ರಾಜ್ಯದ ಅಲ್ಲಲ್ಲಿ ಮತ್ತೆ ಕೊರೋನಾ ಹೆಚ್ಚಳ, ಕಟ್ಟೆಚ್ಚರ ವಹಿಸಲು ತಜ್ಞರ ಸಲಹೆ
ರಾಜ್ಯದ ಅಲ್ಲಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಳ್ಳುತ್ತಿದ್ದು, ಸೋಂಕು ಮತ್ತೆ ರಾಜ್ಯದತ್ತ ಒಕ್ಕರಿಸುತ್ತಿದೆಯೇ ಎಂಬ ಸಂಶಯ ಬರುತ್ತಿದೆ. ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ಸೋಂಕು ವ್ಯಾಪಕವಾಗಿ ಹರಡದಂತೆ ಕ್ರಮ ಕೈಗೊಳ್ಳಲು ಮುಂದಾಗಿವೆ.
Published: 27th November 2021 08:02 AM | Last Updated: 27th November 2021 01:35 PM | A+A A-

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಲ್ಲಿ ವಲಸೆ ಕಾರ್ಮಿಕರೊಬ್ಬರನ್ನು ಪರೀಕ್ಷಿಸುತ್ತಿರುವುದು
ಬೆಂಗಳೂರು: ರಾಜ್ಯದ ಅಲ್ಲಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಳ್ಳುತ್ತಿದ್ದು, ಸೋಂಕು ಮತ್ತೆ ರಾಜ್ಯದತ್ತ ಒಕ್ಕರಿಸುತ್ತಿದೆಯೇ ಎಂಬ ಸಂಶಯ ಬರುತ್ತಿದೆ. ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ಸೋಂಕು ವ್ಯಾಪಕವಾಗಿ ಹರಡದಂತೆ ಕ್ರಮ ಕೈಗೊಳ್ಳಲು ಮುಂದಾಗಿವೆ.
ಕೋವಿಡ್ ಪರೀಕ್ಷಾ ವಿಧಾನವನ್ನು ಬದಲಿಸಲು ಅಧಿಕಾರಿಗಳು ಮುಂದಾಗಿದ್ದರೆ ಸೋಂಕಿತರಿಂದ ಪಡೆದ ಸ್ಯಾಂಪಲ್ ನ್ನು ತೆಗೆದುಕೊಂಡು ಹಿಂದಿನ ಡೆಲ್ಟಾ ರೂಪಾಂತರಿಯೇ ಅಥವಾ ಹೊಸ ರೂಪಾಂತರಿಯೇ ಎಂದು ಪರೀಕ್ಷಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ಡಿ ರಂದೀಪ್, ಕೋವಿಡ್ ಕ್ಲಸ್ಟರ್ ಸಾಮಾನ್ಯವಾಗಿದೆ. ರಾಜ್ಯದಲ್ಲಿ ಇಂತಹ ಏಳು ಕ್ಲಸ್ಟರ್ ಗಳಿವೆ. ಆದರೆ ಈ ಕ್ಲಸ್ಟರ್ ಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಬಗ್ಗೆ ಮತ್ತೆ ಆತಂಕವುಂಟುಮಾಡುವಂತೆ ಮಾಡಿದೆ ಎಂದರು.
ಜನದಟ್ಟಣೆ ಸೇರುವುದು, ಹಾಸ್ಟೆಲ್ ಗಳಲ್ಲಿ ವಾಸ ಮತ್ತು ಜನರ ಪ್ರಯಾಣ ಮೊದಲಾದವು ಕಾರಣವಾಗಿರುತ್ತದೆ. ಬೆಂಗಳೂರಿನ ಸ್ಪೂರ್ತಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಯಾಣ ಮಾಡಿದ ಅಥವಾ ಸಭೆ-ಸಮಾರಂಭ-ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾದ ಬಗ್ಗೆ ವರದಿಗಳಿಲ್ಲ. ಧಾರವಾಡದ ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವುದು, ಬೆಂಗಳೂರಿನ ಬೊಮ್ಮಸಂದ್ರ ಶಾಲೆ, ಮೈಸೂರಿನಲ್ಲಿ ಕಾಣಿಸಿಕೊಂಡಿರುವುದು ರಾಜ್ಯದಲ್ಲಿ ಕೋವಿಡ್ ಮತ್ತೆ ವಕ್ಕರಿಸುವ ಸೂಚನೆಯಾಗಿದ್ದು ತೀವ್ರ ಕಟ್ಟೆಚ್ಚರ ವಹಿಸಲು ಎಚ್ಚರಿಕೆಯ ಗಂಟೆಯಾಗಿದೆ.
