ಐಎಂಎ ಹಗರಣ: ರೋಷನ್‌ ಬೇಗ್‌ ಆಸ್ತಿ ಜಪ್ತಿಗೆ ಕ್ರಮ ಕೈಗೊಂಡ ಸರ್ಕಾರ

ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಆರ್.ರೋಷನ್ ಬೇಗ್ ಅವರ ಆಸ್ತಿಯನ್ನು ಜಪ್ತಿ ಮಾಡಲು ಕ್ರಮ ಕೈಗೊಂಡಿರುವುದಾಗಿ ಹೈಕೋರ್ಟ್'ಗೆ ರಾಜ್ಯ ಸರ್ಕಾರ ಶುಕ್ರವಾರ ಮಾಹಿತಿ ನೀಡಿದೆ. 
ರೋಷನ್ ಬೇಗ್
ರೋಷನ್ ಬೇಗ್

ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಆರ್.ರೋಷನ್ ಬೇಗ್ ಅವರ ಆಸ್ತಿಯನ್ನು ಜಪ್ತಿ ಮಾಡಲು ಕ್ರಮ ಕೈಗೊಂಡಿರುವುದಾಗಿ ಹೈಕೋರ್ಟ್'ಗೆ ರಾಜ್ಯ ಸರ್ಕಾರ ಶುಕ್ರವಾರ ಮಾಹಿತಿ ನೀಡಿದೆ. 

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಪಾಷಾ ಹಾಗೂ ಇತರರು ಸಲ್ಲಿಸಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದರು. 

ಅರ್ಜಿ ವಿಚಾರಣೆ ವೇಳೆ ಸರ್ಕಾರಿ ವಕೀಲರು ಹಾಜರಾಗಿ, ರೋಷನ್ ಬೇಗ್ ಅವರ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಬೇಗ್ ಅವರ ಆಸ್ತಿಯ ವಿವರಗಳ ಮಾಹಿತಿ ನೀಡುವಂತೆ ಬಿಬಿಎಂಪಿ ಆಯುಕ್ತರು ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಸಕ್ಷಮ ಪ್ರಾಧಿಕಾರದ ಪ್ರಮಾಣ ಪತ್ರದಲ್ಲಿ ರೋಷನ್ ಬೇಗ್ ಅವರ ಅಸ್ತಿಯ ವಿವರಗಳಿವೆ. ಆಸ್ತಿಯ ಬಗ್ಗೆ ಸ್ಪಷ್ಟ ವಿವರ ಲಭ್ಯವಾದ ನಂತರ ಕೆಪಿಐಡಿ ಕಾಯ್ದೆಯಡಿ ಜಪ್ತಿಗೆ ಕ್ರಮ ಜರುಗಿಸಲಾಗುತ್ತದೆ. ಹಾಗೆಯೇ ಆಸ್ತಿ ಪರಭಾರೆಗೂ ಮುನ್ನ ಹೈಕೋರ್ಟ್ ಗಮನಕ್ಕೆ ತರಲಾಗುವುದು ಎಂದು ಹೇಳಿದರು. 

ರಾಜ್ಯ ಸರ್ಕಾರಿ ಶಾಲೆಗೆ ಐಎಂಎ ಕಂಪನಿ ನೀಡಿರುವ ರೂ.10 ಕೋಟಿ ದೇಣಿಗೆ ಹಣವನ್ನು ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಇದೇ ವೇಳೆ ತಿಳಿಸಿತು.

ಅದನ್ನು ಪರಿಗಣಿಸಿದ ನ್ಯಾಯಪೀಠ, ದೇಣಿಗೆ ನೀಡುವ ಸಂಬಂಧ ಸರ್ಕಾರ ಮತ್ತು ಐಎಂಎ ಕಂಪನಿಯ ನಡುವೆ ಆಗಿರುವ ಒಪ್ಪಂದ ಕುರಿತು ಕಾನೂನಾತ್ಮಕ ಅಂಶಗಳನ್ನು ನ್ಯಾಯಾಲಯ ಪರಿಶೀಲನೆ ನಡೆಸಲಿದೆ. ಈ ಬಗ್ಗೆ ಅರ್ಜಿಯ ಎಲ್ಲಾ ಪಕ್ಷಗಾರರ ವಾದ ಆಲಿಸಲಾಗುವುದು. ಠೇವಣಿದಾರರ ಹಣವನ್ನು ದೇಣಿಗೆ ನೀಡಬಹುದೇ ಎಂಬ ಅಂಶದ ಕುರಿತು ವಾದ ಮಂಡಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com