ಜಿಂದಾಲ್​ಗೆ ಭೂಮಿ ಪರಭಾರೆ: ಸಿಎಂ ಯಡಿಯೂರಪ್ಪಗೆ ಲೀಗಲ್ ನೋಟಿಸ್ 

ಜಿಂದಾಲ್ ಸಂಸ್ಥೆಗೆ ಸರ್ಕಾರ ಸುಮಾರು 3,667 ಎಕರೆ ಭೂಮಿಯನ್ನು ಹಸ್ತಾಂತರ ಮಾಡಿರುವ ಕ್ರಮದ ವಿರುದ್ಧ ವಕೀಲ ದೊರೆರಾಜು ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. 
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ಜಿಂದಾಲ್ ಸಂಸ್ಥೆಗೆ ಸರ್ಕಾರ ಸುಮಾರು 3,667 ಎಕರೆ ಭೂಮಿಯನ್ನು ಹಸ್ತಾಂತರ ಮಾಡಿರುವ ಕ್ರಮದ ವಿರುದ್ಧ ವಕೀಲ ದೊರೆರಾಜು ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. 

ಸರ್ಕಾರಿ ಜಮೀನನ್ನು ಖಾಸಗಿ ಸಂಸ್ಥೆಗೆ ನೀಡುವ ವಿಚಾರ ಸಂಬಂಧ ಸುದೀರ್ಘ ಚರ್ಚೆ ನಡೆಸದೆ ತರಾತುರಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು, ಭೂಮಿ ಹಸ್ತಾಂತರಿಸಿರುವುದು ಕಾನೂನು ಬಾಹಿರವಾಗಿದೆ. ಅಲ್ಲದೆ, ಜಿಂದಾಲ್ ಸಂಸ್ಥೆ ಕಾನೂನುಬಾಹಿರ ಚಟುವಟಿಕೆ ನಡೆಸಿದೆ ಎಂದು ಲೋಕಾಯುಕ್ತ ನೀಡಿರುವ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಜಿಂದಾಲ್ ಸಂಸ್ಥೆ ಈ ಹಿಂದೆ ಸೌತ್ ವೆಸ್ಟ್ ಕಂಪನಿ ಮೂಲಕ ನಡೆಸಿದ ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ ರೂ.1078 ಕೋಟಿ ರೂಪಾಯಿ ನಷ್ಟವಾಗಿರುವ ಬಗ್ಗೆ ಲೋಕಾಯುುಕ್ತ ವರದಿ ನೀಡಿದೆ. 

ಹಾಗೆಯೇ ಈ ಸಂಬಂಧ ಹೈಕೋರ್ಟ್, ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಕೇಸ್​ಗಳು ವಿಚಾರಣೆ ಹಂತದಲ್ಲಿವೆ ಎಂದು ತಿಳಿಸಿದೆ. 

ಜಿಂದಾಲ್ ಸಂಸ್ಥೆಗೆ ಸರ್ಕಾರಿ ಭೂಮಿ ನೀಡುವುದರಿಂದ ಪರಿಸರಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಲಿದೆ. ಅತ್ಯಂತ ಹೆಚ್ಚು ಖನಿಜಾಂಶವುಳ್ಳ ಜಾಗದಲ್ಲಿ ಪ್ರತಿ ಎಕರೆಗೆ ಕೇವಲ ರೂ. 1,22,195 ನಿಗದಿಪಡಿಸಿದ್ದು, ಸರ್ಕಾರಕ್ಕೆ ದೊಡ್ಡ ನಷ್ಟವಾಗಿದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ. 

ಹಾಗೆಯೇ, ಬಿ ಎಸ್ ಯಡಿಯೂರಪ್ಪ ಅವರು ಪ್ರತಿಪಕ್ಷ ನಾಯಕರಾಗಿದ್ದ ವೇಳೆ ಜಿಂದಾಲ್​ಗೆ ಭೂಮಿ ಮಂಜೂರು ಮಾಡುವುದನ್ನು ವಿರೋಧಿಸಿ, ಇದೀಗ ನೀಡಿರುವುದು ಅಚ್ಚರಿ ತಂದಿದೆ ಎಂದು ಉಲ್ಲೇಖಿಸಲಾಗಿದೆ.

