ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ ಕೋಟ್ಪಾ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆ: ಬಿಎಂಸಿಆರ್‌ಐ ಸಮೀಕ್ಷೆ

ಡಿಎಸ್ಎ ಸ್ಥಾಪನೆಯಲ್ಲಿ ಕೋಟ್ಪಾ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆಯಾಗಿರುವುದು ಪತ್ತೆಯಾಗಿದೆ.
ತಂಬಾಕು ಉತ್ಪನ್ನ (ಸಂಗ್ರಹ ಚಿತ್ರ)
ತಂಬಾಕು ಉತ್ಪನ್ನ (ಸಂಗ್ರಹ ಚಿತ್ರ)

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ (Smoke-Free Rules 2008) 13ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸರ್ಕಾರೇತರ ಸಂಸ್ಥೆಗಳು ನಡೆಸಿರುವ ಸಮೀಕ್ಷೆಯಲ್ಲಿ ಡಿಎಸ್ಎ ಸ್ಥಾಪನೆಯಲ್ಲಿ ಕೋಟ್ಪಾ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆಯಾಗಿರುವುದು ಪತ್ತೆಯಾಗಿದೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್ ಐ) ಮತ್ತು ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆ ಮಾಯಾ (MAYA - Movement for Youth Awareness and Alternatives) ಬೆಂಗಳೂರು ನಗರದಲ್ಲಿ ನಿರ್ದಿಷ್ಟ ಧೂಮಪಾನ ಪ್ರದೇಶಗಳ (ಡಿಎಸ್ಎ) ಈ ಕುರಿತು ಸಮೀಕ್ಷಾ ವರದಿ ಬಿಡುಗಡೆ ಮಾಡಿವೆ.

ಕೇವಲ ಶೇ. 1.9 ರಷ್ಟು ಡಿಎಸ್‌ಎಗಳು ಬಿಬಿಎಂಪಿ ನಿರಾಕ್ಷೇಪಣಾ ಪ್ರಮಾಣಪತ್ರ ಹೊಂದಿರುದು ಈ ಸಮೀಕ್ಷಾ ವರದಿಯ ಮೂಲಕ ಬಹಿರಂಗಗೊಂಡಿದೆ.

ಸಮೀಕ್ಷೆ ನಡೆಸಿದ ಸ್ಥಳಗಳ ಪೈಕಿ, ಶೇ. 86.6 ರಷ್ಟು ಸ್ಥಳಗಳ ಮಾಲೀಕರಿಗೆ ಧೂಮಪಾನ ಮಾಡಲು ಡಿಎಸ್ಎಗಳನ್ನು ಕೋಟ್ಪಾ ಅನ್ವಯ ಸ್ಥಾಪಿಸಬೇಕೆಂದು ಬಿಬಿಎಂಪಿ ಹೊರಡಿಸಿರುವ ಆದೇಶದ ಬಗ್ಗೆ ಅರಿವಿರಲಿಲ್ಲ.

ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ (ಕೋಟ್ಪಾ) ಅನ್ವಯ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲ. 30ಕ್ಕಿಂತ ಹೆಚ್ಚು ಆಸನಗಳನ್ನು ಹೊಂದಿರುವ ಎಲ್ಲ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ ಗಳು ತಮ್ಮ ಆವರಣದಲ್ಲಿ ಧೂಮಪಾನಕ್ಕೆ ಅನುವುಮಾಡಿಕೊಡಲು ನಿರ್ದಿಷ್ಟ ಧೂಮಪಾನ ಪ್ರದೇಶವನ್ನು ಸ್ಥಾಪಿಸಬೇಕು. ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿರುವುದು, ಧೂಮಪಾನದ ಹೊಗೆ ಇತರೆಡೆ ಹಬ್ಬದಂತೆ ಹೊರಹಾಕುವ ಎಗ್ಸಾಸ್ಟ್ ಫ್ಯಾನ್ ಅಳವಡಿಸುವುದು ಸೇರಿದಂತೆ ಡಿಎಸ್ಎಗಳು ನಾಲ್ಕು ಬದಿಗಳಲ್ಲಿ ಸಂಪೂರ್ಣ ಎತ್ತರದ ಗೋಡೆಗಳಿಂದ ಆವೃತವಾಗಿರಬೇಕೆಂಬ ನಿಬಂಧನೆಗಳಿವೆ. ಅಲ್ಲದೆ, ಆಗಮನ ಮತ್ತು ನಿರ್ಗಮನ ದ್ವಾರದ ಬಳಿ ಡಿಎಸ್ಎ ಇರಬಾರದು, ಅಲ್ಲಿ ಯಾವುದೇ ಸೇವೆ  ಒದಗಿಸಬಾರದು ಮತ್ತು ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಅದು ಧೂಮಪಾನ ಪ್ರದೇಶ ಎಂದು ಬರೆದಿರಬೇಕು ಎಂದೂ ಕಾಯ್ದೆ ಹೇಳುತ್ತದೆ.

