ದಿನಕ್ಕೆ 4 ಗಂಟೆ ಮಾತ್ರ ವ್ಯಾಪಾರ: ರಾಜ್ಯಾದ್ಯಂತ 54 ದಿನದಲ್ಲಿ 80 ಲಕ್ಷ ಬಾಕ್ಸ್ ದಾಖಲೆಯ ಮದ್ಯ ಮಾರಾಟ
ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಅತಿ ಹೆಚ್ಚು ಪ್ರಮಾಣದ ಮದ್ಯಮಾರಾಟವಾಗಿದೆ. ಲಾಕ್ ಡೌನ್ ಸಮಯದಲ್ಲಿ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಮಾರಾಟಕ್ಕೆ ಅನುವು ಮಾಡಿಕೊಡಲಾಗಿತ್ತು.
Published: 22nd June 2021 01:27 PM | Last Updated: 22nd June 2021 01:28 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಅತಿ ಹೆಚ್ಚು ಪ್ರಮಾಣದ ಮದ್ಯಮಾರಾಟವಾಗಿದೆ. ಲಾಕ್ ಡೌನ್ ಸಮಯದಲ್ಲಿ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಮಾರಾಟಕ್ಕೆ ಅನುವು ಮಾಡಿಕೊಡಲಾಗಿತ್ತು.
ಈ ವೇಳೆ ಅಬಕಾರಿ ಇಲಾಖೆ ದಾಖಲೆ ಪ್ರಮಾಣದ ಮದ್ಯ ಮಾರಾಟ ಮಾಡಿದೆ. 54 ದಿನಗಳಲ್ಲಿ 80 ಲಕ್ಷ ಬಾಕ್ಸ್ ಮದ್ಯಮಾರಾಟ ಮಾಡಿದೆ. ಕಳೆದ ಏಪ್ರಿಲ್ 1 ರಿಂದ ಜೂನ್ 15ರವರೆಗೆ ಮಾಮೂಲಿ ದಿನಗಳಿಗಿಂತ ಶೇ,10 ರಷ್ಟು ಹೆಚ್ಚು ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ಸಾಮಾನ್ಯ ದಿನಗಳಿಗೆ ಹೋಲಿಸಿದರೇ ಪ್ರಸ್ತುತ ಸರಾಸರಿ ದಿನಕ್ಕೆ 1.7 ಲಕ್ಷ ಪೆಟ್ಟಿಗೆಗಳು (ಇಂಡಿಯನ್ ಮೇಡ್ ಲಿಕ್ಕರ್ ಮತ್ತು ಬಿಯರ್ ಸೇರಿದಂತೆ), ಮಾರಾಟವಾಗುತ್ತಿದೆ. ಐಎಂಎಲ್‌ನ ಒಂದು ಪೆಟ್ಟಿಗೆಯಲ್ಲಿ 8.64 ಲೀಟರ್ ಮದ್ಯವಿರುತ್ತದೆ, ಒಂದು ಬಾಕ್ಸ್ ಬಿಯರ್ 7.8 ಲೀಟರ್ ಹೊಂದಿರುತ್ತದೆ.
ಲಾಕ್ ಡೌನ್ ಅವಧಿಯಲ್ಲಿ 80 ಲಕ್ಷಕ್ಕೂ ಹೆಚ್ಚು ಬಾಕ್ಸ್ ಗಳನ್ನು ಮಾರಾಟ ಮಾಡಿರುವುದಾಗಿ ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲಾಕ್‌ಡೌನ್‌ಗೆ ಮುಂಚೆ ಸಾಮಾನ್ಯ ದಿನಗಳಲ್ಲಿ, ಸರಾಸರಿ ಆದಾಯವು ಸುಮಾರು 65 ಕೋಟಿ ರೂ. ಆಗಿದ್ದರೆ, ಲಾಕ್‌ಡೌನ್ ಅವಧಿಯಲ್ಲಿ ಇದು ದಿನಕ್ಕೆ 60 ಕೋಟಿ ರೂ ಆಗಿತ್ತು.
ಕಳೆದ ವಾರದವರೆಗೆ ಕೇವಲ ನಾಲ್ಕು ಗಂಟೆಗಳ ವ್ಯಾಪಾರಕ್ಕೆ ಅನುಮತಿ ನೀಡಿದ್ದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ, ಅಲ್ಲದೆ, ಯಾವುದೇ ಬಾರ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ಮದ್ಯವನ್ನು ನೀಡದ್ದರಿಂದ ಅಧಿಕ ಪ್ರಮಾಣದಲ್ಲಿ ಮದ್ಯಮಾರಾಟ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.