ರಾಜ್ಯಾದ್ಯಂತ ಮಳೆ: ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸ್ವಕ್ಷೇತ್ರದಲ್ಲಿರಲು ಸಿಎಂ ಸೂಚನೆ, ಜಿಲ್ಲಾಧಿಕಾರಿಗಳಿಂದ ಮಾಹಿತಿ

ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲಿ ಖಾನಾಪುರ, ಸಂಕೇಶ್ವರ ಮೊದಲಾದ ತಾಲ್ಲೂಕುಗಳಲ್ಲಿ ಜಮೀನುಗಳಿಗೆ, ಮನೆಗಳಿಗೆ ನೀರು ನುಗ್ಗಿ ಜನರು ಆತಂಕಪಡುವ ಪರಿಸ್ಥಿತಿಯುಂಟಾಗಿದೆ. ಸಾವಿರಾರು ಎಕರೆ ಬೆಳೆಗೆ ಹಾನಿಯಾಗಿದೆ.
ಭೂಕುಸಿತದಿಂದ ಮಂಗಳೂರು-ಮುಂಬೈ ರೈಲು ದೂದ್ ಸಾಗರ ಹತ್ತಿರ ಹಳಿ ತಪ್ಪಿರುವುದು
ಭೂಕುಸಿತದಿಂದ ಮಂಗಳೂರು-ಮುಂಬೈ ರೈಲು ದೂದ್ ಸಾಗರ ಹತ್ತಿರ ಹಳಿ ತಪ್ಪಿರುವುದು

ಬೆಂಗಳೂರು/ಬೆಳಗಾವಿ/ಕೊಡಗು: ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲಿ ಖಾನಾಪುರ, ಸಂಕೇಶ್ವರ ಮೊದಲಾದ ತಾಲ್ಲೂಕುಗಳಲ್ಲಿ ಜಮೀನುಗಳಿಗೆ, ಮನೆಗಳಿಗೆ ನೀರು ನುಗ್ಗಿ ಜನರು ಆತಂಕಪಡುವ ಪರಿಸ್ಥಿತಿಯುಂಟಾಗಿದೆ. ಸಾವಿರಾರು ಎಕರೆ ಬೆಳೆಗೆ ಹಾನಿಯಾಗಿದೆ.

ಬೆಳಗಾವಿ ನಗರದಲ್ಲಿ ಕೂಡ ಭಾರೀ ಮಳೆಯಾಗುತ್ತಿದ್ದು ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಘಟಪ್ರಭ, ಮಲಪ್ರಭಾ ನದಿಗಳು ಸೇರಿದಂತೆ ಉಪ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ತೀರದ ಜನರುಗಳಿಗೆ ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ವೇದಗಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸ್ಥಗಿತಗೊಳಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ, ರಾಯಚೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸತತ ಮಳೆಯಾಗುತ್ತಿದೆ.

ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ದೂರವಾಣಿ ಮಾತುಕತೆ: ಕೃಷ್ಣಾ ನದಿ ಪಾತ್ರದ ಪ್ರದೇಶಗಳಲ್ಲಿ ಮಳೆಯು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ನದಿ ಪಾತ್ರದ ಜನರ ಬಗ್ಗೆ ನಿಗಾವಹಿಸುವಂತೆ ಸೂಚಿಸಿದ್ದಾರೆ. ಅಗತ್ಯಬಿದ್ದರೆ ಗ್ರಾಮಸ್ಥರನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಸರ್ಕಾರದಿಂದ ಹೆಚ್ಚಿನ ನೆರವು ಬೇಕಾದಲ್ಲಿ ಕೂಡಲೇ ಕರೆ ಮಾಡಿ ತಿಳಿಸುವಂತೆ ಸೂಚಿಸಿದ್ದಾರೆ. ಅದೇ ರೀತಿ ಬೇರೆ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಮುಖ್ಯಮಂತ್ರಿಗಳು ಕರೆ ಮಾಡಿ ಮಳೆ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.

ಸ್ವಕ್ಷೇತ್ರ ಬಿಟ್ಟು ಹೋಗಬೇಡಿ: ಭಾರೀ ಮಳೆ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವ ಕಾರಣ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಜಿಲ್ಲೆಗಳನ್ನು ಬಿಟ್ಟು ಹೋಗದಂತೆ ಸಿಎಂ ಸೂಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿದ್ದು ಜನರ ರಕ್ಷಣೆ ಮತ್ತು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನೋಡಿಕೊಳ್ಳಬೇಕೆಂದು ಸೂಚಿಸಿದ್ದಾರೆ.

