ಒನಕೆ ಓಬವ್ವ ಜಯಂತಿ: ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಶುಭಾಶಯ; ನೀತಿ ಸಂಹಿತೆ ಹಿನ್ನೆಲೆ ಆಚರಣೆ ಮುಂದಕ್ಕೆ

ನವೆಂಬರ್​ 11ರಂದು ವೀರ ವನಿತೆ ಒನಕೆ ಓಬವ್ವ ಜಯಂತಿಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಒನಕೆ ಓಬವ್ವರನ್ನು ನೆನೆದು ಜಯಂತಿಯ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನವೆಂಬರ್​ 11ರಂದು ವೀರ ವನಿತೆ ಒನಕೆ ಓಬವ್ವ ಜಯಂತಿಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಒನಕೆ ಓಬವ್ವರನ್ನು ನೆನೆದು ಜಯಂತಿಯ ಶುಭಾಶಯಗಳನ್ನು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಬೊಮ್ಮಾಯಿಯವರು, ನಾಡಿನ ಸಮಸ್ತ ಜನತೆಗೆ ಒನಕೆ ಓಬವ್ವ ಜಯಂತಿಯ ಹಾರ್ದಿಕ ಶುಭಕಾಮನೆಗಳು.  ಓಬವ್ವನವರ ಶೌರ್ಯ, ಮಾತೃಭೂಮಿಯ ಮೇಲಿನ ಭಕ್ತಿ ಅನನ್ಯವಾದದ್ದು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರು ಕನ್ನಡದಲ್ಲಿಯೇ ಟ್ವೀಟ್ ಮಾಡಿ, ವೀರವನಿತೆ ಒನಕೆ ಓಬವ್ವ ಜಯಂತಿಯ ವಿಶೇಷ ಸಂದರ್ಭದಲ್ಲಿ ಅವರಿಗೆ ನಮನ ಸಲ್ಲಿಸುತ್ತೇನೆ. ತನ್ನ ಜನರು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಅವರು ತೋರಿದ ಧೈರ್ಯವನ್ನು ಎಂದಿಗೂ ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ. ಅವರು ನಮ್ಮ ನಾರಿ ಶಕ್ತಿಯ ಪ್ರತೀಕವಾಗಿ ನಮಗೆ ಸ್ಫೂರ್ತಿ ನೀಡುತ್ತಾರೆಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಟ್ವೀಟ್ ಮಾಡಿ, ಪತಿ ಮುದ್ದಹನುಮನ ಅನುಪಸ್ಥಿತಿಯಲ್ಲಿ ಕೋಟೆಯ ನುಸುಳುಮಾರ್ಗದ ಕಾವಲಿನಲ್ಲಿ ಒನಕೆಯೊಂದಿಗೆ ತಾನೇ ನಿಂತು, ಹೈದರಾಲಿಯ ಸೇನಾನಿಗಳನ್ನು ಸದೆಬಡಿದ ವೀರವನಿತೆ, ಇತಿಹಾಸದ ಪುಟಗಳಲ್ಲಿ ಅಚ್ಚಾಗಿರುವ ಒನಕೆ ಓಬವ್ವ ಜಯಂತಿಯ ಶುಭಾಶಯಗಳು ಎಂದು ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಟ್ವೀಟ್ ಮಾಡಿ, ಪತಿ ಮುದ್ದಹನುಮನ ಅನುಪಸ್ಥಿತಿಯಲ್ಲಿ ಕೋಟೆಯ ನುಸುಳುಮಾರ್ಗದ ಕಾವಲಿನಲ್ಲಿ ಒನಕೆಯೊಂದಿಗೆ ತಾನೇ ನಿಂತು, ಹೈದರಾಲಿಯ ಸೇನಾನಿಗಳನ್ನು ಸದೆಬಡಿದ ವೀರವನಿತೆ, ಇತಿಹಾಸದ ಪುಟಗಳಲ್ಲಿ ಅಚ್ಚಾಗಿರುವ ಒನಕೆ ಓಬವ್ವ ಜಯಂತಿಯ ಶುಭಾಶಯಗಳು ಎಂದು ಹೇಳಿದೆ.

ಡಾ.ಸಿಎನ್ ಅಶ್ವತ್ಥ್ ನಾರಾಯಣ್ ಅವರು ಟ್ವೀಟ್ ಮಾಡಿ, ಪೌರಾಣಿಕ, ಐತಿಹಾಸಿಕ ಹಿನ್ನೆಲೆಯುಳ್ಳ ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವ ಅವರು ಸಮಯೋಚಿತ ಯುಕ್ತಿ, ಧೈರ್ಯ ಮತ್ತು ಸ್ಥೈರ್ಯದ ಮೂಲಕ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ಜನ್ಮದಿನವನ್ನು 'ಒನಕೆ ಓಬವ್ವ ಜಯಂತಿ' ಎಂದು ಆಚರಿಸಲು ಸರ್ಕಾರ ನಿರ್ಧರಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಮತ್ತು ಸಂತಸದ ಸಂಗತಿ ಎಂದು ಹೇಳಿದ್ದಾರೆ.

ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ ಹೆಸರಾಗಿದೆ, ಅವರನ್ನು ಕರ್ನಾಟಕ ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕರ ಸಾಲಿನಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

ಒನಕೆ ಓಬವ್ವ 18ನೇ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮುದ್ರಹನುಮಪ್ಪನವರ ಹೆಂಡತಿಯಾಗಿದ್ದರು. ಚಿತ್ರದುರ್ಗದ ಮೇಲೆ ಹೈದರಾಲಿಯ ಸೈನಿಕರು ಹಠಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವ ತನ್ನ ಒನಕೆಯನ್ನು ಅಸ್ತ್ರವನ್ನಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದರು. ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಜಜ್ಜಿ, ಹೊಡೆದು ಕೊಂದಿದ್ದರು. ಕೊನೆಯಲ್ಲಿ ಎದುರಾಳಿಯು ಬೆನ್ನ ಹಿಂದೆ ಬಂದದ್ದನ್ನು ಗಮನಿಸಲಾಗದೇ ಶತ್ರುವಿನ ಕತ್ತಿಗೆ ಬಲಿಯಾಗಿದ್ದರು.

ಪ್ರಸ್ತುತ ಆ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತಿದೆ. ಚಿತ್ರದುರ್ಗದ ಆಟದ ಕ್ರೀಡಾಂಗಣಕ್ಕೆ ಜನಕೆ ಓಬವ್ವನ ಕ್ರೀಡಾಂಗಣ ಎಂದು ಹೆಸರನ್ನಿಟ್ಟು ಗೌರವಿಸಲಾಗಿದೆ.

ಒನಕೆ ಓಬವ್ವರ ಜನ್ಮ ದಿನವಾದ ನವೆಂಬರ್ 11ರಂದು ಒನಕೆ ಓಬವ್ವ ಜಯಂತಿಯನ್ನು ಆಚರಣೆ ಮಾಡುವಂತೆ ಇದೀಗ ತೀರ್ಮಾನಿಸಲಾಗಿದ್ದು, ನ.11ರಂದು ಒನಕೆ ಓಬವ್ವ ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಲು ಸರ್ಕಾರ ಆದೇಶಿಸಿತ್ತು. ಆದರೆ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ನವೆಂಬರ್ 11 ರಂದು ಸರ್ಕಾರ ಓಬವ್ವ ಜಯಂತಿ ಆಚರಣೆಯನ್ನು ಮುಂದೂಡಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com