ಶಾಂತಗೌಡ ಬಿರಾದಾರ್ ಮನೆಯ ಪಿವಿಸಿ ಪೈಪ್ ನಲ್ಲಿ ನೋಟಿನ ಕಂತೆ ಇಟ್ಟಿದ್ದು ಎಸಿಬಿ ಅಧಿಕಾರಿಗಳಿಗೆ ಗೊತ್ತಾಗಿದ್ದು ಹೇಗೆ?

ಸರ್ಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ(ACB) ಅಧಿಕಾರಿಗಳ ಶೋಧ ಕಾರ್ಯದಲ್ಲಿ ಹೆಚ್ಚು ಸದ್ದು ಮಾಡಿದ್ದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಶಾಂತಗೌಡ ಬಿರಾದಾರ್(shantagouda Biradar) ಅವರ ಮನೆ ಮೇಲೆ ನಡೆದ ದಾಳಿ. 
ಶಾಂತಗೌಡ ಬಿರಾದಾರ್ ಮನೆಯಲ್ಲಿ ವಶಪಡಿಸಿಕೊಳ್ಳಲಾದ ನಗದು, ಚಿನ್ನ, ದಾಖಲೆಗಳನ್ನು ಇಟ್ಟುಕೊಳ್ಳಲು ಟ್ರಂಕ್ ಖರೀದಿಸಿ ತಂದ ಎಸಿಬಿ ಸಿಬ್ಬಂದಿಗಳು
ಶಾಂತಗೌಡ ಬಿರಾದಾರ್ ಮನೆಯಲ್ಲಿ ವಶಪಡಿಸಿಕೊಳ್ಳಲಾದ ನಗದು, ಚಿನ್ನ, ದಾಖಲೆಗಳನ್ನು ಇಟ್ಟುಕೊಳ್ಳಲು ಟ್ರಂಕ್ ಖರೀದಿಸಿ ತಂದ ಎಸಿಬಿ ಸಿಬ್ಬಂದಿಗಳು

ಕಲಬುರಗಿ: ಸರ್ಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ(ACB) ಅಧಿಕಾರಿಗಳ ಶೋಧ ಕಾರ್ಯದಲ್ಲಿ ಹೆಚ್ಚು ಸದ್ದು ಮಾಡಿದ್ದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಶಾಂತಗೌಡ ಬಿರಾದಾರ್(shantagouda Biradar) ಅವರ ಮನೆ ಮೇಲೆ ನಡೆದ ದಾಳಿ. 

ಅವರ ಮನೆಯಲ್ಲಿ 4 ಕೋಟಿಯ 15 ಲಕ್ಷದ 12 ಸಾವಿರದ 491 ರೂಪಾಯಿ ಮೌಲ್ಯದ ಅಕ್ರಮ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಅದು ಅವರ ಆದಾಯ ಮೂಲಕ್ಕಿಂತ ಶೇಕಡಾ 406.17ರಷ್ಟು ಹೆಚ್ಚಾಗಿದೆ. ಆದರೆ ಎಲ್ಲಕ್ಕಿಂತ ಹೆಚ್ಚು ಸುದ್ದಿಯಾಗಿದ್ದು ಎಸಿಬಿ ಅಧಿಕಾರಿಗಳು ಬರುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಬಿರಾದಾರ್ ಮತ್ತು ಅವರ ಮನೆಯವರು ಪಿವಿಸಿ ಪೈಪ್(PVC pipe) ನೊಳಗೆ ನೋಟಿನ ಕಂತೆಯನ್ನು ಅಡಗಿಸಿಟ್ಟಿದ್ದು, ಇಡೀ ರಾಜ್ಯದ ಜನತೆ ಸುದ್ದಿವಾಹಿನಿಗಳಲ್ಲಿ ಕಣ್ಣುಬಾಯಿ ಬಿಟ್ಟು ನೋಡುವಂತೆ ಮಾಡಿತು.

ಪೈಪ್ ನೊಳಗೆ ಹಣ ಇಟ್ಟಿದ್ದು ಗೊತ್ತಾಗಿದ್ದು ಹೇಗೆ?: ಶಾಂತಗೌಡ ಬಿರಾದಾರ್ ಮನೆಗೆ ಹೋಗುವ ಮೊದಲು ಎಸಿಬಿ ಸಿಬ್ಬಂದಿಗೆ ನೆರೆಹೊರೆಯವರಿಂದ ಸಿಕ್ಕಿದ ಮಾಹಿತಿಯೆಂದರೆ ಬಿರಾದಾರ್ ಅವರು ಮನೆಯ ಬಾತ್ ರೂಂ ಅಥವಾ ಶೌಚಾಲಯದೊಳಗೆ ಹಣ ಬಚ್ಚಿಟ್ಟಿರಬಹುದು ಎಂದು. ಬಿರಾದಾರ್ ಮನೆಯೊಳಗೆ ಹೋದ ಎಸಿಬಿ ಅಧಿಕಾರಿಗಳಿಗೆ ಆರಂಭದಲ್ಲಿ ಮೂಲೆ ಮೂಲೆ ಹುಡುಕಿದರೂ ಏನೂ ಸಿಗಲಿಲ್ಲ. 