ಈ ಸಮೀಕ್ಷೆಯು ಮೂಲತಃ ಡಿಎಸ್ಎಗೆ ಸಂಬಂಧಿಸಿದ ಪ್ರಮುಖ ನಿಯಮಗಳತ್ತ ಗಮನ ಹರಿಸಿದೆ. ಸಮೀಕ್ಷೆಯಲ್ಲಿ ಪ್ರಾಥಮಿಕವಾಗಿ ಹೋಟೆಲ್‌ಗಳಲ್ಲಿ ಧೂಮಪಾನ, ಡಿಎಸ್‌ಎ ಸ್ಥಾಪನೆ ಮತ್ತು ಬಿಬಿಎಂಪಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಸಲ್ಲಿತ/ಅನುಮೋದಿತ/ತಿರಸ್ಕೃತ), ಈ ಅಂಶಗಳನ್ನು ಗಮನಿಸಲಾಗಿದೆ. ಬೆಂಗಳೂರಿನ ಆಯ್ದ ಎರಡು ಪ್ರದೇಶಗಳಾದ ಜಯನಗರ ಮತ್ತು ಇಂದಿರಾನಗರಗಳಲ್ಲಿ ಸಮೀಕ್ಷೆಯನ್ನು ಕೈಗೊಳ್ಳಲಾಯಿತು. ಸಮೀಕ್ಷೆಗೆ ಅಗತ್ಯವಾದ ಹೆಚ್ಚಿನ ಸಂಖ್ಯೆಯ ಜನ ಮತ್ತು ಸಾರ್ವಜನಿಕ ಸ್ಥಳಗಳೆರಡೂ ಈ ಎರಡು ವಲಯಗಳಲ್ಲೆ ಇರುವುದರಿಂದ ಈ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಸಮೀಕ್ಷೆಗೆ ನಿಗದಿಪಡಿಸಿದ ಸ್ಥಳಗಳಿಗೆ ನಿರ್ದಿಷ್ಟ ಸಮಯದಲ್ಲಿ, ಸಾಮಾನ್ಯವಾಗಿ ಸಂಜೆ 4 ರಿಂದ ರಾತ್ರಿ 8 ರ ನಡುವೆ, ಭೇಟಿ ನೀಡಲಾಗುತ್ತಿತ್ತು.

ಸಮೀಕ್ಷೆಯ ಪ್ರಮುಖಾಂಶಗಳು:
● ಅರ್ಹ ಸ್ಥಳಗಳ ಪೈಕಿ ಶೇ. 9.5 ರಷ್ಟು ಸ್ಥಳಗಳಲ್ಲಿ ಡಿಎಸ್ಎ ಸ್ಥಾಪನೆಯಾಗಿರುವುದು ಕಂಡುಬಂದಿದೆ. 

● ಒಳಾಂಗಣ ಡಿಎಸ್ಎಗಳಲ್ಲಿ ಶೇ. 20 ರಷ್ಟು ಶಿಫಾರಸು ಮಾಡಲಾದ ಮಾನದಂಡಗಳನ್ನು ಪಾಲಿಸುತ್ತಿವೆ.

● ಸಮೀಕ್ಷೆಯ ಸಂದರ್ಭದಲ್ಲಿ ಶೇ. 1.9 ರಷ್ಟು ಸ್ಥಳಗಳು ಬಿಬಿಎಂಪಿಯಿಂದ ನಿರಾಕ್ಷೇಪಣಾ ಪತ್ರ ಹೊಂದಿತ್ತು.

● ಶೇ. 29.4 ರಷ್ಟು ಸ್ಥಳಗಳಲ್ಲಿ ಒಳಾವರಣದಲ್ಲೇ ಧೂಮಪಾನಕ್ಕೆ ಅವಕಾಶ ನೀಡಿರುವುದು ಕಂಡುಬಂದಿದೆ.

● ಬಿಬಿಎಂಪಿಯ ಡಿಎಸ್ಎ ಆದೇಶದ ಬಗ್ಗೆ ಶೇ. 86.6 ರಷ್ಟು ಸ್ಥಳಗಳಲ್ಲಿ ಅರಿವಿರಲಿಲ್ಲ.

● ಧೂಮಪಾನ ನಿಷೇಧ ಫಲಕ ಕಂಡುಬಂದಿದ್ದು ಶೇ. 10.5 ರಷ್ಟು ಸ್ಥಳಗಳಲ್ಲಿ ಮಾತ್ರ.

