ರಾಜ್ಯದಲ್ಲಿ ಕೊರೋನಾ ಸ್ಫೋಟ: ಸಂಜೆ 4 ಗಂಟೆಗೆ ಸಿಎಂ ಬೊಮ್ಮಾಯಿ ಸಭೆ, ವಿಡಿಯೊ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳು ಭಾಗಿ

ರೂಪಾಂತರಿ ಕೊರೋನಾ ವೈರಸ್ ಹಲವು ದೇಶಗಳಲ್ಲಿ ಕಾಣಿಸಿಕೊಂಡು ಹಬ್ಬುವ ಸಾಧ್ಯತೆಯಿರುವುದರಿಂದ ಹಾಗೂ ರಾಜ್ಯದ ಅನೇಕ ಕಡೆಗಳಲ್ಲಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗಿ ವಕ್ಕರಿಸಿರುವ ಹಿನ್ನೆಲೆಯಲ್ಲಿ ಚರ್ಚೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳು, ತಜ್ಞರ ಸಭೆ ಕರೆದಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ(ಸಂಗ್ರಹ ಚಿತ್ರ)
ಸಿಎಂ ಬಸವರಾಜ ಬೊಮ್ಮಾಯಿ(ಸಂಗ್ರಹ ಚಿತ್ರ)

ಬೆಂಗಳೂರು: ರೂಪಾಂತರಿ ಕೊರೋನಾ ವೈರಸ್ ಹಲವು ದೇಶಗಳಲ್ಲಿ ಕಾಣಿಸಿಕೊಂಡು ಹಬ್ಬುವ ಸಾಧ್ಯತೆಯಿರುವುದರಿಂದ ಹಾಗೂ ರಾಜ್ಯದ ಅನೇಕ ಕಡೆಗಳಲ್ಲಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗಿ ವಕ್ಕರಿಸಿರುವ ಹಿನ್ನೆಲೆಯಲ್ಲಿ ಚರ್ಚೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳು, ತಜ್ಞರ ಸಭೆ ಕರೆದಿದ್ದಾರೆ.

ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಕರೆದಿದ್ದು ಅದರಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಕಳೆದೊಂದು ವಾರದಿಂದ ಕೋವಿಡ್ ಕಾಣಿಸಿಕೊಂಡಿರುವ ಜಿಲ್ಲೆಗಳು ಸೇರಿದಂತೆ ರಾಜ್ಯದ 7 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಬಿಬಿಎಂಪಿಯ ಮುಖ್ಯ ಆಯುಕ್ತರು, ಆರೋಗ್ಯ ಇಲಾಖೆ ಆಯುಕ್ತರು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರು, ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದು ಕೋವಿಡ್ 3ನೇ ಅಲೆ ಏಳುವ ಸಾಧ್ಯತೆ ನಿಚ್ಛಳವಾಗಿರುವುದರಿಂದ ಉಲ್ಬಣವಾಗದಂತೆ ಕ್ರಮ ಕೈಗೊಳ್ಳಲು ಇಂದಿನ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆಯಿದೆ. ಅಧಿಕಾರಿಗಳು, ತಜ್ಞರ ಜೊತೆ ಚರ್ಚೆ ನಡೆಸಿ ನಿರ್ಧಾರ ಕೈಗೊಂಡು ಜನತೆಗೆ ತಿಳಿಸುತ್ತೇನೆ ಎಂದು ಸಿಎಂ ಮಾಧ್ಯಮ ಪ್ರತಿನಿಧಿಗಳಿಗೆ ಇಂದು ತಿಳಿಸಿದ್ದಾರೆ.

ಸಿಎಂ ಇಂದು ಹೇಳಿದ್ದೇನು? ರಾಜ್ಯದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಪ್ರದೇಶ, ಧಾರವಾಡ, ಮೈಸೂರುಗಳಲ್ಲಿ ಕಾಲೇಜುಗಳಲ್ಲಿ, ಹಾಸ್ಟೆಲ್ ಗಳಲ್ಲಿ ಕೋವಿಡ್ ಉಲ್ಬಣವಾಗುತ್ತಿರುವುದನ್ನು ಗಮನಿಸಿ ಮತ್ತು ಕೇರಳ ರಾಜ್ಯದಲ್ಲಿ ಕೋವಿಡ್ ಶಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅತಿ ಶೀಘ್ರದಲ್ಲಿಯೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಇವತ್ತು ಸಾಯಂಕಾಲ ಸಭೆ ಏರ್ಪಡಿಸಲಾಗುತ್ತಿದೆ.

ಸಭೆಯಲ್ಲಿ ಆರೋಗ್ಯ ಇಲಾಖೆ, ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ತಜ್ಞರನ್ನು ಕರೆದು ರೂಪಾಂತರಿ ಒಮೈಕ್ರಾನ್ ಬಂದಿರುವ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಭೆ ಮಾಡಲಾಗುತ್ತಿದೆ. ಸಭೆಯ ನಂತರ ಏನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂದು ರಾಜ್ಯದ ಜನರಿಗೆ ತಿಳಿಸುತ್ತೇನೆ ಎಂದರು.

ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ದೆಹಲಿ ಮೂಲದ ಯುವತಿ ಮಾಡಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ವಿವರಗಳನ್ನು ಪಡೆಯುತ್ತೇನೆ, ಅದಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆಯವರು ಕ್ರಮ ಕೈಗೊಳ್ಳುತ್ತಾರೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com