ಕೋವಿಡ್ ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟ: ರಾಜ್ಯ ಸರ್ಕಾರ 1,250 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಣೆ!

ಲಾಕ್ ಡೌನ್ ನಿಂದ ಹಲವು ಅಸಂಘಟಿತ ವಲಯಗಳಿಗೆ, ರೈತರಿಗೆ, ದಿನಗೂಲಿ ನೌಕರರಿಗೆ, ಬಡವರು-ನಿರ್ಗತಿಕರಿಗೆ ತೀವ್ರ ಸಂಕಷ್ಟವಾಗಿರುವ ಹಿನ್ನೆಲೆಯಲ್ಲಿ ಕರ್ನಟಕ ಸರ್ಕಾರ 1,250 ಕೋಟಿ ರೂ.ಗೂ ಅಧಿಕ ವಿಶೇಷ ಪರಿಹಾರ ಪ್ಯಾಕೇಜ್ ನ್ನು ವಿವಿಧ ವರ್ಗಗಳ ಹಿತರಕ್ಷಣೆಗೆ ಬಿಡುಗಡೆ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಕೊರೋನಾ ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗಿತ್ತು. ಈ ಲಾಕ್ ಡೌನ್ ನಿಂದ ಹಲವು ಅಸಂಘಟಿತ ವಲಯಗಳಿಗೆ, ರೈತರಿಗೆ, ದಿನಗೂಲಿ ನೌಕರರಿಗೆ, ಬಡವರು-ನಿರ್ಗತಿಕರಿಗೆ ತೀವ್ರ ಸಂಕಷ್ಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಸುಮಾರು 1,250 ಕೋಟಿ ರೂಪಾಯಿಗೂ ಅಧಿಕ ವಿಶೇಷ ಪರಿಹಾರ ಪ್ಯಾಕೇಜ್ ನ್ನು ವಿವಿಧ ವರ್ಗಗಳ ಹಿತರಕ್ಷಣೆಗೆ ಬಿಡುಗಡೆ ಮಾಡಿದೆ.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಇಂದು ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಸಭೆ ನಡೆಸಿ ಚರ್ಚೆ ಮಾಡಿ ತೆಗೆದುಕೊಂಡ ತೀರ್ಮಾನಗಳು, ಪರಿಹಾರಗಳನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರಕಟಿಸಿದರು.

ಸುದ್ದಿಗೋಷ್ಠಿಯಲ್ಲಿ  ಅವರು ಹೇಳಿದ್ದು: ಕೊರೋನಾ ಸೋಂಕಿನ ತೀವ್ರವಾದ ಎರಡನೇ ಅಲೆಯಿಂದ ತಪ್ಪಿಸಿಕೊಳ್ಳಲು ಜಾರಿ ಮಾಡಿರುವ ಲಾಕ್ ಡೌನ್ ಮೇ 24ರವರೆಗೆ ಜಾರಿಯಲ್ಲಿದ್ದು, ರಾಜ್ಯದ ಜನತೆಯ ಆರೋಗ್ಯ ಹಿತದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಂಡೆವು. ಈ ನಿರ್ಬಂಧದಿಂದ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು ಕ್ಷೀಣಿಸಿ ಸಮಾಜದ ಹಲವು ವರ್ಗಗಳ ಜನರ ಬದುಕಿನ ಮೇಲೆ ತೀವ್ರ ಹೊಡೆತ ಬಿದ್ದಿರುವ ಬಗ್ಗೆ ಸರ್ಕಾರಕ್ಕೆ ಅರಿವಿದೆ, ಸರ್ಕಾರ ಯಾವತ್ತಿಗೂ ಜನರ ಪರವಾಗಿರುತ್ತದೆ ಎಂದು ಆಶ್ವಾಸನೆ ನೀಡುತ್ತೇನೆ ಎಂದರು.

ಮುಖ್ಯಮಂತ್ರಿಗಳು ಇಂದು ಪ್ರಕಟಿಸಿದ ಪರಿಹಾರ ಪ್ಯಾಕೇಜ್ ನಲ್ಲಿ ಯಾರ್ಯಾರಿಗೆ ಎಷ್ಟೆಷ್ಟು?: 1,250 ಕೋಟಿಗೂ ಹೆಚ್ಚು ವಿಶೇಷ ಆರ್ಥಿಕ ಪ್ಯಾಕೇಜ್ ನಲ್ಲಿ ಸರ್ಕಾರದಿಂದ ಹೊಸ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದು, ರಾಜ್ಯದ ಅನೇಕ ಜಿಲ್ಲೆಗಳಲ್ಲಿನ ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಹೂವು ಹಾನಿಗೆ 10 ಸಾವಿರದಂತೆ ಸಹಾಯಧನ-ಇದರಿಂದ ಸುಮಾರು 20 ಸಾವಿರ ರೈತರಿಗೆ ಇದರಿಂದ ಸಹಾಯ-12.73 ಕೋಟಿ ರೂ ಇದರಿಂದ ಸರ್ಕಾರಕ್ಕೆ ಖರ್ಚು.

-ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಉಂಟಾಗಿರುವ ನಷ್ಟಕ್ಕೆ ಕನಿಷ್ಠ 1 ಹೆಕ್ಟೇರ್ ನಿಂದ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂಪಾಯಿಗಳಂತೆ ಧನಸಹಾಯ, ಇದರಿಂದ 60ರಿಂದ 70 ಸಾವಿರ ರೈತರಿಗೆ ಅನುಕೂಲ-70 ಕೋಟಿ ರೂ ಖರ್ಚು.

-ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ, ಲೈಸೆನ್ಸ್ ಹೊಂದಿರುವವರಿಗೆ ನೋಂದಣಿ ಮಾಡಿಸಿದ ಪ್ರತಿಯೊಬ್ಬ ಚಾಲಕನಿಗೆ ತಲಾ 3 ಸಾವಿರ ರೂಪಾಯಿಗಳಂತೆ ಸರ್ಕಾರಕ್ಕೆ 65 ಕೋಟಿ ರೂ.ಖರ್ಚು.

-ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರದಂತೆ ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಕೊಡಲು ತೀರ್ಮಾನ ಇದಕ್ಕೆ 494 ಕೋಟಿ ರೂ ಖರ್ಚು.

-ಅಸಂಘಟಿತ ವಲಯ ಕಾರ್ಮಿಕರಿಗೆ ತಲಾ 2 ಸಾವಿರ ರೂಪಾಯಿಗಳಂತೆ 3 ಲಕ್ಷದ 5 ಸಾವಿರ ಜನಕ್ಕೆ 61 ಕೋಟಿ ರೂಪಾಯಿ ಖರ್ಚು ಮಾಡಲು ಸರ್ಕಾರ ತೀರ್ಮಾನಯ

-ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ತೊಂದರೆಯಲ್ಲಿದ್ದಾರೆ ಎಂಬ ಕಾರಣಕ್ಕೆ ತಲಾ 2 ಸಾವಿರ ರೂಪಾಯಿಗಳಂತೆ 2 ಲಕ್ಷದ 20 ಸಾವಿರ ಜನರಿಗೆ 45 ಕೋಟಿ ರೂಪಾಯಿ ಖರ್ಚಿನಂತೆ ನೀಡಲಿದ್ದೇವೆ.

-ಕಲಾವಿದರು, ಕಲಾವಿದರ ತಂಡಗಳಿಗೆ ತಲಾ 3 ಸಾವಿರ ರೂಪಾಯಿಗಳಂತೆ 16 ಸಾವಿರ ಜನಕ್ಕೆ ಸರ್ಕಾರ ಧನಸಹಾಯ ನೀಡಲಿದ್ದು 4 ಕೋಟಿ 85 ಲಕ್ಷ ಸರ್ಕಾರ ವಿನಿಯೋಗಿಸಲಿದೆ.

-ರೈತರು, ಸ್ವಸಹಾಯ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕುಗಳು, ಭೂ ಅಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದಿರುವ ರೈತರ ಸಣ್ಣ ಮತ್ತು ಮಧ್ಯಮ ಗಾತ್ರದ ಸಾಲ ಮರುಪಾವತಿ ದಿನಾಂಕ 1.5.2020ರಿಂದ 31.7.2021ರವರೆಗೆ ವಿಸ್ತರಣೆ, 4.25 ಲಕ್ಷ ಜನರಿಗೆ ಇದರಿಂದ ಅನುಕೂಲ, ಸುಮಾರು 135 ಕೋಟಿ ರೂ ಖರ್ಚು

-ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಮೇ ಮತ್ತು ಜೂನ್ ತಿಂಗಳಿಗೆ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡು ಹೊಂದಿರುವವರಿಗೆ 5 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದ್ದು, ರಾಜ್ಯದ 30 ಲಕ್ಷ ಜನರಿಗೆ ಹೆಚ್ಚುವರಿಯಾಗಿ ಈ ಯೋಜನೆ ನೀಡಲಾಗಿದ್ದು ಇದಕ್ಕಾಗಿ ಸರ್ಕಾರ 180 ಕೋಟಿ ಖರ್ಚು.

-ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಜನರಿಗೆ ಪಡಿತರ ಚೀಟಿಯನ್ನು ವಿತರಿಸದೇ ಇದ್ದಲ್ಲಿ ಅಂತಹವರಿಗೂ ಸಹ ಮೇ ಮತ್ತು ಜೂನ್ ತಿಂಗಳಿಗೆ ಪ್ರತಿ ಬಿ.ಪಿ.ಎಲ್. ಅರ್ಜಿದಾರರಿಗೆ ಉಚಿತವಾಗಿ 10 ಕೆ.ಜಿ. ಆಹಾರಧಾನ್ಯ ಹಾಗೂ ಎ.ಪಿ.ಎಲ್. ಅರ್ಜಿದಾರರಿಗೆ ಪ್ರತಿ ಕೆ.ಜಿ.ಗೆ 15 ರೂಪಾಯಿಗಳಂತೆ 10 ಕೆ.ಜಿ. ಆಹಾರಧಾನ್ಯವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದರಿಂದ ಒಟ್ಟು 3.10 ಲಕ್ಷ ಅರ್ಜಿದಾರರಿಗೆ ಸಹಾಯವಾಗಲಿದ್ದು, ಇದರಿಂದ ಒಟ್ಟು 3,07 ಲಕ್ಷ ಬಿಪಿಎಲ್‌ದಾರರು ಹಾಗೂ 2436 ಎ.ಪಿ.ಎಲ್‌ದಾರರಿಗೆ ಸಹಾಯವಾಗಲಿದೆ. ಇದಕ್ಕಾಗಿ 24 ಕೋಟಿ ನಿಯೋಜಿಸಲಾಗಿದೆ.

-ನಗರ ಪ್ರದೇಶಗಳ ಕಾರ್ಮಿಕರು ಮತ್ತು ಬಡವರು ಆಹಾರವಿಲ್ಲದೆ ಬಳಲಬಾರದು ಎಂದು ಇಂದಿರಾ ಕ್ಯಾಂಟೀನ್ ಮೂಲಕ ಸರ್ಕಾರ ಉಚಿತವಾಗಿ ಊಟದ ವ್ಯವಸ್ಥೆ ಮಾಡಿದ್ದು ನಗರ ಪ್ರದೇಶಗಳಲ್ಲಿ 6 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಸಹಾಯವಾಗುತ್ತಿದೆ.ಸುಮಾರು 25 ಕೋಟಿ ರೂ ಖರ್ಚಾಗುತ್ತದೆ.

-ಕೋವಿಡ್ ಸೋಂಕಿತರಿಗೆ ಸರ್ಕಾರ ನಿಯೋಜಿತ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೋವಿಡ್ ಒಂದನೇ ಅಲೆಯ ನಂತರ ಇದುವರೆಗೆ 2.6 ಲಕ್ಷ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದ್ದು, ಸುಮಾರು 956 ಕೋಟಿಗೂ ಹೆಚ್ಚು ಖರ್ಚು ಸರ್ಕಾರಕ್ಕಾಗಿದೆ.

-18ರಿಂದ 60 ವರ್ಷದವರೆಗಿನವರಿಗೆ ಉಚಿತವಾಗಿ ಲಸಿಕೆ ನೀಡಲು ನಿರ್ಧರಿಸಿದ್ದು, ಈಗಾಗಲೇ 3 ಕೋಟಿ ಡೋಸ್ ತರಿಸಲಾಗಿದೆ ಇದಕ್ಕೆ 1 ಸಾವಿರ ಕೋಟಿ ಭರಿಸಲಾಗಿದೆ.

-ಕೋವಿಡ್ ನಿರ್ವಹಣೆಗಾಗಿ ಹಣವನ್ನು ಪ್ರತಿ ಗ್ರಾಮ ಪಂಚಾಯತಿಗಳಿಗೆ 50 ಸಾವಿರದಂತೆ ಮುಂಗಡವಾಗಿ ನೀಡಲಾಗುತ್ತಿದ್ದು, ಇದರಿಂದ 6 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಉಪಯೋಗ.

-ಕೋವಿಡ್ ರೋಗಿಗಳಿಗೆ ಅನುಕೂಲವಾಗಲು 2 ಸಾವಿರಕ್ಕೂ ಅಧಿಕ ವೈದ್ಯರನ್ನು 3 ದಿನಗಳ ಒಳಗಾಗಿ ನೇಮಕ ಮಾಡಲು ತೀರ್ಮಾನಿಸಿದ್ದೇವೆ.

-ವಿದ್ಯುತ್ ಲೈನ್ ಮೆನ್ ಗಳು, ಶಿಕ್ಷಕರು, ಗ್ಯಾಸ್ ಸಿಲಿಂಡರ್ ವಿತರಣೆದಾರರು ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಆದ್ಯತೆ ಮೇರೆಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳುತ್ತೇವೆ.

-ಗ್ರಾಮ ಪಂಚಾಯತ್ ಮಟ್ಟದಲ್ಲಿ 10 ಕ್ಕೂ ಹೆಚ್ಚು ಕೋವಿಡ್ ರೋಗಿಗಳಿದ್ದರೆ ಅಲ್ಲಿ ಪರಾಮರ್ಶಿಸಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಮುಖ್ಯಸ್ಥರ ಜೊತೆ ವಿಡಿಯೊ ಸಂವಾದ ಮಾಡಿ ಜಾಗೃತಿ ಮೂಡಿಸುವ ಪ್ರಯತ್ನ
ಕೋವಿಡ್ ಪರಿಣಾಕಾರಿ ನಿರ್ವಹಣೆಗೆ ಆಸ್ಪತ್ರೆಗಳ ಸಂದರ್ಶನ ಬಲಪಡಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com