ರೋಹಿಣಿ ಸಿಂಧೂರಿಯವರನ್ನು ವಿಶೇಷ ತನಿಖಾಧಿಕಾರಿಯನ್ನಾಗಿ ನೇಮಿಸಿ ಮೈಸೂರಿನ ಭೂಗಳ್ಳತನ ತನಿಖೆ ಮಾಡಿಸಿ: ಹೆಚ್. ವಿಶ್ವನಾಥ್ ಒತ್ತಾಯ

ಸಾಂಸ್ಕೃತಿಕ ಜಿಲ್ಲೆ ಮೈಸೂರಿನಲ್ಲಿ ಕೇಳಿಬರುತ್ತಿರುವ ಸರ್ಕಾರಿ ಜಮೀನಿನ ಅಕ್ರಮ ಕಳ್ಳತನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಹೆಚ್ ವಿಶ್ವನಾಥ್ ಒತ್ತಾಯಿಸಿದ್ದಾರೆ.

Published: 10th June 2021 11:43 AM  |   Last Updated: 10th June 2021 01:05 PM   |  A+A-


H Vishwanath and Rohini Sindhuri(File photo)

ಹೆಚ್ ವಿಶ್ವನಾಥ್ ಮತ್ತು ರೋಹಿಣಿ ಸಿಂಧೂರಿ(ಸಂಗ್ರಹ ಚಿತ್ರ)

Posted By : Sumana Upadhyaya
Source : Online Desk

ಮೈಸೂರು: ಸಾಂಸ್ಕೃತಿಕ ಜಿಲ್ಲೆ ಮೈಸೂರಿನಲ್ಲಿ ಕೇಳಿಬರುತ್ತಿರುವ ಸರ್ಕಾರಿ ಜಮೀನಿನ ಅಕ್ರಮ ಕಳ್ಳತನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಹೆಚ್ ವಿಶ್ವನಾಥ್ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಭೂಗಳ್ಳತನ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ದಾಖಲೆ ಬಿಡುಗಡೆ ಮಾಡಿದ್ದಾರೆ, ಹೀಗಾಗಿ ಅವರನ್ನೇ ವಿಶೇಷಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ತನಿಖೆ ನಡೆಸಬೇಕೆಂದು ಅವರು ಇಂದು ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಒತ್ತಾಯಿಸಿದ್ದಾರೆ.

ಇಂದು ಮೈಸೂರಿನ ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೊನ್ನೆ ನಿರ್ಗಮಿಸಿದ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಮೈಸೂರು ನಗರ ಸುತ್ತಮುತ್ತ ಭೂ ಅಕ್ರಮವನ್ನು ಬಯಲಿಗೆಳೆಯುವ ಕೆಲಸ ಪ್ರಾರಂಭ ಮಾಡಿದ್ದರು. ಅದರಲ್ಲಿ ನಾಲ್ಕು ಆದೇಶಗಳನ್ನು ಮಾಡಿದ್ದರು, ಆ ಆದೇಶದ ಪ್ರತಿಯ ಜೊತೆಗೆ ನನ್ನ ವಿನಂತಿಯನ್ನು ಕೂಡ ಬರೆದು ಜಿಲ್ಲಾಧಿಕಾರಿಗಳಿಗೆ ಇಂದು ಕೊಟ್ಟಿದ್ದೇನೆ ಎಂದರು.

ಅಕ್ರಮ ಭೂ ಹಗರಣ ಬಗ್ಗೆ ದಿಟ್ಟ ಕ್ರಮ ಕೈಗೊಳ್ಳಬೇಕು, ಹಿಂದಿನ ಅಧಿಕಾರಿ ಕೊಟ್ಟ ಆದೇಶಗಳು ಜಾರಿಯಾಗಬೇಕು, ಬರೀ ನಾಲ್ಕು ಪ್ರಕರಣಗಳು ಮಾತ್ರವಲ್ಲ, ಇನ್ನೂ ಹತ್ತಾರು ಇವೆ ಜಿಲ್ಲೆಯಲ್ಲಿ. ಸುಪ್ರೀಂ ಕೋರ್ಟ್ ಆದೇಶ ಪ್ರಕಾರ, ಯಾವುದೇ ಕೆರೆಗಳನ್ನು ಮತ್ತು ಅದರಿಂದ 75 ಮೀಟರ್ ವರೆಗೆ ಒತ್ತುವರಿ ಮಾಡಬಾರದು ಎಂದು ಇದೆ. ಆದರೆ ಮೈಸೂರು ನಗರದಲ್ಲಿ ಕೆರೆ ಒತ್ತುವರಿ ಮಾಡಿ ಸೈಟ್ ಗಳನ್ನು ಮಾಡಲಾಗಿದೆ, ಹೀಗಾಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ವಿರುದ್ಧ ಹೋರಾಟ ಜೊತೆಗೆ ಭೂ ಅಕ್ರಮ ಒತ್ತುವರಿ ಹೋರಾಟ ಕೂಡ ನಿಗದಿತ ಅವಧಿಯೊಳಗೆ ನಡೆಯಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದು ವಿಶ್ವನಾಥ್ ಹೇಳಿದರು.

