ಎಸಿಬಿ ದಾಳಿಗೊಳಗಾದ ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿ ಮೌಲ್ಯ ಆದಾಯ ಮೂಲಕ್ಕಿಂತ 4 ಪಟ್ಟು ಹೆಚ್ಚು!

ಭ್ರಷ್ಟಾಚಾರ ನಿಗ್ರಹ ದಳ(ACB)ದ ಅಧಿಕಾರಿಗಳು ರಾಜ್ಯದ 68 ಕಡೆಗಳಲ್ಲಿ 15 ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಸಂಪತ್ತಿನ ಮೇಲೆ ದಾಳಿ ನಡೆಸಿದಾಗ ಹಲವು ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ. ಈ 15 ಮಂದಿ ಅಧಿಕಾರಿಗಳಲ್ಲಿ ಕೆಲವರಂತೂ ತಮ್ಮ ಆದಾಯದ ಮೂಲದ ಶೇಕಡಾ 400ರಿಂದ 500ರಷ್ಟು ಹೆಚ್ಚು ಆಸ್ತಿ ಹೊಂದಿರುವುದು ಶೋಧ ವೇಳೆ ಬೆಳಕಿಗೆ ಬಂದಿದೆ. 
ಕೃಷಿ ಇಲಾಖೆ ಅಧಿಕಾರಿ ರುದ್ರೇಶ್ ನಿವಾಸದಲ್ಲಿ ಎಸಿಬಿ ಅಧಿಕಾರಿಗಳ ಪರಿಶೀಲನೆ
ಕೃಷಿ ಇಲಾಖೆ ಅಧಿಕಾರಿ ರುದ್ರೇಶ್ ನಿವಾಸದಲ್ಲಿ ಎಸಿಬಿ ಅಧಿಕಾರಿಗಳ ಪರಿಶೀಲನೆ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ(ACB)ದ ಅಧಿಕಾರಿಗಳು ರಾಜ್ಯದ 68 ಕಡೆಗಳಲ್ಲಿ 15 ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಸಂಪತ್ತಿನ ಮೇಲೆ ದಾಳಿ ನಡೆಸಿದಾಗ ಹಲವು ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ. ಈ 15 ಮಂದಿ ಅಧಿಕಾರಿಗಳಲ್ಲಿ ಕೆಲವರಂತೂ ತಮ್ಮ ಆದಾಯದ ಮೂಲದ ಶೇಕಡಾ 400ರಿಂದ 500ರಷ್ಟು ಹೆಚ್ಚು ಆಸ್ತಿ ಹೊಂದಿರುವುದು ಶೋಧ ವೇಳೆ ಬೆಳಕಿಗೆ ಬಂದಿದೆ. 

ಎಸಿಬಿ ಅಧಿಕಾರಿಗಳು ದಾಳಿ ಮಾಡಿದವುಗಳಲ್ಲಿ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕರ ಅಕ್ರಮ ಆಸ್ತಿ ಮೌಲ್ಯ 18.20 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದ್ದು ಅದು ಅವರ ಆದಾಯ ಮೂಲಕ್ಕಿಂತ ಶೇಕಡಾ 879ಕ್ಕಿಂತ ಹೆಚ್ಚಾಗಿದೆ. 

ಎಸಿಬಿ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ನಗದು, ಚಿನ್ನ-ಬೆಳ್ಳಿ, ವಾಹನಗಳು ಹಾಗೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿದ್ದು ಅವುಗಳನ್ನು ವಶಪಡಿಸಿಕೊಂಡಿದ್ದಾರೆ. ನಿನ್ನೆ ಅಧಿಕಾರಿಗಳಿಗೆ ಸಂಬಂಧಪಟ್ಟ ಬ್ಯಾಂಕ್ ಲಾಕರ್ ನ್ನು ತೆಗೆಸಲಾಗಿದ್ದು ವಶಪಡಿಸಿಕೊಂಡಿರುವ ವಸ್ತುಗಳ ಮೌಲ್ಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. 

ಆರೋಪಿ ಅಧಿಕಾರಿಗಳು ಸಲ್ಲಿಸಿರುವ ದಾಖಲೆಗಳು ಮತ್ತು ಹಲವು ಮೂಲಗಳಿಂದ ಸಿಕ್ಕಿರುವ ಮಾಹಿತಿ ಆಧಾರದ ಮೇಲೆ ಆಸ್ತಿಪಾಸ್ತಿಗಳ ಅಂದಾಜು ಸಿಗಬೇಕಿದೆ. ಅಂದಾಜಿನ ಪ್ರಕಾರ, ಬೆಂಗಳೂರು ಗ್ರಾಮಾಂತರ ಭಾಗದ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ವಾಸುದೇವ ಆರ್ ಎನ್ ಅವರ ಬಳಿ 18 ಕೋಟಿಯ 20 ಲಕ್ಷದ 63 ಸಾವಿರದ 868 ಆಸ್ತಿಯಿದ್ದು ಅದು ಅವರ ಆದಾಯ ಮೂಲದ ಶೇಕಡಾ 879.53ರಷ್ಟು ಹೆಚ್ಚಾಗಿದೆ.