ಕೊನೆಗೆ ಕೆಲವು ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದರೆ ಇನ್ನು ಕೆಲವರು ನಗದು, ಚಿನ್ನಾಭರಣಗಳನ್ನು ಹುಡುಕುತ್ತಿದ್ದರು. ಆಗ ಬಿರಾದಾರ್ ಮತ್ತು ಅವರ ಮಗ ಪದೇ ಪದೇ ಶೌಚಾಲಯ ಕಡೆ ಹೋಗಿ ಬರುತ್ತಿದ್ದರು. ಸಂಶಯ ಬಂದು ಪರೀಕ್ಷಿಸಲು ಮುಂದಾದರು. ಶೌಚಾಲಯ ಪಕ್ಕದಲ್ಲಿ ವಾಶಿಂಗ್ ಮೆಶಿನ್ ಇತ್ತು. ಪಿವಿಸಿ ಪೈಪ್ ನ ಬಾಯಿಯನ್ನು ವಾಶಿಂಗ್ ಮೆಶಿನ್ ಗೆ ಸಂಪರ್ಕಿಸಿ ಪೈಪ್ ಕವರ್ ನಿಂದ ಮುಚ್ಚುವ ಬದಲು ಕಲ್ಲಿನಿಂದ ಮುಚ್ಚಿದ್ದರು.

ಅಲ್ಲಿಗೆ ಹೋದ ಎಸಿಬಿ ಅಧಿಕಾರಿಗಳು ಕಲ್ಲನ್ನು ತೆಗೆದಾಗ ಪೈಪ್ ನೊಳಗೆ ರಾಶಿರಾಶಿ ನೋಟಿನ ಕಂತೆ ಮುಚ್ಚಿಟ್ಟಿರುವುದು ಕಾಣಿಸಿತು.ಸ್ಥಳೀಯ ಪ್ಲಂಬರ್ ವೊಬ್ಬನನ್ನು ಬರಲು ಹೇಳಿ ಪೈಪ್ ನ್ನು ಕತ್ತರಿಸಲು ಹೇಳಿದರು. ಆಗ ಪೈಪ್ ನ್ನು ಕೊರೆದಾಗ 13 ಲಕ್ಷ ರೂಪಾಯಿ ನಗದು ಸಿಕ್ಕಿತು. ವಾಶಿಂಗ್ ಮೆಶಿನ್ ನ್ನು ಬಿರಾದಾರ್ ಮನೆಯವರು ಎರಡು ತಿಂಗಳಿನಿಂದ ಬಳಸದೆ ಹಾಗೆಯೇ ಬಿಟ್ಟಿದ್ದರು. 

ಒಬ್ಬ ಯುವಕನಿಗೆ ಕೆಲಸ ಕೊಡಿಸಲು ಮಧ್ಯವರ್ತಿಗೆ ಹಣ ನೀಡಲು ಬಿರಾದಾರ್ ಮತ್ತು ಅವರ ಮಗ ಮೊನ್ನೆ ಬುಧವಾರ ಬೆಂಗಳೂರಿಗೆ ಹೋಗುವವರಿದ್ದರು. ಆದರೆ ಅಂದೇ ಬೆಳಗ್ಗೆ ಎಸಿಬಿ ಅಧಿಕಾರಿಗಳು ಅವರ ಮನೆ ಮೇಲೆ ದಾಳಿ ಮಾಡಿದ್ದರು. ಕಲಬುರಗಿಯ ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಜೇವರ್ಗಿಯ ಎಸ್ ಬಿಐ ಶಾಖೆಗೆ ಭೇಟಿ ನೀಡಿ ಎಸಿಬಿ ಅಧಿಕಾರಿಗಳು ಅವರ ಬ್ಯಾಂಕ್ ಖಾತೆಗಳು, ಲಾಕರ್ ಬಗ್ಗೆ ಕೂಡ ಮಾಹಿತಿ ಪಡೆದಿದ್ದಾರೆ. ಬಿರಾದಾರ್ ಮನೆಯಿಂದ ವಶಪಡಿಸಿಕೊಂಡಿರುವ ದಾಖಲೆಗಳು, ಚಿನ್ನ, ನಗದನ್ನು ಭದ್ರವಾಗಿ ಇಡಲು ಟ್ರಂಕ್ ಗಳನ್ನು ಕೂಡ ಎಸಿಬಿ ತಂಡ ಖರೀದಿಸಿದೆ. 

ಬಿರಾದಾರ್ ಬಂಧನ ಬಳಿಕ ಏನಾಯ್ತು?: ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಮತ್ತು ನಗದನ್ನು ಬಚ್ಚಿಟ್ಟದ್ದು ನೋಡಿ ಬಿರಾದಾರ್ ಅವರನ್ನು ಬುಧವಾರ ಸಾಯಂಕಾಲ ಬಂಧಿಸಿದ ಎಸಿಬಿ ಅಧಿಕಾರಿಗಳು ಜಿಲ್ಲಾಸ್ಪತ್ರೆಯಲ್ಲಿ ಫಿಟ್ ನೆಸ್ ಮತ್ತು ಕೋವಿಡ್ ಪರೀಕ್ಷೆಗೆ ಒಳಪಡಿಸಿದರು. ಇದೀಗ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಎಸಿಬಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದು ಸೇವೆಯಿಂದ ಅಮಾನತು ಮಾಡುವಂತೆ ಶಿಫಾರಸು ಮಾಡಬಹುದು ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಕಾರಿ ಎಂಜಿನಿಯರ್ ಮಲ್ಲಿಕಾರ್ಜುನ್ ಜೆರಟಗಿ ಹೇಳುತ್ತಾರೆ. ತಮಗೆ ಇದುವರೆಗೆ ಎಸಿಬಿಯಿಂದ ಯಾವುದೇ ವರದಿ ಬಂದಿಲ್ಲ, ಬಿರಾದಾರ್ ವಿರುದ್ಧ ಯಾವುದೇ ಇಲಾಖಾ ತನಿಖೆ ಉಳಿದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com