ನಾಳೆ ನಾನು ಬೆಂಗಳೂರಿಗೆ ಹೋಗುತ್ತಿದ್ದು, ಅಲ್ಲಿ ಮುಖ್ಯ ಕಾರ್ಯದರ್ಶಿಗಳು ಮತ್ತು ಕಂದಾಯ ಅಧಿಕಾರಿಗಳನ್ನು ಭೇಟಿ ಮಾಡಿ ಮೈಸೂರು ಸುತ್ತಮುತ್ತ ಆಗಿರುವ ಭೂ ಹಗರಣಗಳ ಬಗ್ಗೆ ತನಿಖೆ ಮಾಡಲು ಹಿಂದಿನ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನೇ ವಿಶೇಷ ತನಿಖಾಧಿಕಾರಿಯಾಗಿ ನೇಮಿಸಿ ಎಂದು ಒತ್ತಾಯಿಸುತ್ತೇನೆ ಎಂದರು.

ನಾನು ಮೈಸೂರಿನ ಹಿರಿಯ ರಾಜಕಾರಣಿ, ಮೂಲತಃ ಅಡ್ವೊಕೇಟ್, ಇದೇ ಜಿಲ್ಲೆಯವನಾಗಿ ನಾನು ಹೇಳುವುದು ಮೈಸೂರು ಸಾಂಸ್ಕೃತಿಕ, ಪರಂಪರೆ ಇರುವ ಜಿಲ್ಲೆ. ಅಂತಹುದರಲ್ಲಿ ಇಂದು ರಾಜಕಾರಣಿಗಳು ಮೈಸೂರಿನ ಸಾಂಸ್ಕೃತಿಕ ಆಡಳಿತವನ್ನು ಹಾಳು ಮಾಡುತ್ತಿದ್ದಾರೆ. ಕೊರೋನಾ ಓಡಿಸಿ ಎಂದರೆ ಇಲ್ಲಿನ ರಾಜಕಾರಣಿಗಳು ತಮ್ಮ ಸ್ವ ಹಿತಾಸಕ್ತಿಗೆ ಜಿಲ್ಲಾಧಿಕಾರಿಗಳನ್ನೇ ಓಡಿಸಿಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಇಲ್ಲಿ ರಾಜಕಾರಣಿಗಳ ಕಿತಾಪತಿಗೆ ಶಿಲ್ಪಾ ನಾಗ್ ಬಲಿಪಶುವಾದರು. ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ಕಟ್ಟಿಸಿದ್ದಾರೆ, ಇಲ್ಲಿ ಸಾವಿರಾರು ಎಕರೆ ಭೂಮಿ ಉಳ್ಳವರ ಪಾಲಾಗಿದೆ ಎಂದು ಖೇದ ವ್ಯಕ್ತಪಡಿಸಿದರು. 

ರೋಹಿಣಿ ಸಿಂಧೂರಿ ಒಳ್ಳೆಯ ಅಧಿಕಾರಿ: ರೋಹಿಣಿ ಸಿಂಧೂರಿಯವರು ಬಹಳ ಒಳ್ಳೆಯ ಅಧಿಕಾರಿ, ಶಿಲ್ಪಾ ನಾಗ್ ಕೂಡ ಉತ್ತಮ ಆಡಳಿತಗಾರ್ತಿ, ರಾಜಕಾರಣಿಗಳ ಸ್ವಾರ್ಥಕ್ಕೆ ಅಂತವರನ್ನು ಜಿಲ್ಲೆಯಿಂದ ಹೊರಗೆ ಹಾಕಿದ್ದು ಎಷ್ಟು ಸರಿ ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp