ಮೈಸೂರು ರಸ್ತೆ - ಕೆಂಗೇರಿ ಮಾರ್ಗದಲ್ಲಿ ನಮ್ಮ ಮೆಟ್ರೊ ರೈಲು ಸೇವೆ ಜುಲೈ ತಿಂಗಳಲ್ಲಿ ಆರಂಭ
ಬಹುದಿನಗಳ ಜನರ ಬೇಡಿಕೆ ನನಸಾಗುವ ಕಾಲ ಬಂದಿದೆ. ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ನಮ್ಮ ಮೆಟ್ರೋ ವಿಸ್ತರಿತ ಮಾರ್ಗದಲ್ಲಿ ಶೀಘ್ರವೇ ಮೆಟ್ರೋ ಸಂಚರಿಸಲಿದೆ
Published: 21st May 2021 08:07 AM | Last Updated: 21st May 2021 12:57 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬಹುದಿನಗಳ ಜನರ ಬೇಡಿಕೆ ನನಸಾಗುವ ಕಾಲ ಬಂದಿದೆ. ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ನಮ್ಮ ಮೆಟ್ರೋ ವಿಸ್ತರಿತ ಮಾರ್ಗದಲ್ಲಿ ಶೀಘ್ರವೇ ಮೆಟ್ರೋ ಸಂಚರಿಸಲಿದೆ.
ನಮ್ಮ ಮೆಟ್ರೊ ದ ಮೈಸೂರು ರಸ್ತೆ ವಿಸ್ತರಿತ ಮಾರ್ಗವಾದ ಕೆಂಗೇರಿಯವರೆಗೆ ಜುಲೈನಿಂದ ವಾಣಿಜ್ಯ ಸಂಚಾರ ಆರಂಭವಾಗಲಿದೆ. 7.53 ಕಿ.ಮೀ. ಉದ್ದದ ಈ ವಿಸ್ತರಿತ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಆರಂಭಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ ಸಿಎಲ್) ಸಜ್ಜಾಗಿದೆ.
ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ನಿಲ್ದಾಣ ಮತ್ತು ಕೆಂಗೇರಿಯಲ್ಲಿ ಮೆಟ್ರೊ ನಿಲ್ದಾಣಗಳು ನಿರ್ಮಾಣವಾಗಿವೆ. ಸಿವಿಲ್ ಕಾಮಗಾರಿ ಮುಗಿದಿದ್ದು, ನಿಲ್ದಾಣಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ ಹಾಗೂ ಕೆಂಗೇರಿ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಹೇಳಿದ್ದಾರೆ.
ಈ ವಿಸ್ತರಿತ ಮಾರ್ಗದಲ್ಲಿ ದಿನಕ್ಕೆ 75 ಸಾವಿರ ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆ ಇದೆ ಎಂದು ನಿಗಮ ಹೇಳಿದೆ. ಏ.3ರಿಂದ ಈ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಆರಂಭಿಸಲಾಗಿತ್ತು. ಮೆಟ್ರೋ ರೈಲು ಮಾರ್ಗ ಅಥವಾ ನಿಲ್ದಾಣದ ಕೆಳಗೆ ಮಳೆಗಾಲದ ಸಮಯದಲ್ಲಿ ನೀರು ಸೋರಿಕೆ ಆಗುವುದನ್ನು ತಡೆಗಟ್ಟಲು ವಾಟರ್ ಪ್ರೂಫಿಂಗ್ ಕೆಲಸಕ್ಕೆ ಟೆಂಡರ್ ಕರೆಯಲಾಗಿದೆ. ಚಿಕ್ಕಪೇಟೆ ಮತ್ತು ಕೆಆರ್ ಮಾರ್ಕೆಟ್ ಸ್ಟೇಷನ್‌ಗಳಲ್ಲಿ 71 ಲಕ್ಷ ರೂ. ಮೌಲ್ಯದ ವಾಟರ್ ಪ್ರೂಫಿಂಗ್ ಕೆಲಸ ನಡೆಯಲಿದೆ.
ಒಟ್ಟು ಬಿಎಂಆರ್ ಸಿಎಲ್ ನಲ್ಲಿ 8 ಸಾವಿರ ಸಿಬ್ಬಂದಿಯಿದ್ದು ಕೇವಲ 3,500 ಮಂದಿ ಮಾತ್ರ ಕೆಲಸಕ್ಕೆ ಹಾಜರಾಗುತ್ತಿದ್ದಾರೆ, ಕೋವಿಡ್ ಭಯದಿಂದಾಗಿ ತಮ್ಮ ಜೀವವನ್ನು ಅಪಾಯಕ್ಕೊಡ್ಡಲು ಅವರು ಸಿದ್ಧರಿಲ್ಲ ಎಂದು ರಾಕೇಶ್ ಸಿಂಗ್ ತಿಳಿಸಿದ್ದಾರೆ.
ಐದು ನಿಲ್ದಾಣಗಳಲ್ಲಿ ಸುಮಾರು 90 ರಿಂದ 95 ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದರೆ, ಒಂದು ನಿಲ್ದಾಣದಲ್ಲಿ 75% ಕಾಮಗಾರಿ ಪೂರ್ಣಗೊಂಡಿದೆ. ಜೂನ್ 15 ರಿಂದ 20 ರ ನಡುವೆ ಉಳಿದ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ ಎಂದು ವಿವರಿಸಿದ್ದಾರೆ.
ನಂತರ ನಾವು ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಹೇಳಿದ ಅವರು, ಇತ್ತೀಚೆಗೆ ಬಿಎಂಆರ್‌ಸಿಎಲ್ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿದ್ದು, ಈ 100 ಹಾಸಿಗೆಗಳ ಆಸ್ಪತ್ರೆಯಲ್ಲಿ ಈವರೆಗೆ 80 ಜನರನ್ನು ದಾಖಲಿಸಲಾಗಿದೆ. ಅವರಲ್ಲಿ 18 ಜನರು ಡಿಸ್ಚಾರ್ಜ್ ಮಾಡಲಾಗಿದೆ. ಉಪನಗರ ರೈಲು ಯೋಜನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಈ ಕೇಂದ್ರವು ಮುಕ್ತವಾಗಿದೆ ಎಂದು ರಾಕೇಶ್ ಸಿಂಗ್ ಹೇಳಿದರು.