ಧಾರವಾಡದಲ್ಲಿ ಹೊಸ ಪ್ರಕರಣಗಳು: ಪಾಸಿಟಿವ್ ಎಂದು ಪರೀಕ್ಷಿಸಿದ ವಿದ್ಯಾರ್ಥಿಗಳು ಬಿಎಸ್ಸಿ ಮೊದಲ ವರ್ಷದಲ್ಲಿದ್ದು, ಹಾಸ್ಟೆಲ್‌ನಲ್ಲಿಯೇ ಇದ್ದಾರೆ. ಅಂತಿಮ ವರ್ಷದಲ್ಲಿರುವ ಉಳಿದ ವಿದ್ಯಾರ್ಥಿಗಳು ತಮ್ಮ ಅಂತಿಮ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಯಾರಿಗಾದರೂ ರೋಗಲಕ್ಷಣಗಳು ಕಂಡುಬಂದರೆ, ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ತೆಗೆದುಕೊಳ್ಳಲು ಅನುಮತಿಸಲಾಗುವುದು ಎಂದು ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಜಿಎ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಶುರುವಾದ ಕೊರೋನಾ ಆರ್ಭಟ: ಮೈಸೂರಿನಲ್ಲಿ 50ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್!
ಧಾರವಾಡ ಕ್ಲಸ್ಟರ್‌ನಲ್ಲಿ ಕಳೆದ ಮೂರು ದಿನಗಳಿಂದ 1,500 ಪರೀಕ್ಷೆಗಳನ್ನು ನಡೆಸಿದ ನಂತರ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ನಿನ್ನೆ 138 ಹೊಸ ಪ್ರಕರಣಗಳು ವರದಿಯಾಗಿವೆ. ಮೊನ್ನೆ ನವೆಂಬರ್ 17 ರಂದು ಎಸ್ ಡಿಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು ಮತ್ತು ಸಿಬ್ಬಂದಿ ಕ್ಯಾಂಪಸ್‌ನಲ್ಲಿರುವ ಫಂಕ್ಷನ್ ಹಾಲ್‌ನಲ್ಲಿ ನಡೆದ ಫ್ರೆಶರ್ಸ್ ಡೇ ಸಮಾರಂಭದಲ್ಲಿ ಭಾಗವಹಿಸಿದ ನಂತರ ಕೋವಿಡ್ ಸೋಂಕು ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಣ್ಗಾವಲು: ಹೊಸ ಕೋವಿಡ್ ರೂಪಾಂತರ, B.1.1529, ಬೋಟ್ಸ್ವಾನಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದೆ, ರಾಜ್ಯ ಸರ್ಕಾರವು ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಣ್ಗಾವಲು ಹೆಚ್ಚಿಸುತ್ತಿದೆ. ಮೂರು ಅಂಶಗಳ ಕಾರ್ಯತಂತ್ರವನ್ನು ಅನುಸರಿಸಲಾಗುತ್ತದೆ: ಪ್ರಯಾಣಿಕರು ಮತ್ತು ಅವರ ಸಂಪರ್ಕಗಳ ಸ್ಕ್ರೀನಿಂಗ್ ಮತ್ತು ಪರೀಕ್ಷೆ, ವಾಡಿಕೆಯ ಸೆಂಟಿನೆಲ್ ಕಣ್ಗಾವಲು, ಗೊತ್ತುಪಡಿಸಿದ INSACOG ಜೀನೋಮಿಕ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳಿಗೆ RT-PCR ಪಾಸಿಟಿವ್ ಮಾದರಿಗಳನ್ನು ಸಮಯಕ್ಕೆ ಕಳುಹಿಸುವುದು ಇದಾಗಿದೆ.