ದತ್ತ ಪೀಠಕ್ಕೆ ಅರ್ಚಕರ ನೇಮಕಾತಿ ಕುರಿತು ಚರ್ಚಿಸಲು ಸಂಪುಟ ಉಪಸಮಿತಿ ರಚನೆ: ಸಚಿವ ಮಾಧುಸ್ವಾಮಿ

ಕರ್ನಾಟಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ಗಳು ನಬಾರ್ಡ್​ ಮೂಲಕ ಪುನರ್ಧನ ಪಡೆಯಲು 1550 ಕೋಟಿ ರೂ. ಖಾತ್ರಿಯನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮೈಷುಗರ್ ಕಾರ್ಖಾನೆ
ಮೈಷುಗರ್ ಕಾರ್ಖಾನೆ

ಬೆಂಗಳೂರು: ಕರ್ನಾಟಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ಗಳು ನಬಾರ್ಡ್​ ಮೂಲಕ ಪುನರ್ಧನ ಪಡೆಯಲು 1550 ಕೋಟಿ ರೂ. ಖಾತ್ರಿಯನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರು ಮಂಗಳವಾರ ಹೇಳಿದ್ಧಾರೆ.

ಇಂದು ಸಂಪುಟ ಸಭೆ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಧುಸ್ವಾಮಿ, ಕರ್ನಾಟಕ ರಾಜ್ಯ ಪೊಲೀಸ್ ಲಿಪಿಕ ಸೇವೆಗಳನ್ನೊಳಗೊಂಡಂತೆ (ನೇಮಕಾತಿ, ತಿದ್ದುಪಡಿ) ನಿಯಮಗಳು 2021ಕ್ಕೆ ಅನುಮೋದನೆ ನೀಡಲಾಗಿದೆ. ಇದರ ಪ್ರಕಾರ ಒಂದು ಕೇಡರ್​ನಿಂದ ಮತ್ತೊಂದು ಕೇಡರ್​ಗೆ ಪ್ರಮೋಷನ್​ ಆಗಲು ಏಂಟು ವರ್ಷ ಕೆಲಸ ನಿರ್ವಹಿಸಬೇಕು. ಇದು ಲಭ್ಯವಿಲ್ಲದ ಅಭ್ಯರ್ಥಿಗಳಿಗೆ ಐದು ವರ್ಷ ಕೆಲಸ ಮಾಡಿದ್ರೆ ಪ್ರಮೋಷನ್​​ ಸಿಗುತ್ತಿತ್ತು. ಇದೀಗ ಇದನ್ನು ನಾಲ್ಕು ವರ್ಷಕ್ಕೆ ಇಳಿಸಲಾಗಿದೆ. ಈ ನಿಯಮ ಪಿಸಿಯಿಂದ ಹಿಡಿದು ಎಸ್​ಐವರೆಗೂ ಎಲ್ಲಾರಿಗೂ ಅನ್ವಯವಾಗಲಿದೆ ಎಂದರು.

ಹಾನಗಲ್​ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಅನ್ವಯವಾಗುವ ಬಗ್ಗೆ ಕ್ಯಾಬಿನೆಟ್​ ಗಮನಕ್ಕೆ ತರಲಾಗಿದೆ. ಇನ್ನೂ ಲೋಕಾಯುಕ್ತ ಸಂಸ್ಥೆಯಲ್ಲಿ ಲೆಕ್ಕಪರಿಶೋಧನಾಧಿಕಾರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್​ ಮತ್ತು ಜಯರಾಮಯ್ಯ​​ ಅವರಿಗೆ ಮತ್ತೊಂದು ವರ್ಷ ಮುಂದುವರೆಯಲು ಸೂಚಿಸಲಾಗಿದೆ.

ಬೆಂಗಳೂರು ನಗರಕ್ಕೆ 2020-21ನೇ ಸಾಲಿನಲ್ಲಿ ಪೊಲೀಸ್​​ ಆಧುನೀಕರಣ ಯೋಜನೆ ಅಡಿಯಲ್ಲಿ ಡಿಜಿಟಲ್ ರೇಡಿಯೊ ಸಂಪರ್ಕ ವ್ಯವಸ್ಥೆಯ ವಿನ್ಯಾಸ, ಸರಬರಾಜು, ಅಳವಡಿಕೆ ಮತ್ತು ನಿರ್ವಹಣೆ ಕಾರ್ಯವನ್ನು ಒಟ್ಟು 14.65 ಕೋಟಿಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾರ್‌ಲ್ಯಾಂಡ್ ಯೋಜನೆ ಅನುಷ್ಠಾನ ಮಾಡಲಾಗುತ್ತಿದ್ದು, ಮೈನರ್​ ಇರಿಗೇಷನ್​ ಡಿಪಾರ್ಟ್​ಮೆಂಟ್​ ಅಡಿಯಲ್ಲಿ ಬಜೆಟ್​ನಲ್ಲಿ 1500 ಕೋಟಿ ರೂ. ಇಡಲಾಗಿದೆ. ಈ ವರ್ಷ 300 ಕೋಟಿ ರೂ. ಗೆ ಆಡಳಿತಾತ್ಮಕ ಅನುಮೋದನೆಯನ್ನು ಕ್ಯಾಬಿನೆಟ್​​ ನೀಡಿದೆ. ಸಮುದ್ರದ ಕಡೆಯಿಂದ ಉಪ್ಪು ನೀರು ತಡೆಯುವ ಯೋಜನೆ ಇದಾಗಿದೆ ಎಂದು ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಖಾನಾಪುರ ತಾಳಗುಪ್ಪ ರಾಜ್ಯ ಹೆದ್ದಾರಿ-93ರ ಚೈನೇಜ್ 145.00 ರಿಂದ 150.00 ಕಿ.ಮೀ.ನಲ್ಲಿ ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ 15 ಕೋಟಿ ರೂ.ಗಳ ಅಂದಾಜು ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬೆಳಗಾವಿಯ ಸವದತ್ತಿಯಲ್ಲಿ 32 ಎಕರೆ ಜಮೀನನ್ನು ವಿಂಡ್​ ಪವರ್​ ಯೋಜನೆಗಾಗಿ ರೋಹನ್ ಸೋಲಾರ್ ಪವರ್ ಪ್ರೈವೇಟ್ ಲಿಮಿಟೆಡ್‌ಗೆ 30 ವರ್ಷಕ್ಕೆ ಲೀಜ್​ ನೀಡಲಾಗಿದೆ.