ಆಡಳಿತ ಪಕ್ಷದ ಮುಖ್ಯ ಸಚೇತಕ ಸುನೀಲ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿ, ಈ ಹಿಂದೆ ನಾವು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೆವು. ಆದರೆ, ನಮ್ಮ ನಿಲುವು ಹೇಗೆ ಬದಲಾಯಿತು ಎಂಬುದು ನನಗೂ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ. 

ಪಕ್ಷದ ವೇದಿಕೆಯಲ್ಲಿ ಅಥವಾ ಶಾಸಕಾಂಗ ಪಕ್ಷದ ವೇದಿಕೆಯಲ್ಲಿ ಯಾರೂ ಈ ಬಗ್ಗೆ ಚರ್ಚಿಸಿಲ್ಲ. ಭೂಮಿ ಮಾರಾಟ ಮಾಡಬಾರದು ಎಂಬ ನನ್ನ ಅಭಿಪ್ರಾಯ. ಈ ಹಿಂದೆ ಈ  ಮಾರಾಟವನ್ನು ವಿರೋಧಿಸಿದ ನಮ್ಮ ಪಕ್ಷವು ಈಗ ತನ್ನ ನಿಲುವನ್ನು ಹೇಗೆ ಬದಲಾಯಿಸಿದೆ ಎಂಬುದು ನನಗೂ ಕುತೂಹಲ ಕೆರಳಿಸಿದೆ. ಈ ಭೂಮಿಯ ಬೆಲೆ ರೂ.4,000 ಕೋಟಿಯಾಗಿದೆ ಎಂದು ತಜ್ಞರೇ ಹೇಳಿದ್ದಾರೆ. ಆದರೆ ಸರ್ಕಾರ ಕೇವಲ ರೂ.44 ಕೋಟಿ ರೂ.ಗಳಿಗೆ ಮಾರಾಟ ಮಾಡುತ್ತಿದೆ. ಮಾರುಕಟ್ಟೆ ಮೌಲ್ಯದ ನೂರನೇ ಒಂದು ಭಾಗಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಈ ನಡುವೆ ಸರ್ಕಾರದ ನಿರ್ಧಾರದ ಕುರಿರು ಶಾಸಕ ಉದಯ್ ಗರುಡಾಚಾರ್, ಪೂರ್ಣಿಮ ಕೃಷ್ಣಪ್ಪ, ಅರವಿಂದ ಬೆಲ್ಲದ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇಂದ್ರೀಯ ನಾಯಕತ್ವಕ್ಕೆ ಮೂರು ವಾರಗಳ ಹಿಂದೆಯೇ ಪತ್ರ ಬರೆದಿದ್ದು, ಬೇಸರ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. 

ಪತ್ರ ಬರೆದಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗರಂ ಆಗಿದ್ದು, ಈ ಕುರಿತು ಸ್ಪಷ್ಟನೆ ನೀಡುವಂತೆ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಅವರಿಗೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದು, ಇದಕ್ಕೆ ಗರುಡಾಚಾರ್ ಅವರೂ ಪ್ರತಿಕ್ರಿಯೆ ನೀಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ರಾಜ್ಯಕ್ಕೆ ಸಂಬಂಧಪಟ್ಟಂತಹ ಯಾವುದಾದರೂ ವ್ಯಕ್ತಿಗೆ ನೀಡಿದ್ದರೆ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ ಎಂದು ಗರುಡಾಚಾರ್ ಅವರು ಹೇಳಿದ್ದು, ಜಿಂದಾಲ್ ಸಂಸ್ಥೆ ರಾಜ್ಯದೊಂದಿಗೆ ಅತ್ಯುತ್ತಮವಾದ ಒಪ್ಪಂದ ಮಾಡಿಕೊಂಡಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com