ಸ್ಮಾರ್ಟ್ ಸಿಟಿ ಕಾಮಗಾರಿಗಳ ವೇಗ ಕುಂಠಿತ: ಮುಖ್ಯಮಂತ್ರಿ ಯಡಿಯೂರಪ್ಪ ಅತೃಪ್ತಿ

ಮುಂಗಾರು ಮಳೆ ಪ್ರಾರಂಭವಾಗಿದ್ದರೂ ಕೂಡ ಬೆಂಗಳೂರು ನಗರದಲ್ಲಿ ಅನುಷ್ಠಾನದಲ್ಲಿರುವ ಸ್ಮಾರ್ಟ್ ಸಿಟಿಯೋಜನೆಯಡಿ ರಸ್ತೆ ಮತ್ತಿತರ ಕಾಮಗಾರಿಗಳ ಪ್ರಗತಿ ಕುಂಠಿತಗೊಂಡಿರುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ಮುಂಗಾರು ಮಳೆ ಪ್ರಾರಂಭವಾಗಿದ್ದರೂ ಕೂಡ ಬೆಂಗಳೂರು ನಗರದಲ್ಲಿ ಅನುಷ್ಠಾನದಲ್ಲಿರುವ ಸ್ಮಾರ್ಟ್ ಸಿಟಿಯೋಜನೆಯಡಿ ರಸ್ತೆ ಮತ್ತಿತರ ಕಾಮಗಾರಿಗಳ ಪ್ರಗತಿ ಕುಂಠಿತಗೊಂಡಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳಡಿ 27 ರಸ್ತೆ ಕಾಮಗಾರಿಗಳು ಪ್ರಸ್ತುತ ಅನುಷ್ಠಾನದಲ್ಲಿದ್ದು, ಎಲ್ಲೆಡೆ ರಸ್ತೆಗಳ ಇಕ್ಕೆಲಗಳಲ್ಲಿ ಮಣ್ಣಿನ ರಾಶಿ ಬಿದ್ದಿರುವುದಲ್ಲದೇ ಕಂದಕಗಳು ಕಣ್ಣಿಗೆ ರಾಚುತ್ತವೆ. ಜನ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಿವೆ. 

ಕಳೆದ ಬಾರಿ ನಾನು ಈ ಕಾಮಗಾರಿಗಳ ಅನುಷ್ಠಾನದ ಪ್ರಗತಿ ಬಗ್ಗೆ ಖುದ್ದು ವೀಕ್ಷಿಸಿ ಮೇ 31 ರೊಳಗೆ ಮುಖ್ಯ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಆದ್ಯತೆ ಪಟ್ಟಿ ನೀಡಿದ್ದೆ. ಆದರೆ ಈ ಕಾಮಗಾರಿಗಳ ಅನುಷ್ಠಾನ ಪೂರ್ಣಗೊಂಡಿಲ್ಲ. ಈಗಾಗಲೇ ಮುಂಗಾರು ಮಳೆ ಪ್ರಾರಂಭವಾಗಿ ಒಂದು ವಾರ ಆಗಿದೆ. ಇನ್ನೆರೆಡು ವಾರಗಳಲ್ಲಿ ಮಳೆ ತೀವ್ರಗೊಳ್ಳಲಿದೆ. ಯಾವಾಗ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೀರಿ ಎಂದು ಬಿಬಿಎಂಪಿ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ರಾಜಭವನ ರಸ್ತೆಯಲ್ಲಿ ಮಿನ್ಸ್ಕ್ ಸ್ಕ್ವೆಯೆರ್, ವಸಂತನಗರದಿಂದ ಬಸವೇಶ್ವರ ರಸ್ತೆವರೆಗೆ, ಬಾಲಬ್ರೂಯಿ ಅತಿಥಿಗೃಹದಿಂದ ಮಾಣಿಕ್ಯವೇಲು ಮ್ಯಾನ್ಷನ್ ವೃತ್ತದವರೆಗೆ ಪ್ರಮುಖ ರಸ್ತೆಗಳಲ್ಲಿ ರಸ್ತೆಯ ಎರಡೂ ಬದಿ ಕಾಮಗಾರಿಗಳು ಅಪೂರ್ಣವಾಗಿ ಉಳಿದಿವೆ. ಬೆರಳಣಿಕೆಯಷ್ಟು ಕಾರ್ಮಿಕರು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೆಂಟ್ರಲ್ ಬಿಸನೆಸ್ ಡಿಸ್ಟ್ರಿಕ್ (ಸಿಬಿಡಿ) ವ್ಯಾಪ್ತಿಯ ಕಾಮಗಾರಿಗಳ ಅಪೂರ್ಣತೆಯಿಂದಾಗಿ ಸಾರ್ವಜನಿಕರು ಮತ್ತು ಗಣ್ಯರ ಸಂಚಾರಕ್ಕೆ ಅಡ್ಡಿಯುಂಟಾಗಿರುವುದನ್ನು ಪ್ರತಿನಿತ್ಯ ಗಮನಿಸುತ್ತಿದ್ದೇನೆ. ಈ ಕಾಮಗಾರಿಗಳನ್ನು ಯಾವಾಗ ಪೂರ್ಣಗೊಳಿಸುತ್ತೀರಿ ಎಂದು ಮುಖ್ಯಮಂತ್ರಿಗಳು ಪ್ರಶ್ನೆ ಮಾಡಿದಾಗ, ಜೂನ್ 30ರೊಳಗೆ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಇಂಜಿನಿಯರ್ ತಿಳಿಸಿದರು.

ಸಿಬಿಡಿ ವ್ಯಾಪ್ತಿಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಧಕ್ಕೆಯುಂಟಾಗಿರುವ ಬಗ್ಗೆ ನಗರ ಪೊಲೀಸ್ ಕಮೀಷನರ್ ಮತ್ತು ಸಂಚಾರ ವಿಭಾಗದ ಜಂಟಿಆಯುಕ್ತರು ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆದು ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ನಿರ್ದಿಷ್ಟ ಸೂಚನೆ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಿದಾಗ ಈ ಭರವಸೆ ದೊರೆಯಿತು. 

ಕಳೆದ ಬಾರಿ ತಾವು ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಅನುಷ್ಠಾನದ ಪರಿಶೀಲನೆ ವೇಳೆಯಲ್ಲಿ ನಿಗದಿಪಡಿಸಿದ ಗಡುವಿನಂತೆ ಕಾರ್ಯನಿರ್ವಹಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಶ್ರೀ ಗೌರವ ಗುಪ್ತಾ ಮತ್ತು ಇತರ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com