ಇನ್ನೂ ಸಂಧ್ಯಾ ಸುರಕ್ಷಾ ಯೋಜನೆ ಅಡಿಯಲ್ಲಿ 60 ವರ್ಷ ಮತ್ತು 65 ವರ್ಷ ಮೇಲ್ಪಟ್ಟವರಿಗೆ 600 ರೂ.ಹಾಗೂ 1000 ರೂ. ಹಣ ನೀಡಲಾಗುತ್ತಿತ್ತು. ಇದೀಗ ಇದರ ಮೊತ್ತವನ್ನು ರಾಜ್ಯ ಸರ್ಕಾರ 200 ರೂ. ಹೆಚ್ಚಿಸಲಾಗಿದ್ದು, 600 ಬದಲಿಗೆ ಇನ್ಮುಂದೆ 800 ರೂ. ಹಾಗೂ 1000 ರೂ. ತೆಗೆದುಕೊಳ್ಳುತ್ತಿದ್ದವರಿಗೆ 1200 ರೂ. ಸಿಗಲಿದೆ. ಸುಮಾರು 36 ಲಕ್ಷ ಜನರಿಗೆ ಈ ಯೋಜನೆಯಿಂದ ಸಹಾಯವಾಗಲಿದೆ. ಇದಕ್ಕೆ ಇಂದು ಕ್ಯಾಬಿನೆಟ್​​ನಲ್ಲಿ ಅನುಮೋದನೆ ನೀಡಿದೆ.

ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿರುವ ಮಕ್ಕಳಿಗೆ ಶುಚಿ ಸರ್ವೀಸ್​ ಕಿಟ್​​ ನೀಡಲು ಮೈಸೂರು ಸೋಪ್ಸ್​​ ಆ್ಯಂಡ್​​ ಡಿಟರ್​ಜಂಟ್ಸ್​​​​ ಅವರಿಗೆ 24.8 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಕಿಟ್​​ ಸೋಪು, ಪೌಡರ್,​ ಹೇರ್​ ಆಯಿಲ್​ನನ್ನು ಒಳಗೊಂಡಿರುತ್ತದೆ.​

ಹಿಪ್ಪರಗಿ ಬ್ಯಾರೇಜ್​ ಎಡಭಾಗದಲ್ಲಿ ಪ್ರವಾಹದಿಂದಾಗಿ ರಸ್ತೆ ಪಕ್ಕ ಕೊರಕಲು ಶುರುವಾಗಿದ್ದು, ಇದನ್ನು ತಡೆಯಲು ಪ್ರೋಟೆಕ್ಷನ್​ ವಾಲ್​ ನಿರ್ಮಾಣ ಮಾಡಲು 28.2 ಕೋಟಿ ರೂ. ಅನುದಾನ ನೀಡಲಾಗಿದೆ. ಕರ್ನಾಟಕ ವಿಧಾನಸಭೆ ಮತ್ತು ವಿಧಾನಪರಿಷತ್​ನ್ನು ಪ್ರಲೋಕ್​​​ ಮಾಡೋ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮಂಡ್ಯ ಶುಗರ್​ ಫ್ಯಾಕ್ಟರಿಯನ್ನು ಖಾಸಗಿಯವರಿಗೆ ನೀಡಬೇಕೋ ಅಥವಾ ಸರ್ಕಾರ ಇಟ್ಟುಕೊಳ್ಳಬೇಕಾ ಎಂಬುದನ್ನು ಚರ್ಚಿಸಲು ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯ ವರದಿ ನೋಡಿಕೊಂಡು ತೀರ್ಮಾನ ಮಾಡಲಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ಧಾರೆ.

ದತ್ತ ಪೀಠಕ್ಕೆ ಅರ್ಚಕರ ನೇಮಕಾತಿ ವಿಚಾರವಾಗಿ ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆ ಸರ್ಕಾರದ ಮುಂದಿನ ನಡೆಯ ಕುರಿತಾಗಿ ಚರ್ಚಿಸಲು ಸಂಪುಟ ಉಪಸಮಿತಿ ರಚನೆಗೆ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ‌ಕಾನೂನು ಸಚಿವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ ಮಾಡಲಾಗಿದ್ದು, ಸಚಿವರಾದ ಆರ್ ‌ಅಶೋಕ್, ಸುನಿಲ್ ಕುಮಾರ್ ಹಾಗೂ ಶಶಿಕಲಾ ಜೊಲ್ಲೆ ಸಮಿತಿಯ ಸದಸ್ಯರಾಗಿ ಇರಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com