ಧಾರವಾಡದ ಅಂಬಲಿಕೊಪ್ಪ ಮತ್ತು ದೊಮಬ್ರಿಕೊಪ್ಪ ಮಧ್ಯೆ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭಾರೀ ಪ್ರಮಾಣದ ಭೂ ಕುಸಿತದಿಂದ ಮಂಗಳೂರು-ಮುಂಬೈ ರೈಲು ಸಂಪರ್ಕ ಕಡಿತಗೊಂಡಿದೆ. ಗೋವಾ-ಕರ್ನಾಟಕ ಗಡಿಭಾಗ ದೂದ್ ಸಾಗರ ಹತ್ತಿರ ಭೂ ಕುಸಿತ ಉಂಟಾಗಿದ್ದು ಪುನರ್ ಸ್ಥಾಪನೆ ಕಾರ್ಯ ನೆರವೇರುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರಾಷ್ಡ್ರೀಯ ಹೆದ್ದಾರಿ 63 ಸಂಚಾರ ಸ್ಥಗಿತಗೊಂಡಿದೆ. ಮೊಗದ್ದೆ , ಹೆಬ್ಬುಳ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಹೆಚ್ಚು ಮಳೆ ನೀರು ಬಂದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ.

ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿ ಪಾತ್ರಗಳಲ್ಲಿರುವ ಮತ್ತು ತಗ್ಗು ಪ್ರದೇಶಗಳಲ್ಲಿರುವ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಜಿಲ್ಲೆಯ ಉಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದ ಮೂರ್ನಾಲ್ಕು ಕಾಲುವೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. 

ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ನೆರೆಯ ಮಹಾರಾಷ್ಟ್ರದಲ್ಲಿನ ನಿರಂತರ ಮಳೆಯಿಂದಾಗಿ ಕೃಷ್ಣ ಹಾಗೂ ಉಪ ನದಿಗಳಾದ ವೇದಗಂಗಾ, ದೂದಗಂಗಾ, ಪಂಚಗಂಗಾ, ಮಲಪ್ರಭಾ ನದಿ ಹಾಗೂ ಅದರ ಉಪ ನದಿಗಳ ನೀರಿನ ಹರಿವು ಹೆಚ್ಚಾಗಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಇನ್ನೂ ನೀರು ಹೊರಬಿಡದ ಕಾರಣ ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಪ್ರವಾಹದ ಯಾವುದೇ ಭೀತಿಯಿಲ್ಲ. ಆದಾಗ್ಯೂ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದ್ದು, ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿಕೊಂಡಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಅಬ್ಬರಿಸುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿ ಸಹಿತ ಸುರಿದ ಮಳೆಗೆ ಜೊಯಿಡಾ ತಾಲೂಕಿನ ಕುಂಬಾರವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿರವತ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿದಿದೆ. ಸೂಪಾ ಜಲಾಶಯಕ್ಕೆ ನೀರನ್ನು ಒದಗಿಸುವ ಕಾಳಿ ನದಿಯ ಉಪನದಿಗಳಾದ ಪಾಂಡರಿ ಹಾಗೂ ಕಾನೇರಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ಆ ಭಾಗದ ಜನರ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.

ಕದ್ರಾ, ಕೊಡಸಳ್ಳಿ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಿದ್ದು, ಹೆಚ್ಚುವರಿ ನೀರನ್ನು ಜಲಾಶಯಗಳಿಂದ ಹೊರಬಿಡಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ವರುಣನ ಅಬ್ಬರದಿಂದಾಗಿ ಜಿಲ್ಲೆಯ ಶರಾವತಿ, ತುಂಗಾ, ವರದಾ, ಕುಮದ್ವತಿ, ಮಾಲತಿ, ದಂಡಾವತಿ ಸೇರಿದಂತೆ ಇತರೆ ನದಿಗಳು ತುಂಬಿ ತುಳುಕುತ್ತಿದ್ದು, ಅಪಾಯದ ಮಟ್ಟ ತಲುಪಿವೆ. ಭದ್ರಾ ಜಲಾಶಯಕ್ಕೆ ಮೂರುವರೆ ಅಡಿ, ಲಿಂಗನಮಕ್ಕಿಗೆ ೭೩ ಸಾವಿರ ಕ್ಯುಸೆಕ್ ನೀರು ಹರಿದುಬಂದಿದೆ.

ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಮುಂದುವರಿದಿದೆ. ಭಾಗಮಂಡಲದಲ್ಲಿ ಕಾವೇರಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಕಾವೇರಿ ಮತ್ತು ಲಕ್ಷ್ಮಣತೀರ್ಥ ನದಿಗಳು ತುಂಬಿ ಹರಿಯುತ್ತಿವೆ. 

ಚಿಕ್ಕಮಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಉಂಟಾಗಿದೆ. ತೀರ್ಥಹಳ್ಳಿ, ಶೃಂಗೇರಿ, ಮಂಗಳೂರು ಮಾರ್ಗದಲ್ಲಿ ಕಿರು ಸೇತುವೆಗಳು ಶಿಥಿಲವಾಗಿರುವುದರಿಂದ ಭಾರೀ ವಾಹನ ಸಂಚಾರವನ್ನು ನಿರ್ಬಂಧ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ  ಸಾಧ್ಯತೆಯಿದ್ದು, ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ನಿರಂತರವಾಗಿ ಮುಂದುವರಿಯಲಿದೆ ಎಂದು ಉತ್ತರ ಕರ್ನಾಟಕ ಹವಾಮಾನ ಮುನ್ಸೂಚನಾ ಕೇಂದ್ರದ ಮುಖ್ಯಸ್ಥ ಆರ್.ಎಚ್.ಪಾಟೀಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com