ನಾಗರೀಕರ ಸುರಕ್ಷತೆಗೆ ರೈಲ್ವೇ ಪೊಲೀಸರಿಂದ ಹೊಸ ವ್ಯವಸ್ಥೆ; ಅಪರಾಧ ನಿಯಂತ್ರಿಸಲು ಪ್ರಯಾಣಿಕರಿಗೆ ವಿಸಿಟಿಂಗ್ ಕಾರ್ಡ್ ವಿತರಣೆ!

ರೈಲುಗಳಲ್ಲಿ ಹಿರಿಯ ನಾಗರೀಕರು ಹಾಗೂ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೇ ಪೊಲೀಸರು ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದ್ದಾರೆ. 
ಪ್ರಯಾಣಿಕರೊಬ್ಬರಿಗೆ ಕಾರ್ಡ್ ವಿತರಿಸುತ್ತಿರುವ ಪೇದೆ
ಪ್ರಯಾಣಿಕರೊಬ್ಬರಿಗೆ ಕಾರ್ಡ್ ವಿತರಿಸುತ್ತಿರುವ ಪೇದೆ
Updated on

ಬೆಂಗಳೂರು; ರೈಲುಗಳಲ್ಲಿ ಹಿರಿಯ ನಾಗರೀಕರು ಹಾಗೂ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೇ ಪೊಲೀಸರು ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದ್ದಾರೆ. 

ರಾಜ್ಯದ ರೈಲು ನಿಲ್ದಾಣಗಳಲ್ಲಿ ನಡೆಯುವ ಅಪರಾಧ ತಗ್ಗಿಸಲು ಹಾಗೂ ಪ್ರಯಾಣಿಕರ ಜೊತೆ ನಿರಂತರ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ರೈಲ್ವೇ ಪೊಲೀಸ್ ಇಲಾಖೆಯು, ತಮ್ಮ ಸಿಬ್ಬಂದಿಗಳಿಗೆ ವಿಸಿಟಿಂಗ್ ಕಾರ್ಡ್ ಮಾಡಿಸಿ, ಅದನ್ನು ಪ್ರಯಾಣಿಕರಿಗೆ ವಿತರಿಸುತ್ತಿದೆ. ಈ ಮೂಲಕ ಕಳ್ಳತನ ಸೇರಿದಂತೆ ಇತರೆ ಅಹಿತಕರ ಘಟನೆಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದೆ. 

ರೈಲ್ವೆ ಇಲಾಖೆಯ ಎಡಿಜಿಪಿ ಭಾಸ್ಕರ್ ರಾವ್ ನೇತೃತ್ವದಲ್ಲಿ ಎಸ್​ಪಿ ಸಿರಿಗೌರಿ ಅವರು, ಪ್ರಾಯೋಗಿಕ ಹಂತವಾಗಿ ಬೆಂಗಳೂರು, ಯಶವಂತಪುರ ಹಾಗೂ ಕಂಟ್ಮೊನೆಂಟ್ ರೈಲ್ವೆಯ ಕೆಲ‌ ಪೊಲೀಸರಿಗೆ ತಮ್ಮ ಹೆಸರು, ಫೋನ್ ನಂಬರ್ ಸಮೇತ ವಿಸಿಟಿಂಗ್ ಕಾರ್ಡ್ ಮಾಡಿಸಲು ಅನುಮತಿ ನೀಡಿದ್ದಾರೆ.

ಈಗಾಗಲೇ ಕಾನ್ಸ್​ಟೇಬಲ್​ಗಳು 'ಸದಾ ನಿಮ್ಮ ಸೇವೆಯಲ್ಲಿ' ಮತ್ತು ಇಂಗ್ಲೀಷ್​ನಲ್ಲಿ 'ಹ್ಯಾಪಿ ಟು ಹೆಲ್ಪ್‌' ಶೀರ್ಷಿಕೆ ಜೊತೆಗೆ ವಿಸಿಟಿಂಗ್ ಕಾರ್ಡ್​ಗಳನ್ನು ಪ್ರಯಾಣಿಕರಿಗೆ ವಿತರಣೆ ಮಾಡುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ‌.

ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ರೈಲ್ವೆ‌‌ ಓಡಾಟ ಹೆಚ್ಚಾಗಿದೆ‌. ರೈಲ್ವೆ ನಿಲ್ದಾಣಗಳ ಮೇಲೆ‌ ಒತ್ತಡ ಸೃಷ್ಟಿಯಾಗಿದೆ. ಪ್ರಯಾಣಿಕರ ಸಂಖ್ಯೆ ಅಧಿಕವಾಗುತ್ತಿದ್ದಂತೆ ರೈಲ್ವೆ ಹಳಿ ಹಾಗೂ ನಿಲ್ದಾಣಗಳಲ್ಲಿ ಕಳ್ಳತನ, ವಂಚನೆ, ಕೊಲೆ ಹಾಗೂ ದರೋಡೆ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ.

ರೈಲ್ವೇ ಪೊಲೀಸರು ಆರಂಭಿಸಿರುವ ಈ ಹೊಸ ವ್ಯವಸ್ಥೆಯು ಪ್ರಯಾಣಿಕರಿಗೆ ಸಹಾಯಕವಾಗಲಿದೆ. ಅಪರಾಧ ಮಾಹಿತಿ ಜೊತೆಗೆ‌‌ ಪ್ರಯಾಣದ ಸಂದರ್ಭಗಳಲ್ಲಿ ಏನಾದರೂ ತೊಂದರೆ ಉಂಟಾದರೆ ವಿಸಿಟಿಂಗ್ ಕಾರ್ಡ್ ನಂಬರ್​ಗೆ ಪ್ರಯಾಣಿಕರು ಕರೆ ಮಾಡಬಹುದಾಗಿದೆ. ಪ್ರಯಾಣಿಕರು ಕರೆ ಮಾಡಿದರೆ ಪೊಲೀಸರು ಕೂಡಲೇ ಇದಕ್ಕೆ ಸ್ಪಂದನೆ ನೀಡಲಿದ್ದಾರೆ. 

