ಪುನೀತ್​ ಪುಣ್ಯ ಸ್ಮರಣೆ: ಸಮಾಧಿ ಬಳಿ ಕುಟುಂಬದವರಿಂದ 11ನೇ ದಿನದ ಪೂಜೆ

ಕೋಟ್ಯಂತರ ಅಭಿಮಾನಿಗಳ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ 11 ದಿನ ಕಳೆದಿದೆ. ಈ ಹಿನ್ನೆಲೆಯಲ್ಲಿ ಇಂದು (ನ.8) ಅವರ ಪುಣ್ಯ ಸ್ಮರಣೆ ಕಾರ್ಯ ನಡೆಯುತ್ತಿದೆ.
ನಟ ಪುನೀತ್ ರಾಜ್ ಕುಮಾರ್ ಸಮಾಧಿ
ನಟ ಪುನೀತ್ ರಾಜ್ ಕುಮಾರ್ ಸಮಾಧಿ

ಬೆಂಗಳೂರು: ಕೋಟ್ಯಂತರ ಅಭಿಮಾನಿಗಳ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ 11 ದಿನ ಕಳೆದಿದೆ. ಈ ಹಿನ್ನೆಲೆಯಲ್ಲಿ ಇಂದು (ನ.8) ಅವರ ಪುಣ್ಯ ಸ್ಮರಣೆ ಕಾರ್ಯ ನಡೆಯುತ್ತಿದೆ.

11ನೇ ದಿನದ ಪೂಜೆಯಲ್ಲಿ ಅಪ್ಪು ಕುಟುಂಬದವರು ಭಾಗಿ ಆಗಿದ್ದಾರೆ. ಭಾನುವಾರ (ನ.7) ರಾತ್ರಿಯಿಂದಲೇ ಈ ಕಾರ್ಯಕ್ಕೆ ಸಕಲ ಸಿದ್ಧತೆ ಶುರುವಾಗಿತ್ತು. ಇಂದು ಬೆಳಗ್ಗೆಯೇ ಸದಾಶಿವನಗರದಲ್ಲಿರುವ ಪುನೀತ್​ ರಾಜ್​ಕುಮಾರ್​ ಅವರ ನಿವಾಸದಲ್ಲಿ ಪೂಜಾ ಕಾರ್ಯಗಳು ಆರಂಭ ಆಗಿವೆ.

ಬೆಳಗ್ಗೆ 10 ಗಂಟೆ ಸುಮಾರಿಗೆ ಅಪ್ಪು ಪತ್ನಿ ಅಶ್ವಿನಿ, ಮಕ್ಕಳಾದ ಧ್ರುತಿ, ವಂದಿತಾ, ಸಹೋದರರಾದ ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್​ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಪುನೀತ್​ ಸಮಾಧಿ ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಲಿದ್ದಾರೆ.

ಚಿಕ್ಕಪ್ಪನ ಪುಣ್ಯ ತಿಥಿ ಕಾರ್ಯ ನೆರವೇರಿಸುವ ಮೂಲಕ ವಿನಯ್ ರಾಜ್ ಕುಮಾರ್ ಕೇಶಮುಂಡನ ಮಾಡಿಸಿಕೊಂಡು ಅಗಲಿದ ಅಪ್ಪುಗೆ ಪಿಂಡ ಪ್ರದಾನ ಮಾಡಲಿದ್ದಾರೆ.

ಬೆಳಗ್ಗೆ 11 ಗಂಟೆ ನಂತರ ಪುಣ್ಯತಿಥಿ ಕಾರ್ಯ ಜರುಗಲಿದ್ದು. ಕುಟುಂಬಸ್ಥರು, ಹತ್ತಿರದ ಸಂಬಂಧಿಗಳು, ಚಿತ್ರರಂಗದ ಪ್ರಮುಖರು, ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.

12 ಗಂಟೆವರೆಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ
ಪ್ರತಿದಿನ ಅಪಾರ ಸಂಖ್ಯೆಯ ಅಭಿಮಾನಿಗಳು ಅಪ್ಪು ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ಜನರು ಕಿಲೋ ಮೀಟರ್​ಗಟ್ಟಲೆ ಉದ್ದದ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯ ದಿನವೂ ಕಂಡು ಬರುತ್ತಿದೆ.

ಇಂದು 11ನೇ ದಿನದ ಕಾರ್ಯವಾದ್ದರಿಂದ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬರುವ ಸಾಧ್ಯತೆ ಇದೆ. ಆದರೆ ಮಧ್ಯಾಹ್ನ 12 ಗಂಟೆಯವರೆಗೆ ಕಂಠೀರವ ಸ್ಟುಡಿಯೋ ಆವರಣದೊಳಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. 12 ಗಂಟೆ ಬಳಿಕ ಅಪ್ಪು ಸಮಾಧಿ ದರ್ಶನ ಮಾಡಲು ಅಭಿಮಾನಿಗಳಿಗೆ ಅವಕಾಶ ಸಿಗಲಿದೆ. ಮಂಗಳವಾರ (ನ.9) ಅರಮನೆ ಮೈದಾನದಲ್ಲಿ ಅನ್ನ ಸಂತರ್ಪಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com