ಶ್ರೀಕಿಯನ್ನು ಎನ್ಕೌಂಟರ್ ಮಾಡುವ ಸಾಧ್ಯತೆ: ಕಾಂಗ್ರೆಸ್ ವಕ್ತಾರ ಸಂಕೇತ್ ಏಣಗಿ
ಬಿಟ್ ಕಾಯಿನ್ ಹ್ಯಾಕರ್ ಶ್ರೀಕಿಯನ್ನು ಬಿಜೆಪಿ ಸರ್ಕಾರ ಎನ್ಕೌಂಟರ್ ಮಾಡುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ವಕ್ತಾರ ಸಂಕೇತ್ ಏಣಗಿ ಮಂಗಳವಾರ ಹೇಳಿದ್ದಾರೆ.
Published: 17th November 2021 08:36 AM | Last Updated: 17th November 2021 08:36 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಬಿಟ್ ಕಾಯಿನ್ ಹ್ಯಾಕರ್ ಶ್ರೀಕಿಯನ್ನು ಬಿಜೆಪಿ ಸರ್ಕಾರ ಎನ್ಕೌಂಟರ್ ಮಾಡುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ವಕ್ತಾರ ಸಂಕೇತ್ ಏಣಗಿ ಮಂಗಳವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಉತ್ತರ ಪ್ರದೇಶ ಪೊಲೀಸರಿಂದ ಎನ್ ಕೌಂಟರ್ ಗೆ ಬಲಿಯಾದ ವಿಕಾಸ್ ದುಬೆ ಪ್ರಕರಣವನ್ನು ಉದಾಹರಣೆಯಾಗಿ ನೀಡಿದ್ದಾರೆ.
ಉತ್ತರ ಪ್ರದೇಶದ ಅಪರಾಧಗಳಲ್ಲಿಯ ತನ್ನ ಪಾತ್ರ ಬಹಿರಂಗವಾಗದಂತೆ ಬಿಜೆಪಿ ಸರ್ಕಾರ ಪೊಲೀಸ್ ಎನ್ಕೌಂಟರ್ ಮುಖೇನ ಆರೋಪಿ ವಿಕಾಸ ದುಬೆಯ ಹತ್ಯೆಯಂತೆಯೇ ಕರ್ನಾಟಕದ ಬಿಜೆಪಿ ಸರ್ಕಾರ ತನ್ನ ಪಕ್ಷದವರ ರಕ್ಷಣೆಗೋಸ್ಕರ ಬಿಟ್ ಕಾಯಿನ್ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರಿಕಿಯನ್ನು ಪೊಲೀಸರು ಎನ್ ಕೌಂಟರ್ ಮಾಡುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಶ್ರೀಕಿಯ ಸುತ್ತಲೇ ಬಿಟ್ ಕಾಯಿನ್ ಪ್ರಕರಣ ಗಿರಕಿ ಹೊಡೆಯುತ್ತಿದೆ. ಗ್ಯಾಂಗ್‌ಸ್ಟರ್ ವಿಕಾಸ್ ದುಬೆಯನ್ನು ಮಧ್ಯಪ್ರದೇಶದಲ್ಲಿ ಉಜ್ಜಯಿನಿಯಲ್ಲಿ ಬಂಧಿಸಲಾಗಿತ್ತು. ಆದರೆ, ಮಧ್ಯಪ್ರದೇಶದ ಉಜ್ಜಯಿನಿಯಿಂದ ಉತ್ತರ ಪ್ರದೇಶದ ಶಿವ್ಲಿಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಕಾರ್ ಕಾನ್ಪುರದ ಬಳಿ ಪಲ್ಟಿಯಾಗಿತ್ತು.
ಈ ವೇಳೆ ವಿಕಾಸ್ ದುಬೆ ಪೊಲೀಸರ ಬಳಿ ಇದ್ದ ಗನ್ ಕಿತ್ತುಕೊಂಡು, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿತ್ತು. ಅದೇ ರೀತಿ ಶ್ರೀಕಿಯನ್ನು ಎನ್ಕೌಂಟರ್ ಮಾಡುವ ಸಾಧ್ಯತೆಯಿದೆ ಎಂದು ಆತಂಕವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಆರೋಪಿಗೆ ಸೂಕ್ತ ಭದ್ರತೆ ನೀಡುವಂತೆ ಆಗ್ರಹಿಸಿದ್ದರು.
ಪ್ರಕರಣದಲ್ಲಿ ಸಾಕಷ್ಟು ದೊಡ್ಡ ದೊಡ್ಡ ವ್ಯಕ್ತಿಗಳು ಭಾಗಿಯಾಗಿದ್ದು, ಹೀಗಾಗಿ ಆರೋಪಿಗೆ ಸೂಕ್ತ ಭದ್ರತೆಗಳನ್ನು ನೀಡುವುದು ಅಗತ್ಯವಿದೆ ಎಂದು ಹೇಳಿದ್ದರು