ಏನಾದರೂ ವಸ್ತುಗಳು ಕಳವು ಆದರೆ ಅಥವಾ ಗೊಂದಲವಿದ್ದರೂ ಪ್ರಯಾಣಿಕರು ಕರೆ ಮಾಡಬಹುದಾಗಿದೆ. ‌ಈ‌ ಮೂಲಕ ಪ್ರಯಾಣಿಕರಲ್ಲಿ ಮಾನಸಿಕ ಧೈರ್ಯ ತುಂಬುವ ಜೊತೆಗೆ ಹೆಚ್ಚಿನ ಬಾಂಧವ್ಯ ಮೂಡಿಸಲು ಸಹಕಾರಿಯಾಗಲಿದೆ.‌ ಪೊಲೀಸರ ವಿನೂತನ ಯೋಜನೆಗೆ ಪ್ರಯಾಣಿಕರಿಂದ‌ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ದೇಶದಲ್ಲೇ ಮೊದಲ ಉಪಕ್ರಮ ಇದಾಗಿದೆ. ಬೇರೆ ದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಂದ ವ್ಯವಸ್ಥೆಗಲನ್ನು ನೋಡಿದ್ದೆ. ಹೀಗಾಗಿ ನಮ್ಮ ದೇಶದಲ್ಲೂ ಈ ವ್ಯವಸ್ಥೆ ಜಾರಿಗೊಳಿಸಬೇಕೆಂದು ಬಯಸಿದ್ದೆ. ಸೂಕ್ತ ಸಮಯಕ್ಕೆ ಜನರನ್ನು ತಲುಪುವುದರ ಜೊತೆಗೆ ಪೊಲೀಸರಿಗೂ ಒಂದು ಗುರ್ತಿಕೆ ಸಿಕ್ಕಂತಾಗುತ್ತದೆ ಎಂದು ರೈಲ್ವೇ ಪೊಲೀಸ್ ವಿಭಾಗದ ಎಡಿಜಿಪಿ ಹೇಳಿದ್ದಾರೆ. 

ನಮ್ಮಲ್ಲಿ 735 ಮಂದಿ ಪೇದೆ ಹಾಗೂ ಮುಖ್ಯ ಪೇದೆಗಳಿದ್ದಾರೆ. ಬೆಂಗಳೂರು ನಗರ, ಯಶವಂತಪುರ, ಬಂಗಾರಪೇಟೆಯಲ್ಲಿ ಈಗಾಗಲೇ ಪೊಲೀಸರು ಪ್ರಯಾಣಿಕರಿಗೆ ವಿಸಿಟಿಂಗ್ ಕಾರ್ಡ್ ಗಳನ್ನು ವಿತರಿಸಲು ಆರಂಭಿಸಿದ್ದಾರೆ. ಪ್ರತೀಯೊಬ್ಬ ಪೊಲೀಸ್ ಸಿಬ್ಬಂದಿಗೂ 100 ಕಾರ್ಡ್ ಗಳನ್ನು ನೀಡಲಾಗಿದೆ ಎಂದು ಸಿರಿ ಗೌರಿ ಅವರು ಹೇಳಿದ್ದಾರೆ. 

ಕಲಬುರಗಿ ಹಾಗೂ ಹುಬ್ಬಳ್ಳಿಯಲ್ಲಿಯೂ ಶೀಘ್ರದಲ್ಲೇ ಈ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ. ವಿಸಿಟಿಂಗ್ ಕಾರ್ಡ್ ನಲ್ಲಿ ತಮ್ಮ ವೈಯಕ್ತಿಕ ಫೋನ್ ನಂಬರ್ ಹಾಕಿಕೊಳ್ಳುವುದು, ಬಿಡುವ ನಿರ್ಧಾರವನ್ನು ಪೊಲೀಸರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ರೈಲು ನಿಲ್ದಾಣಗಳಲ್ಲಿ ಅಥವಾ ಪ್ರಯಾಣ ಸಂದರ್ಭದಲ್ಲಿ ಅಪರಾಧ ಘಟನೆಗಳು ಸಂಭವಿಸಿದಾಗ ಯಾರನ್ನು ಸಂಪರ್ಕಿಸಬೇಕೆಂಬುದು ಎಷ್ಟೋ ಜನರಿಗೆ ತಿಳಿದಿರುವುದಿಲ್ಲ. ಪೊಲೀಸರ ಈ ವ್ಯವಸ್ಥೆ ಉತ್ತಮವಾಗಿದ ಎಂದು ಪ್ರಯಾಣಿಕರಾದ ಪಿ.ಜಶುವಾ ಎಂಬುವವರು ಹೇಳಿದ್ದಾರೆ. 

ವಿಸಿಟಿಂಗ್ ಕಾರ್ಡ್ ನೀಡುವ ವೇಳೆ ಜನರು ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದರು ಎಂದು ಯಶವಂತಪುರ ರೈಲ್ವೇ ನಿಲ್ದಾಣ ಪೇದೆ ಯು.ವಿನಾಯಕ್ ಎಂಬುವವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com