಯಕ್ತವಾಗುತ್ತಿದೆ, ಆದರೆ ಜನರ ಆರೋಗ್ಯ ದೃಷ್ಟಿಯಿಂದ ಇದನ್ನು ಜಾರಿ ಮಾಡಲಾಗಿದೆ. ನಮಗೂ ಆರ್ಥಿಕ ಚಟುವಟಿಕೆಗಳು ನಡೆಯಲಿ ಅನ್ನೋದಿದೆ, ಆದರೆ ಕೋವಿಡ್ ಕಾರಣದಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. ಜನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮೊಣಕಾಲು ನೋವಿಗೆ ನಾಟಿ ಔಷಧ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮೊಣಕಾಲು ನೋವಿಗೆ ನಾಟಿ (ಸಾಂಪ್ರದಾಯಿಕ) ಔಷಧವನ್ನು ಚಿಕಿತ್ಸೆಯಾಗಿ ತೆಗೆದುಕೊಂಡಿದ್ದಾರೆ. ಸೋಮವಾರ ಬಿಪಿಎಲ್ ಮತ್ತು ಎಪಿಎಲ್ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಚಳಿಗಾಲದ ಅಧಿವೇಶನ ಮುಗಿದ ಕೂಡಲೇ ಬೆಂಗಳೂರಿಗೆ ಬರುವ ಮುನ್ನ ಬೆಳಗಾವಿಯಲ್ಲಿ ನಾಟಿ ಔಷಧಿ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com