ವಾಸುದೇವ ಅವರಿಗೆ ಸಂಬಂಧಿಸಿದ 6 ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ಶೋಧ ನಡೆಸಿದಾಗ ಬೆಂಗಳೂರಿನಲ್ಲಿ 5 ಮನೆಗಳು ಮತ್ತು 8 ವಸತಿ ನಿವೇಶನಗಳಿಗೆ ಸೇರಿದ ದಾಖಲೆಗಳು ಸಿಕ್ಕಿದೆ. ನೆಲಮಂಗಲ ತಾಲ್ಲೂಕಿನ ಸೊಂಪುರದಲ್ಲಿ 4 ಮನೆಗಳು, ನೆಲಮಂಗಲ ಮತ್ತು ಮಾಗಡಿ ತಾಲ್ಲೂಕುಗಳಲ್ಲಿ 10.20 ಎಕರೆ ಕೃಷಿ ಭೂಮಿ, 850 ಗ್ರಾಂ ಚಿನ್ನ, 9.5 ಕೆಜಿ ಬೆಳ್ಳಿ, 15 ಲಕ್ಷ ನಗದು ಮತ್ತು 98 ಲಕ್ಷ ರೂಪಾಯಿ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸಿಕ್ಕಿವೆ.

ಗ್ರೂಪ್ ಡಿ ನೌಕರನಿಗೆ ಶೇಕಡಾ 564ರಷ್ಟು ಡಿಎ: ಕಲಬುರಗಿಯ ತಮ್ಮ ವಸತಿಯಲ್ಲಿ ಪೈಪ್ ನಲ್ಲಿ ಹಣವಿಟ್ಟು ಸುದ್ದಿ ಮಾಡಿ ಜೈಲು ಸೇರಿರುವ ಲೋಕೋಪಯೋಗಿ ಇಲಾಖೆ ಜ್ಯೂನಿಯರ್ ಎಂಜಿನಿಯರ್ ಎಸ್ ಎಂ ಬಿರಾದಾರ್ ಅವರ ಆದಾಯ ಮೂಲಕ್ಕಿಂತ ಶೇಕಡಾ 406.17ರಷ್ಟು ಹೆಚ್ಚು ಆಸ್ತಿಪಾಸ್ತಿ, ಸಂಪತ್ತು ಹೊಂದಿದ್ದಾರೆ. ಬಿರಾದಾರ್ ಅವರ ಸಂಪತ್ತಿನ ಮೌಲ್ಯ 4 ಕೋಟಿಯ 15 ಲಕ್ಷದ 12 ಸಾವಿರದ 491 ಆಗಿದೆ ಎನ್ನುತ್ತಾರೆ ಎಸಿಬಿ ಅಧಿಕಾರಿಗಳು. ಬಿರಾದಾರ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಎಸಿಬಿ ಗದಗದಲ್ಲಿ ಜಂಟಿ ಕೃಷಿ ನಿರ್ದೇಶಕ ಟಿ ಎಸ್ ರುದ್ರೇಶಪ್ಪ ಅವರ ಆಸ್ತಿಯನ್ನು 6 ಕೋಟಿಯ 65 ಲಕ್ಷದ 03 ಸಾವಿರದ 782 ರೂಪಾಯಿ ಎಂದು ಅಂದಾಜಿಸಿದೆ, ಇದು ಅವರ ಆದಾಯ ಮೂಲಕ್ಕಿಂತ ಶೇಕಡಾ 400ರಷ್ಟು ಹೆಚ್ಚಾಗಿದ್ದು ಅಕ್ರಮ ಆಸ್ತಿ ಎಂದು ಅಂದಾಜಿಸಲಾಗಿದೆ.

ಸಕಾಲ ಮಿಷನ್‌ನ ಆಡಳಿತಾಧಿಕಾರಿ ಎಲ್.ಸಿ.ನಾಗರಾಜ್ ಅವರು 10 ಕೋಟಿಯ 82 ಲಕ್ಷದ 07 ಸಾವಿರದ 660 ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದು, ಇದು ಶೇಕಡಾ 198ರಷ್ಟು ಹೆಚ್ಚಾಗಿದೆ. ಬಿಬಿಎಂಪಿ ಪ್ರೌಢಶಾಲೆಯ ಗ್ರೂಪ್-ಡಿ ನೌಕರ ಜಿವಿ ಗಿರಿ  6 ಕೋಟಿಯ 24 ಲಕ್ಷದ 03 ಸಾವಿರದ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದು ಅವರ ತಿಳಿದಿರುವ ಆದಾಯದ ಮೂಲಕ್ಕಿಂತ ಶೇಕಡಾ 563.85% ಹೆಚ್ಚಾಗಿದ್ದು ಅಕ್ರಮ ಆಸ್ತಿ ಗಳಿಕೆ ಎಂದು ಗೊತ್ತಾಗಿದೆ. 

ಎಸಿಬಿ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದು, ಆರೋಪಿ ಅಧಿಕಾರಿಗಳು ಇದೀಗ ತಾವು ನಿರಪರಾಧಿಗಳೆಂದು ಸಾಬೀತುಪಡಿಸಲು ದಾಖಲೆಗಳನ್ನು ಒದಗಿಸುವ ಮೂಲಕ ಮತ್ತು ದಾಳಿಯ ಸಮಯದಲ್ಲಿ ವಶಪಡಿಸಿಕೊಂಡ ಪ್ರತಿಯೊಂದು ಆಸ್ತಿಪಾಸ್ತಿಗಳ ಮೂಲವನ್ನು ವಿವರಿಸುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com