ಸಿಕ್ಕಿರುವುದು ಅರ್ಧ ಜಯವಷ್ಟೇ; ರಾಜ್ಯದಲ್ಲಿಯೂ ಕಾಯ್ದೆ ರದ್ದುಪಡಿಸಬೇಕು: ರೈತ ಮುಖಂಡರ ಆಗ್ರಹ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ, ರಾಜ್ಯದಲ್ಲಿಯೂ ಸರ್ಕಾರವು ಎಪಿಎಂಸಿ ಕಾಯ್ದೆ ಮತ್ತು ಕರ್ನಾಟಕ ಭೂಸುಧಾರಣಾ ಕಾಯ್ದೆ ತರಲಾಗಿರುವ ತಿದ್ದುಪಡಿಗಳನ್ನು ರದ್ದುಗೊಳಿಸಬೇಕು ಎಂದು ಕೃಷಿ ತಜ್ಞರು ಮತ್ತು ರೈತ ಮುಖಂಡರು ಆಗ್ರಹಿಸಿದ್ದಾರೆ.
ರೈತ ಮುಖಂಡರು
ರೈತ ಮುಖಂಡರು

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ, ರಾಜ್ಯದಲ್ಲಿಯೂ ಸರ್ಕಾರವು ಎಪಿಎಂಸಿ ಕಾಯ್ದೆ ಮತ್ತು ಕರ್ನಾಟಕ ಭೂಸುಧಾರಣಾ ಕಾಯ್ದೆ ತರಲಾಗಿರುವ ತಿದ್ದುಪಡಿಗಳನ್ನು ರದ್ದುಗೊಳಿಸಬೇಕು ಎಂದು ಕೃಷಿ ತಜ್ಞರು ಮತ್ತು ರೈತ ಮುಖಂಡರು ಆಗ್ರಹಿಸಿದ್ದಾರೆ.

ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಅವರು ಮಾತನಾಡಿ, ಕರ್ನಾಟಕದಲ್ಲಿ ಈಗಾಗಲೇ ತಿದ್ದುಪಡಿ ಮಾಡಿರುವ ಭೂ ಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳು ಅನುಷ್ಠಾನಗೊಂಡಿದೆ. ಶೇ.60ರಿಂದ 80ರಷ್ಟು ವಿವಿಧ ಬೆಳೆಗಳಲ್ಲಿ ಎಪಿಎಂಸಿ ಒಳಗಿನ ವ್ಯವಹಾರ ಈಗಾಗಲೇ ಕಡಿಮೆಯಾಗಿದೆ. ಮುಕ್ತ ವ್ಯಾಪಾರದ ಮೂಲಕ ರೈತರ ಲೂಟಿಗೆ ಅವಕಾಶ ನೀಡಿದೆ. ಕರ್ನಾಟಕದಲ್ಲಿ ಈ ಕಾಯ್ದೆಗಳು ವಾಪಾಸು ಬಂದಾಗ ಮಾತ್ರ ನಾವೆಲ್ಲ ಯಶಸ್ಸು ಸಾಧಿಸಿದ್ದೇವೆ ಎಂದು ಭಾವಿಸಬಹುದು ಎಂದು ಹೇಳಿದ್ದಾರೆ.

ಒಂದು ವರ್ಷ ಕಾಲ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ ರೈತರಿಗೆ ಕೊನೆಗೂ ಜಯ ಸಿಕ್ಕಿದೆ. ಆದರೆ, ಈ ಜಯ ಅರ್ಧವಷ್ಟೇ. ರಾಜ್ಯದಲ್ಲಿಯೂ ತಿದ್ದುಪಡಿಗಳು ರದ್ದಾದರೆ, ಪೂರ್ಣ ಪ್ರಮಾಣದ ಯಶಸ್ಸು ಸಿಕ್ಕಂತಾಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಆಂದೋಲನದ ನೇತೃತ್ವ ವಹಿಸಿರುವ ಕರ್ನಾಟಕ, ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಯುಕ್ತ ಹೋರಾಟದ ನಾಯಕರು ಮಾತನಾಡಿ, ಈಗಾಗಲೇ ಕಾಯಿದೆಗಳಿಗೆ ತರಲಾಗಿರುವ ತಿದ್ದುಪಡಿಗಳನ್ನು ರದ್ದುಪಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದೇ ಆದರೆ, ಆಂದೋಲನವನ್ನು ತೀವ್ರಗೊಳಿಸುತ್ತೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.

ರೈತರು ಒಂದು ವರ್ಷ ಪ್ರತಿಭಟನೆ ನಡೆಸಿದ ನಂತರ, ಪ್ರಧಾನಿ ತಪ್ಪನ್ನು ಅರಿತುಕೊಂಡರು ಮತ್ತು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಘೋಷಿಸಿದರು. ಆದರೆ, ರಾಜ್ಯದಲ್ಲಿನ ಬಿಜೆಪಿ ಸರ್ಕಾರವು ಎಪಿಎಂಸಿ ಕಾಯ್ದೆ ಮತ್ತು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿಗಳನ್ನು ತ್ವರಿತವಾಗಿ ಜಾರಿಗೊಳಿಸಿದೆ ಎಂದು ರೈತ ಮುಖಂಡರೊಬ್ಬರು ಹೇಳಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಜಾರಿಗೊಳಿಸಿದೆ. “ಈಗ ಕೇಂದ್ರವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ, ಹೀಗಾಗಿ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ ಮತ್ತು ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತರಲಾಗಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು. ರಾಜ್ಯದಲ್ಲಿ ತಿದ್ದುಪಡಿಗಳು ರದ್ದುಗೊಳ್ಳದ ಹೊರತು ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದಿದ್ದಾರೆ.

ಈ ನಡುವೆ ನವೆಂಬರ್ 26 ರ ಪ್ರತಿಭಟನೆ ಕುರಿತ ಯೋಜನೆಗಳ ಕುರಿತು ರೈತ ಸಂಘಟನೆಗಳು ಇಂದು ಸಭೆ ಸೇರಲಿದ್ದು, ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಿದೆ ಎಂದು ತಿಳಿದುಬಂದಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com