“ಬಿಬಿಎಂಪಿಯಿಂದ ನಿರಾಕ್ಷೇಪಣಾ ಪತ್ರ ಪಡೆದು ಡಿಎಸ್‌ಎ ಮಾನದಂಡಗಳ ಪಾಲನೆ ಮಾಡುತ್ತಿರುವುದು ಕಂಡುಬಂದದ್ದು ಕೇವಲ ಶೇ. 1.9 ರಷ್ಟು ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಾತ್ರ. ಸುಮಾರು ಎರಡು ದಶಕಗಳಿಂದ ಕೋಟ್ಪಾ ಕಾಯ್ದೆ ಅಸ್ತಿತ್ವದಲ್ಲಿದ್ದರೂ ಗಮನಾರ್ಹ ಸಂಖ್ಯೆಯಲ್ಲಿ ಕಾನೂನಿನ ಉಲ್ಲಂಘನೆ ಆಗುತ್ತಿರುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಕೂಡಲೇ ಈ ಕುರಿತು ಕ್ರಮಕೈಗೊಂಡು ಕಾನೂನನ್ನು ಕಟ್ಟುನಿಟ್ಟಾಗಿ  ಜಾರಿಗೊಳಿಸಬೇಕಾದ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ. 50ಕ್ಕೂ ಹೆಚ್ಚು ಬಗೆಯ ವಿವಿಧ ರಾಸಾಯನಿಕಗಳನ್ನು ಹೊಂದಿರುವ ತಂಬಾಕು ಬಳಕೆದಾರರು ಮತ್ತು ಪರೋಕ್ಷ ಧೂಮಪಾನಿಗಳ ಅಂಗಾಂಶಗಳ ಮೇಲೆ ಕ್ಯಾನ್ಸರ್ ಕಾರಕ ಪರಿಣಾಮಗಳನ್ನು ಬೀರುತ್ತದೆ,” ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಮ್ಯುನಿಟಿ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ, ಡಾ. ರಂಗನಾಥ್ ಟಿ. ಎಸ್, ಹೇಳಿದರು.

“ಡಿಎಸ್‌ಎ ನಿಯಮಗಳ ಜಾರಿ ಮತ್ತು ನಗರದ ಹೋಟೆಲ್‌, ಬಾರ್, ರೆಸ್ಟೋರೆಂಟ್‌, ಪಬ್‌ ಮತ್ತು ಕ್ಲಬ್‌ಗಳಲ್ಲಿ ಡಿಎಸ್‌ಎ ನಿಯಮಗಳ ಪಾಲನೆಯನ್ನು ಹೆಚ್ಚಿಸುವುದು ನಮ್ಮ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ. ಬಿಬಿಎಂಪಿ, ಅಬಕಾರಿ, ಪೊಲೀಸ್, ಹೀಗೆ ವಿವಿಧ ಇಲಾಖೆಗಳ ಸಂಘಟಿತ  ಪ್ರಯತ್ನದ ಮೂಲಕ ಇದನ್ನು ಸಾಧಿಸಬಹುದಾಗಿದೆ. ಅಲ್ಲದೆ, ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಾಗುತ್ತಿರುವ ಸ್ಪಷ್ಟ ಉಲ್ಲಂಘನೆಗಳನ್ನು ಪರಿಗಣಿಸಿ, ಸರ್ಕಾರ ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರಬೇಕು. ಹಾಗೇ, ಡಿಎಸ್ಎ ಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಪರೋಕ್ಷ ಧೂಮಪಾನಿಗಳ ಆರೋಗ್ಯವನ್ನು ಉಳಿಸಬೇಕು,” ಎಂದು ಬೆಂಗಳೂರು ಮೂಲದ ಎನ್ ಜಿಒ  ಮಾಯಾದ ಸಿಇಒ ಅಲೆಕ್ಸ್ ರೊಡ್ರಿಗಸ್ ಹೇಳಿದರು.

ಖ್ಯಾತ ಕ್ಯಾನ್ಸರ್ ತಜ್ಞ ಹಾಗು ತಂಬಾಕು ಮುಕ್ತ ಕರ್ನಾಟಕ ಒಕ್ಕೂಟದ (ಸಿಎಫ್ ಟಿಎಫ್ ಕೆ) ಸಲಹೆಗಾರರೂ ಆದ ಡಾ. ರಮೇಶ್ ಬಿಳಿಮಗ್ಗ ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರಲು ಮತ್ತು ಡಿಎಸ್ಎಗಳನ್ನು ಸ್ಥಾಪಿಸಲು ಅನುವುಮಾಡಿಕೊಡುವ ನಿಬಂಧನೆಯನ್ನು ತೆಗೆದುಹಾಕಲು ಒತ್ತಾಯಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com