ಬೆಳಗಾವಿಯಲ್ಲಿ ಮುಂದುವರಿದ ನೇಕಾರರ ಸರಣಿ ಆತ್ಮಹತ್ಯೆ: ಸಾಲ ಬಾಧೆಯಿಂದ ತತ್ತರಿಸಿದ್ದ ಇಬ್ಬರು ಸಾವಿಗೆ ಶರಣು
ಜಿಲ್ಲೆಯ ನೇಕಾರ ಕೂಲಿ ಕಾರ್ಮಿಕ ಕುಟುಂಬಗಳು ಮತ್ತಷ್ಟು ತತ್ತರಿಸಿ ಸಂಕಷ್ಟಕ್ಕೆ ಸಿಲುಕಿವೆ. ನಿನ್ನೆ ಒಂದೇ ದಿನ ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ಉದ್ಯಮವನ್ನು ಮತ್ತಷ್ಟು ಕಂಗೆಡಿಸಿದೆ.
Published: 12th November 2021 01:47 PM | Last Updated: 12th November 2021 02:06 PM | A+A A-

ಸಾಂದರ್ಭಿಕ ಚಿತ್ರ
ಬೆಳಗಾವಿ: ಜಿಲ್ಲೆಯ ನೇಕಾರ ಕೂಲಿ ಕಾರ್ಮಿಕ ಕುಟುಂಬಗಳು ಮತ್ತಷ್ಟು ತತ್ತರಿಸಿ ಸಂಕಷ್ಟಕ್ಕೆ ಸಿಲುಕಿವೆ. ನಿನ್ನೆ ಒಂದೇ ದಿನ ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ಉದ್ಯಮವನ್ನು ಮತ್ತಷ್ಟು ಕಂಗೆಡಿಸಿದೆ.
ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾದ ನೇಕಾರರನ್ನು ವಡಗಾಂವ್‌ನ ಮಲಪ್ರಭಾ ನಗರದ ಗಣಪತಿ ಜ್ಯೋತಿಬಾ ಸಂಗಪಣ್ಣವರ್ (45) ಮತ್ತು ವಡಗಾಂವ್‌ನ ಶಿವಾಜಿ ಗಲ್ಲಿಯ ಲಕ್ಷ್ಮಿ ನಗರದ ಗಣಪತಿ ರಾಮಚಂದ್ರ ಬುಚಡಿ (60) ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ಇಬ್ಬರು ಹೆಚ್ಚು ಕೈಸಾಲ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾಲ, ಬಡ್ಡಿ ಸೇರಿ ಹೆಚ್ಚಿಗೆ ಆಗಿದ್ದರಿಂದ ಅವರ ಜಮೀನನ್ನು ಬೇರೆಯವರಿಗೆ ಕರಾರು ಮಾಡಿ ಸಾಲ ತೀರಿಸಿದ್ದಾರೆ. ಅಷ್ಟಾದರೂ ತಾವು ಮಾಡಿಕೊಂಡ ಸಾಲ ಇನ್ನೂ ಬಾಕಿ ಉಳಿದ ಪರಿಣಾಮ ಆತ್ಮಹತ್ಯೆಗೆ ಶರಣಾಗಿದ್ದು ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ವರ್ಷ ರಾಜ್ಯಾದ್ಯಂತ 30 ನೇಕಾರರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವರ್ಷ ಬೆಳಗಾವಿ ನಗರದಲ್ಲಿ ಸಾಲಬಾಧೆಯಿಂದ ನಾಲ್ವರು ನೇಕಾರರು ಪ್ರಾಣ ಕಳೆದುಕೊಂಡಿದ್ದರೆ, ಕಳೆದ ವರ್ಷ ರಾಜ್ಯದಲ್ಲಿ 20 ನೇಕಾರರು ಸಾವಿಗೆ ಶರಣಾಗಿದ್ದರು.
ಇದನ್ನೂ ಓದಿ: ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ: ಭೂಮಿ ನೀಡಲು ರೈತರ ವಿರೋಧ: ಬೆಳಗಾವಿ ಧಗಧಗ!
ತಮ್ಮ ಮನೆಯ ಘಟಕಗಳಲ್ಲಿ ಸೂಕ್ಷ್ಮ ನೇಯ್ಗೆ ಹೊಂದಿರುವ ನೇಕಾರರಿಗೆ ಕಳೆದ ವರ್ಷ ಮೊದಲ ಲಾಕ್‌ಡೌನ್ ನಂತರ ಸಮಸ್ಯೆ ಪ್ರಾರಂಭವಾಯಿತು. ಈಗಾಗಲೇ ಸೀರೆಗಳಿಗೆ ಕಚ್ಚಾ ಸಾಮಗ್ರಿಗಳನ್ನು ಹೂಡಿಕೆ ಮಾಡಿದ್ದರು, ಆದರೆ ಮಾರಾಟವಿಲ್ಲದ ಕಾರಣ ಮಾಡಿದ ಖರ್ಚನ್ನು ವಾಪಸ್ ಪಡೆಯಲು ಸಾಧ್ಯವಾಗಲಿಲ್ಲ.
ದಿನ ಕಳೆದಂತೆ ನೇಕಾರರ ಪರಿಸ್ಥಿತಿ ಹದಗೆಡುತ್ತಿದ್ದು, ಸಾಲದ ಸುಳಿಯಲ್ಲಿ ಸಿಲುಕಿರುವವರು ಬದುಕು ಕಟ್ಟಿಕೊಳ್ಳಲು ಬೇರೆ ದಾರಿಯಿಲ್ಲ. ಸೀರೆ ನೇಯುವ ಕಚ್ಚಾ ವಸ್ತುಗಳ ಬೆಲೆ ಹೆಚ್ಚಿದೆಯಾದರೂ ಕೊಳ್ಳುವವರಿಲ್ಲ. ಸೀರೆ ಖರೀದಿಸುವವರು ಹಣ ಪಾವತಿ ಮಾಡುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಗಳಿಗೆ ಹಲವು ತಿಂಗಳಿಂದ ಪರಿಹಾರ ಧನ ಸಿಗುತ್ತಿಲ್ಲ. ಜವಳಿ ಸಚಿವರು ಬೆಳಗಾವಿ ಮತ್ತು ಬಾಗಲಕೋಟೆ ಕ್ಲಸ್ಟರ್‌ಗಳಿಗೆ ಭೇಟಿ ನೀಡಿ ನೆಲದ ವಾಸ್ತವತೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಬೆಳಗಾವಿ ನೇಕಾರರ ಸಂಘದ ಕಾರ್ಯದರ್ಶಿ ಪರುಶುರಾಮ್ ತಿಳಿಸಿದ್ದಾರೆ.